

WTC 2025-27 : ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೂರನೇ ಸೀಸನ್ (2023-25) ಕೊನೆಗೊಂಡಿದೆ. ಕಳೆದ ವಾರ ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ WTC ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ವಿಜಯಶಾಲಿಯಾಗಿ ಹೊರಹೊಮ್ಮಿತು. 27 ವರ್ಷಗಳ ಆಫ್ರಿಕಾ ಐಸಿಸಿ ಟ್ರೋಫಿಗೆ ಮುತ್ತಿಟ್ಟಿತು. ಡಬ್ಲ್ಯುಟಿಸಿ ಮೂರನೇ ಆವೃತ್ತಿ ಕೊನೆಗೊಳ್ಳುತ್ತಿದ್ದಂತೆ ನಾಲ್ಕನೇ ಸೀಸನ್ ಇಂದಿನಿಂದ (ಜೂನ್ 17) ಪ್ರಾರಂಭವಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025-27ರ ಸೀಸನ್ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವೆ ಗಾಲೆಯಲ್ಲಿ ಇಂದಿನಿಂದ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದೊಂದಿಗೆ ಪ್ರಾರಂಭವಾಗಿದೆ. ಈ ಸೀಸನ್ನಲ್ಲಿ 9 ತಂಡಗಳ ನಡುವೆ ಒಟ್ಟು 131 ಪಂದ್ಯಗಳು ನಡೆಯಲಿವೆ. ಇದರಲ್ಲಿ ಆಸ್ಟ್ರೇಲಿಯಾ ಅತಿ ಹೆಚ್ಚು ಅಂದರೆ, 22 ಟೆಸ್ಟ್ ಪಂದ್ಯಗಳಲ್ಲಿ ಆಡಲಿದೆ.
ಆಸಿಸ್ ನಂತರ ಇಂಗ್ಲೆಂಡ್ 21 ಪಂದ್ಯಗಳನ್ನು ಆಡಲಿದೆ. 2023-25ರ ಡಬ್ಲ್ಯುಟಿಸಿ ಚಾಂಪಿಯನ್ಸ್ ದಕ್ಷಿಣ ಆಫ್ರಿಕಾ 14 ಪಂದ್ಯಗಳನ್ನು ಆಡಲಿದೆ. ನ್ಯೂಜಿಲೆಂಡ್ 16 ಪಂದ್ಯಗಳನ್ನು, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಲಾ 12 ಪಂದ್ಯಗಳನ್ನು, ವೆಸ್ಟ್ ಇಂಡೀಸ್ 14 ಪಂದ್ಯಗಳನ್ನು ಮತ್ತು ಪಾಕಿಸ್ತಾನ 13 ಪಂದ್ಯಗಳನ್ನು ಆಡಲಿದೆ.
ಟೀಮ್ ಇಂಡಿಯಾ ವಿಚಾರಕ್ಕೆ ಬಂದರೆ, WTC 2025-27ರ ಆವೃತ್ತಿಯಲ್ಲಿ ಒಟ್ಟು 18 ಟೆಸ್ಟ್ ಪಂದ್ಯಗಳಲ್ಲಿ ಆಡಲಿದೆ. ಈ ಪೈಕಿ 9 ಟೆಸ್ಟ್‌ಗಳನ್ನು ತವರಿನಲ್ಲಿ ಮತ್ತು ಇನ್ನೂ 9 ಟೆಸ್ಟ್‌ಗಳನ್ನು ವಿದೇಶದಲ್ಲಿ ಆಡಲಿದೆ. ಇಂಗ್ಲೆಂಡ್ ಸರಣಿಯೊಂದಿಗೆ WTCಯ ನಾಲ್ಕನೇ ಸೀಸನ್ ಅನ್ನು ಭಾರತ ಪ್ರಾರಂಭಿಸಲಿದೆ. ಭಾರತವು ಜೂನ್ 20 ರಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಬಳಿಕ 2025ರ ಅಕ್ಟೋಬರ್‌ನಲ್ಲಿ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್‌ಗಳನ್ನು ಆಡಲಿದೆ. 2025ರ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಎರಡು ಟೆಸ್ಟ್‌ಗಳನ್ನು ಆಡಲಿದೆ. ಮುಂದಿನ ವರ್ಷ ಆಗಸ್ಟ್ ತಿಂಗಳಲ್ಲಿ ಶ್ರೀಲಂಕಾ ಪ್ರವಾಸ ಮಾಡಲಿದ್ದು, ಲಂಕಾ ವಿರುದ್ಧ ಎರಡು ಟೆಸ್ಟ್‌ಗಳನ್ನು ಆಡಲಿದೆ.
2026ರ ಅಕ್ಟೋಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನ್ಯೂಜಿಲೆಂಡ್ ಪ್ರವಾಸ ಮಾಡಲಿದ್ದು, ಆತಿಥೇಯ ಕಿವೀಸ್ ವಿರುದ್ಧ ಎರಡು ಟೆಸ್ಟ್‌ಗಳನ್ನು ಆಡಲಿದ್ದಾರೆ. ಭಾರತವು 2027ರ ಜನವರಿ-ಫೆಬ್ರವರಿ ತಿಂಗಳಲ್ಲಿ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. (ಏಜೆನ್ಸೀಸ್)