

ನವದೆಹಲಿ: ಮುಂಬರುವ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 4ನೇ ಆವೃತ್ತಿಗೆ ಮುನ್ನ ನವೆಂಬರ್ 25ರಿಂದ 29ರ ನಡುವೆ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಕ್ಕೆ ಮುನ್ನ ಎಲ್ಲ 5 ತಂಡಗಳಿಗೆ ಗರಿಷ್ಠ 5 ಆಟಗಾರ್ತಿಯರನ್ನು ರಿಟೇನ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ತಂಡಗಳು ನವೆಂಬರ್ 5ಕ್ಕೆ ಮುನ್ನ ರಿಟೇನ್ ಪಟ್ಟಿಯನ್ನು ಸಲ್ಲಿಸಬೇಕಾಗಿದೆ.
ತಂಡಗಳು ರಿಟೇನ್ ಮಾಡಿಕೊಳ್ಳುವ ಐವರು ಆಟಗಾರ್ತಿಯರಲ್ಲಿ ಗರಿಷ್ಠ ಮೂವರಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿರಬೇಕು. ಇನ್ನುಳಿದಂತೆ ಇಬ್ಬರು ದೇಶೀಯ ಆಟಗಾರ್ತಿಯರನ್ನು ರಿಟೇನ್ ಮಾಡಿಕೊಳ್ಳಲು ಅವಕಾಶವಿದೆ. ತಂಡವೊಂದು ಗರಿಷ್ಠ 5 ಆಟಗಾರ್ತಿಯರನ್ನು ರಿಟೇನ್ ಮಾಡಿಕೊಳ್ಳಲು ನಿರ್ಧರಿಸಿದರೆ ಆಗ ಅದರಲ್ಲಿ ಕನಿಷ್ಠ ಓರ್ವ ಭಾರತೀಯ ದೇಶೀಯ ಕ್ರಿಕೆಟರ್ ಇರಬೇಕಾಗುತ್ತದೆ.
ಮೆಗಾ ಹರಾಜಿನಲ್ಲಿ ತಂಡಗಳಿಗೆ ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ಗಳನ್ನೂ ಬಳಸಲು ಅವಕಾಶ ನೀಡಲಾಗುತ್ತದೆ. ಇದರಿಂದ 2025ರ ಆವೃತ್ತಿಯಲ್ಲಿ ತಮ್ಮ ತಂಡದ ಭಾಗವಾಗಿದ್ದ ಆಟಗಾರ್ತಿಯರನ್ನು 2026ರ ಆವೃತ್ತಿಗೂ ಉಳಿಸಿಕೊಳ್ಳಲು ಅವಕಾಶ ದೊರೆಯಲಿದೆ. ತಂಡವೊಂದು ಗರಿಷ್ಠ 5 ಆರ್ಟಿಎಂ ಬಳಸಲು ಅವಕಾಶವಿರುತ್ತದೆ. ಆದರೆ ಐವರು ಆಟಗಾರ್ತಿಯರನ್ನು ರಿಟೇನ್ ಮಾಡಿಕೊಂಡರೆ ಮಾತ್ರ ಒಂದೂ ಆರ್ಟಿಎಂ ಸಿಗುವುದಿಲ್ಲ. ನಾಲ್ವರ ರಿಟೇನ್ ಮಾಡಿದರೆ 1 ಆರ್ಟಿಎಂ, ಮೂವರ ರಿಟೇನ್ ಮಾಡಿದರೆ 2 ಆರ್ಟಿಎಂ ಮತ್ತು ಇಬ್ಬರ ರಿಟೇನ್ ಮಾಡಿದರೆ 3 ಆರ್ಟಿಎಂ ಮತ್ತು ಒಬ್ಬರ ರಿಟೇನ್ ಮಾಡಿದರೆ 4 ಆರ್ಟಿಎಂ ಸಿಗಲಿದೆ.
ಮೆಗಾ ಹರಾಜು ಪ್ರಕ್ರಿಯೆಗೆ ಹೆಸರು ನೋಂದಾಯಿಸಿಕೊಳ್ಳಲು ಆಟಗಾರ್ತಿಯರಿಗೆ ನ.18 ಕೊನೇ ದಿನವಾಗಿರುತ್ತದೆ ಮತ್ತು ನವೆಂಬರ್ 20ರಂದು ಬಿಸಿಸಿಐ, ಹರಾಜಿನಲ್ಲಿ ಭಾಗವಹಿಸುವ ಆಟಗಾರ್ತಿಯರ ಪಟ್ಟಿಯನ್ನು ಬಹಿರಂಗಗೊಳಿಸಲಿದೆ.
ಬಜೆಟ್ 15 ಕೋಟಿ ರೂ.
ತಂಡಗಳು ಆಟಗಾರ್ತಿಯರ ರಿಟೇನ್ ಮತ್ತು ಹರಾಜಿನ ಖರೀದಿಗೆ ಬಳಸಬಹುದಾದ ಗರಿಷ್ಠ ಬಜೆಟ್ ಮಿತಿಯನ್ನು 15 ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಪೈಕಿ ಐವರು ಆಟಗಾರ್ತಿಯರ ರಿಟೇನ್ಗೆ 3.5 ಕೋಟಿ, 2.5 ಕೋಟಿ, 1.75 ಕೋಟಿ, 1 ಕೋಟಿ ಮತ್ತು 50 ಲಕ್ಷ ರೂ. ಸ್ಲ್ಯಾಬ್ ನಿಗದಿಪಡಿಸಲಾಗಿದೆ. ಇದರಿಂದ ತಂಡವೊಂದು ಗರಿಷ್ಠ 5 ಆಟಗಾರ್ತಿಯರನ್ನು ರಿಟೇನ್ ಮಾಡಿಕೊಳ್ಳಬೇಕಾದರೆ ಒಟ್ಟು 9.25 ಕೋಟಿ ರೂ. ವ್ಯಯಿಸಬೇಕಾಗುತ್ತದೆ. 4 ಆಟಗಾರ್ತಿಯರಿಗೆ 8.75 ಕೋಟಿ ರೂ, ಮೂವರು ಆಟಗಾರ್ತಿಯರಿಗೆ 7.75 ಕೋಟಿ ರೂ. ಮತ್ತು ಇಬ್ಬರು ಆಟಗಾರ್ತಿಯರಿಗೆ 7.75 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಇದರ ಹೊರತಾಗಿ ತಂಡಗಳು ಆಟಗಾರ್ತಿಯರ ರಿಟೇನ್ಗೆ ಹೆಚ್ಚಿನ ಮೊತ್ತವನ್ನೂ ವ್ಯಯಿಸಲು ಅವಕಾಶವಿದ್ದು, ಆ ಹೆಚ್ಚಿನ ಮೊತ್ತವು ಬಜೆಟ್ನಿಂದ ಕಡಿತಗೊಳ್ಳಲಿದೆ.