

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಸಂಖ್ಯೆಗಳು ನಮ್ಮ ಜೀವನದ ಎಲ್ಲ ವಿಷಯಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ. ಅಲ್ಲದೆ, ಈ ಸಂಖ್ಯೆಗಳು ನೈಸರ್ಗಿಕವಾಗಿ ವಿಶ್ವದಲ್ಲಿ ವಿಶಿಷ್ಟ ಶಕ್ತಿಯನ್ನು ಹೊಂದಿದ್ದು, ಯಾರನ್ನಾದರೂ ಮೇಲಕ್ಕೇರಿಸಬಹುದು ಮತ್ತು ಕೆಳಗಿಳಿಸಬಹುದು.
ಅಂದಹಾಗೆ ಸಂಖ್ಯಾಶಾಸ್ತ್ರವು ವ್ಯಕ್ತಿಯ ಹೆಸರು, ಆತನ ಹುಟ್ಟಿದ ದಿನಾಂಕ, ತಿಂಗಳು, ವರ್ಷದ ಆಧಾರದ ಮೇಲೆ ಅವರ ಭವಿಷ್ಯದ ಜೀವನ ಹೇಗಿರುತ್ತದೆ ಎಂದು ಊಹಿಸುವ ವಿಜ್ಞಾನವಾಗಿದೆ. ಈ ಸಂಖ್ಯಾಶಾಸ್ತ್ರವನ್ನು ರಾಡಿಕ್ಸ್ ಸಂಖ್ಯೆಗಳ ಆಧಾರದ ಮೇಲೆ ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಬ್ಬ 24ನೇ ತಾರೀಖಿನಂದು ಜನಿಸಿದರೆ ಆತನ ರಾಡಿಕ್ಸ್ ಸಂಖ್ಯೆ 2+4= 6 ಆಗಿರುತ್ತದೆ.
ರಾಶಿಗಳಂತೆ ರಾಡಿಕ್ಸ್ ಸಂಖ್ಯೆಗಳು ಕೂಡ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಸಂಖ್ಯಾಶಾಸ್ತ್ರದಲ್ಲಿ 01 ರಿಂದ 09ರವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಸಂಖ್ಯೆಗಳು ಎಂದು ಹೇಳಲಾಗುತ್ತದೆ. ಈ ಒಂಬತ್ತು ರಾಡಿಕ್ಸ್ ಸಂಖ್ಯೆಗಳು ಕೂಡ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ.
ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಲ್ಲಿ ಜನಿಸಿದ ಜನರು ಇತರರಿಗೆ ಸಹಾಯ ಮಾಡುವುದರಿಂದ ಸದಾ ಮುಂದಿರುತ್ತಾರಂತೆ. ಸಹಾಯ ಮಾಡುವುದರಲ್ಲೇ ತಮ್ಮ ಖುಷಿಯನ್ನು ಕಾಣುತ್ತಾರಂತೆ. ಹಾಗಾದರೆ, ಅಂತಹ ಜನರು ಯಾವ ದಿನಾಂಕಗಳಲ್ಲಿ ಜನಿಸುತ್ತಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಯಾವುದೇ ತಿಂಗಳ ದಿನಾಂಕ 2, 11, 20 ಹಾಗೂ 29 ಸಂಖ್ಯೆಗಳಲ್ಲಿ ಜನಿಸಿದ ಜನರು ಚಂದ್ರನೊಂದಿಗೆ ಸಂಬಂಧ ಹೊಂದಿದ್ದಾರೆ. ಇವರು ಇತರರ ಭಾವನೆಗಳು, ಅಂತಃಪ್ರಜ್ಞೆ ಮತ್ತು ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುತ್ತಾರೆ. ಯಾವಾಗಲೂ ಇತರರಿಗೆ ಯಾವುದೇ ಹಾನಿ ಮಾಡದೆ ಸಹಾಯ ಮಾಡುತ್ತಾರೆ. ಅವರು ಬಹಳಷ್ಟು ಸಹಾನುಭೂತಿ ಮತ್ತು ದಯೆಯನ್ನು ಹೊಂದಿರುತ್ತಾರೆ. ಇತರರಿಗೆ ಸಹಾಯ ಮಾಡುವ ಸ್ವಭಾವವು ಅವರನ್ನು ಜೀವನದಲ್ಲಿ ಸುಧಾರಿಸುತ್ತದೆ.
9, 18 ಮತ್ತು 27 ರಂದು ಜನಿಸಿದ ಜನರ ಅದೃಷ್ಟ ಸಂಖ್ಯೆ 9. ಅವರು ಮಂಗಳ ಗ್ರಹದಿಂದ ಹೆಚ್ಚು ಪ್ರಭಾವಿತರಾಗಿರುತ್ತಾರೆ. ಅವರು ಪ್ರೀತಿ ಮತ್ತು ಸಾಮಾಜಿಕ ಸೇವೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಪ್ರೀತಿ ಮತ್ತು ಕರುಣೆ ಇತರರಿಗಿಂತ ಇವರಲ್ಲಿ ಹೆಚ್ಚಿರುತ್ತದೆ. ಇವರು ಸಮಾಜವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಮಾತ್ರವಲ್ಲದೆ ಸಮುದಾಯಕ್ಕೂ ಸಹಾಯ ಮಾಡುತ್ತಾರೆ. ಅವರನ್ನು ಇಷ್ಟಪಡದ ಜನರೇ ಇರುವುದಿಲ್ಲ.
6, 15 ಮತ್ತು 24ನೇ ತಾರೀಖಿನಂದು ಜನಿಸಿದ ಜನರು ಶುಕ್ರನ ಆಳ್ವಿಕೆಗೆ ಒಳಪಡುತ್ತಾರೆ. ಇದು ಬಹಳಷ್ಟು ಪ್ರೀತಿಗೆ ಕಾರಣವಾಗುತ್ತದೆ. ಇವರು ಯಾವಾಗಲೂ ಸಂಘರ್ಷವನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. ಅಲ್ಲದೆ, ಇವರು ಹೆಚ್ಚು ಜವಾಬ್ದಾರಿಯುತರಾಗಿ ನಡೆದುಕೊಳ್ಳುತ್ತಾರೆ. ಇವರ ಈ ಒಳ್ಳೆಯ ಹೃದಯವು ಅವರನ್ನು ಇತರರಲ್ಲಿ ಗುರುತಿಸುವಂತೆ ಮಾಡುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.