WPL-2025: ಲಖನೌದಲ್ಲಿ ಪ್ಲೇಆಫ್​ ಲಕ್​ ನಿರ್ಧಾರ! ಎರಡು ಸ್ಥಾನಗಳಿಗೆ ನಾಲ್ಕು ತಂಡಗಳ ಫೈಟ್​; ಹೀಗಿದೆ 5 ತಂಡಗಳ ಲೆಕ್ಕಾಚಾರ...

web wpl play off
Published on

ಲಖನೌ: ಮೂರನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ನ (ಡಬ್ಲುಪಿಎಲ್​) ರೋಚಕ ಪ್ಲೇಆಫ್​​ ಪೈಪೋಟಿಗೆ ವೇದಿಕೆ ಸಜ್ಜಾಗಿದೆ. ಟೂರ್ನಿಯ ಮೂರನೇ ಚರಣದ ಪಂದ್ಯಗಳು ಲಖನೌದಲ್ಲಿ ಸೋಮವಾರ ಆರಂಭವಾಗಲಿದ್ದು, ಆತಿಥೇಯ ಯುಪಿ ವಾರಿಯರ್ಸ್​ ಹಾಗೂ ಗುಜರಾತ್​ ಜೈಂಟ್ಸ್​ ತಂಡಗಳು ಕಾದಾಟ ನಡೆಸಲಿವೆ. ಟೂರ್ನಿಯ ರೌಂಡ್​ ರಾಬಿನ್​ನಲ್ಲಿ 6 ಲೀಗ್​ ಪಂದ್ಯಗಳಷ್ಟೇ ಬಾಕಿಯಿದ್ದು, ಪ್ಲೇಆಫ್​ನ ಉಳಿದೆರಡು 2 ಸ್ಥಾನಗಳಿಗೆ 4 ತಂಡಗಳ ನಡುವೆ ನೇರ ಸ್ಪರ್ಧೆ ಇದೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮೊದಲ ತಂಡವಾಗಿ ಉಪಾಂತ್ಯದ ಸ್ಥಾನ ಖಾತ್ರಿಪಡಿಸಿಕೊಂಡರೂ, ಅಗ್ರಸ್ಥಾನದೊಂದಿಗೆ ಫೈನಲ್​ಗೆ ನೇರ ಅರ್ಹತೆ ಪಡೆಯುವ ಲೆಕ್ಕಾಚಾರದಲ್ಲಿದೆ. ಐದು ತಂಡಗಳು ತಲಾ 8 ಲೀಗ್​ ಪಂದ್ಯ ಆಡಲಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡ ನೇರವಾಗಿ ಪ್ರಶಸ್ತಿ ಸುತ್ತಿಗೇರಿದರೆ, 2-3ನೇ ಸ್ಥಾನಿ ಎಲಿಮಿನೇಟರ್​ನಲ್ಲಿ ಫೈನಲ್​ ಸ್ಥಾನಕ್ಕೆ ಹೋರಾಟ ನಡೆಸಲಿವೆ. ಎಲಿಮಿನೇಟರ್​ ಹಾಗೂ ಫೈನಲ್​ ಮುಂಬೈನಲ್ಲಿ ನಿಗದಿಯಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್​ (1ನೇ ಸ್ಥಾನ, 10 ಅಂಕ)

ಈಗಾಗಲೆ ಮೊದಲ ತಂಡವಾಗಿ ಪ್ಲೇಆಫ್​ಗೆ ಅರ್ಹತೆ ಪಡೆದಿದ್ದು, ಕೊನೇ ಪಂದ್ಯದಲ್ಲೂ ಗೆದ್ದರೆ ಮೊದಲ ಸ್ಥಾನದ ಜತೆಗೆ ನೇರವಾಗಿ ಫೈನಲ್​ಗೇರಲಿದೆ. ಬಾಕಿ ಪಂದ್ಯ: ಗುಜರಾತ್​ (ಮಾ.7).

ಮುಂಬೈ ಇಂಡಿಯನ್ಸ್​ (2ನೇ ಸ್ಥಾನ, 6 ಅಂಕ)

ಮಾಜಿ ಚಾಂಪಿಯನ್​ ಮುಂಬೈ ಪ್ಲೇಆಫ್​ ಅರ್ಹತೆ ಪಡೆಯಲು ಉಳಿದ 3 ಪಂದ್ಯಗಳಲ್ಲಿ ಕನಿಷ್ಠ 2ರಲ್ಲಿ ಗೆಲ್ಲಬೇಕು. ಅಥವಾ 3ರಲ್ಲೂ ಗೆದ್ದು, ಡೆಲ್ಲಿ ತನ್ನ ಕೊನೇ ಪಂದ್ಯ ಸೋತರೆ ಅಗ್ರಸ್ಥಾನದೊಂದಿಗೆ ನೇರವಾಗಿ ಫೈನಲ್​ಗೇರುವ ಅವಕಾಶವೂ ಒಲಿಯಲಿದೆ. ಆಗ ರನ್​ರೇಟ್​ ನಿರ್ಣಾಯಕ ಪಾತ್ರವಹಿಸಲಿದೆ. ಬಾಕಿ ಪಂದ್ಯ: ಯುಪಿ (ಮಾ.6), ಗುಜರಾತ್​ (ಮಾ.10), ಆರ್​ಸಿಬಿ (ಮಾ.11).

ಯುಪಿ ವಾರಿಯರ್ಸ್​ (3ನೇ ಸ್ಥಾನ, 4 ಅಂಕ)

ಪ್ಲೇಆ್​ ಸ್ಥಾನ ಖಾತ್ರಿಪಡಿಸಿಕೊಳ್ಳಲು ಯುಪಿ ವಾರಿಯರ್ಸ್​ ತನ್ನ ಉಳಿದ ಮೂರೂ ಪಂದ್ಯ ಗೆಲ್ಲಲೇಬೇಕು. ಒಂದರಲ್ಲಿ ಸೋತರೂ, ಇತರ ಫಲಿತಾಂಶಗಳ ಆಧಾರದಲ್ಲಿ ಭವಿಷ್ಯ ನಿರ್ಧಾರವಾಗಲಿದೆ. ಬಾಕಿ ಪಂದ್ಯ: ಗುಜರಾತ್​ (ಮಾ.3), ಮುಂಬೈ (ಮಾ.6), ಆರ್​ಸಿಬಿ (ಮಾ.8).

ಆರ್​ಸಿಬಿ (4ನೇ ಸ್ಥಾನ, 4 ಅಂಕ)

ಆರಂಭಿಕ 2 ಗೆಲುವಿನ ನಂತರ ಸತತ 4 ಪಂದ್ಯ ಸೋತಿರುವ ಹಾಲಿ ಚಾಂಪಿಯನ್​ ಆರ್​ಸಿಬಿ ಪ್ಲೇಆಫ್​​ ರೇಸ್​ನಲ್ಲಿ ಭಾರಿ ಹಿನ್ನಡೆ ಎದುರಿಸಿದೆ. ಸದ್ಯ ಅಂಕಪಟ್ಟಿಯ 4ನೇ ಸ್ಥಾನದಲ್ಲಿರುವ ಸ್ಮೃತಿ ಮಂದನಾ ಬಳಗ ಪ್ರಶಸ್ತಿ ಆಸೆ ಜೀವಂತವಿರಿಸಲು ತನ್ನ ಕೊನೇ 2 ಪಂದ್ಯ ಗೆಲ್ಲಲೇಬೇಕಿದೆ. ಜತೆಗೆ ಇತರ ಪಂದ್ಯಗಳ ಫಲಿತಾಂಶವೂ ವರದಾನವಾಗಬೇಕಿದೆ. ಬಾಕಿ ಪಂದ್ಯ: ಯುಪಿ (ಮಾ.8), ಮುಂಬೈ (ಮಾ.11).

ಗುಜರಾತ್​ ಜೈಂಟ್ಸ್​ (5ನೇ ಸ್ಥಾನ, 4 ಅಂಕ)

ಪ್ಲೇಆಫ್​ ಅರ್ಹತೆ ಪಡೆಯಲು ಗುಜರಾತ್​ ಜೈಂಟ್ಸ್​ ತನ್ನ ಉಳಿದ ಮೂರೂ ಪಂದ್ಯ ಗೆಲ್ಲುವ ಒತ್ತಡದಲ್ಲಿದೆ. ಒಂದು ಪಂದ್ಯದಲ್ಲಿ ಸೋತರೂ, ಇತರ ಫಲಿತಾಂಶ ಅವಲಂಬಿಸಬೇಕಾಗುತ್ತದೆ. ಬಾಕಿ ಪಂದ್ಯ: ಯುಪಿ (ಮಾ.3), ಡೆಲ್ಲಿ (ಮಾ.7), ಮುಂಬೈ (ಮಾ.10).

ಇಂದಿನ ಪಂದ್ಯ

ಯುಪಿ-ಗುಜರಾತ್​

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net