1,472 ದಿನಗಳ ಬಳಿಕ WWEಗೆ 'ದಿ ಅಂಡರ್​​ಟೆಕ್ಕರ್'​! ಬೀಸ್ಟ್​ ಬದಲಿಗೆ ದಿಗ್ಗಜ?

Untitled design (1)
Published on

ನ್ಯೂಯಾರ್ಕ್​: ಟೆಲಿವಿಷನ್​ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಹಾಗೂ ಹೆಚ್ಚಿನ ಅವಧಿಯವರೆಗೂ ವೀಕ್ಷಿಸಲ್ಪಟ್ಟ ಕ್ರೀಡಾ ಕಾರ್ಯಕ್ರಮ ಎಂದರೆ ಅದು ಡಬ್ಲ್ಯೂಡಬ್ಲ್ಯೂಇ! (WWE) ಈ ಒಂದು ಕುಸ್ತಿ ಮನರಂಜನಾ ಕಾರ್ಯಕ್ರಮವನ್ನು ನೋಡುವವರ ಸಂಖ್ಯೆ ಇಂದಿಗೂ ಅಧಿಕವಾಗಿಯೇ ಇದೆ. ಅಮೆರಿಕಾದಲ್ಲಿ ನಡೆಯುವ ಡಬ್ಲ್ಯೂಡಬ್ಲ್ಯೂಇ ಸ್ಪೋರ್ಟ್ಸ್​​ ಎಂಟರ್​ಟೈನ್​ಮೆಂಟ್​ ಇಸ್ಟರಿಯಲ್ಲೇ ಸಿಕ್ಕಾಪಟ್ಟೆ ಗಮನ ಸೆಳೆದ ಕ್ರೀಡೆಯಾಗಿದೆ. ಜಾಗತಿಕವಾಗಿ ನೋಡುವ ಈ ಪ್ರೋಗ್ರಾಮ್​ಗೆ ದೊಡ್ಡ ಅಭಿಮಾನಿ ಬಳಗವೇ ಇದೆ ಎಂಬುದು ನಿಜಕ್ಕೂ ಆಶ್ಚರ್ಯಕರ ಸಂಗತಿ.

ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರು ಕುಳಿತು ನೋಡುವ ಈ ಕುಸ್ತಿ ಕಾರ್ಯಕ್ರಮ ಹೆಚ್ಚಾಗಿ ಯುವಕರನ್ನು ಸೆಳೆಯುತ್ತಿದೆ. ಜಾನ್​ ಸೀನಾ, ರಾಂಡಿ ಆರ್ಟನ್​, ಸಿಎಂ ಪಂಕ್, ಬಟೀಸ್ಟಾ, ದೀ ರಾಕ್, ಸ್ಟೋನ್ ಕೋಲ್ಡ್​ ಸ್ಟೀವ್​ ಆಸ್ಟನ್ ಸೇರಿದಂತೆ​ ಇಂತಹ ಅನೇಕ ಡಬ್ಲ್ಯೂಡಬ್ಲ್ಯೂಇ ಸೂಪರ್​ಸ್ಟಾರ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅನುಸರಿಸುವ ಅಭಿಮಾನಿಗಳು, ಅವರ ಕುಸ್ತಿ ಪಂದ್ಯವನ್ನು ನೋಡಲು ಬಹಳ ಉತ್ಸುಕರಾಗಿರುತ್ತಾರೆ. ಈ ಎಲ್ಲಾ ಸೂಪರ್​ ಫೈಟರ್ಸ್​ಗಳನ್ನು ಮೀರಿಸಿ, ಸೋಲನ್ನು ಹೆಚ್ಚಾಗಿ ಕಾಣದ ದಿಗ್ಗಜ ಎಂದರೆ ಅದು ದಿ ಅಂಡರ್​ಟೆಕ್ಕರ್​.

ಅಂಡರ್​ಟೆಕ್ಕರ್​ ಹೆಸರು ಕೇಳದವರು ಅತೀ ಕಡಿಮೆ ಎಂದೇ ಹೇಳಬಹುದು. ಯಾಕಂದ್ರೆ, ಒಂದು ಕಾಲದಲ್ಲಿ ಜಾಗತಿಕವಾಗಿ ಸ್ಪೋರ್ಟ್ಸ್​​ ಎಂಟರ್​ಟೈನ್​ಮೆಂಟ್​ ಇಸ್ಟರಿಯಲ್ಲಿ ಕೇಳಿಬರುತ್ತಿದ್ದ ಹೆಸರು ಕೇವಲ ಇವರದ್ದು ಮಾತ್ರ! ದಶಕಗಳ ಕಾಲ ಡಬ್ಲ್ಯೂಡಬ್ಲ್ಯೂಇ ಲೋಕವನ್ನು ಆಳಿದ ಅಂಡರ್​ಟೆಕ್ಕರ್​, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಪ್ರತಿ ವರ್ಷ ಬರುವ ರೆಸಲ್‌ಮೇನಿಯಾದಲ್ಲಿ ಗೆಲುವಿನ ಪತಾಕೆ ಹಾರಿಸುತ್ತಿದ್ದ ಈ ದಿಗ್ಗಜ, ಇದೀಗ ವಿದಾಯದ ಬಳಿಕ ಮತ್ತೊಮ್ಮೆ ಡಬ್ಲ್ಯೂಡಬ್ಲ್ಯೂಇ ಲೋಕಕ್ಕೆ ಹಿಂತಿರುಗುತ್ತಿದ್ದಾರೆ ಎಂಬ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾ ಸುತ್ತುವರೆದಿದೆ.

ಕೆಲವು ವರ್ಷಗಳ ಹಿಂದೆ ಡಬ್ಲ್ಯೂಡಬ್ಲ್ಯೂಇ ವೀಕ್ಷಕರ ಮುಂದೆ ವಿದಾಯ ತಿಳಿಸಿದ್ದ ಅಂಡರ್​ಟೆಕ್ಕರ್​, ತಮ್ಮನ್ನು ಪ್ರೀತಿಸಿ, ಕೊಂಡಾಡಿದ್ದ ಅಪಾರ ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದ ಹೇಳಿದ್ದರು. ಅದಾದ ಬಳಿಕ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಅವರು, ಇದೀಗ 2024ರ ಏಪ್ರಿಲ್​ನಲ್ಲಿ ನಡೆಯಲಿರುವ ರೆಸಲ್‌ಮೇನಿಯಾ 40ಗೆ ವಾಪಾಸ್​ ಬರಲಿದ್ದಾರೆ ಎಂಬ ಸುದ್ದಿ ಸದ್ಯ ಅವರ ಫ್ಯಾನ್ಸ್​ಗಳಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಬೀಸ್ಟ್​ ಎಂದೇ ಖ್ಯಾತಿ ಗಳಿಸಿದ್ದ ಬ್ರಾಕ್ ಲೆಸ್ನರ್​ ಅಲಭ್ಯ ಎಂದು ಹೇಳಲಾಗಿದ್ದು, ಅವರ ಜಾಗವನ್ನು ಇದೀಗ ಅಂಡರ್​ಟೆಕ್ಕರ್​ ತುಂಬಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. 1,472 ದಿನಗಳ ನಂತರ ಮಾಜಿ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಕುಸ್ತಿ ಅಖಾಡಕ್ಕೆ ಹಿಂತಿರುಗಲಿದ್ದಾರೆ ಎಂದು ಹೇಳಲಾಗಿದ್ದು, ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net