ಕಬಡ್ಡಿ ತಾರೆ ದೀಪಕ್​-ಬಾಕ್ಸರ್​ ಸವೀಟಿ ದಾಂಪತ್ಯದಲ್ಲಿ ಬಿರುಕು; ಪರಸ್ಪರ ಆರೋಪ-ಪ್ರತ್ಯಾರೋಪ!

web devorce
Published on

ಹಿಸಾರ್​: ಭಾರತದ ಕ್ರೀಡಾ ದಂಪತಿಗಳಲ್ಲಿ ಒಬ್ಬರಾಗಿ ಗಮನಸೆಳೆದಿದ್ದ ಕಬಡ್ಡಿ ಆಟಗಾರ ದೀಪಕ್​ ಹೂಡಾ ಮತ್ತು ಬಾಕ್ಸರ್​ ಸವೀಟಿ ಬೋರಾ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ. ಭಾರತ ಕಬಡ್ಡಿ ತಂಡದ ಮಾಜಿ ನಾಯಕ ದೀಪಕ್​ ಹೂಡಾ ಫಾರ್ಚೂನರ್​ ಕಾರು ಮತ್ತು ಒಂದು ಕೋಟಿ ರೂ. ವರದಣೆ ನೀಡಬೇಕೆಂದು ಕಿರುಕುಳ ನೀಡುತ್ತಿದ್ದಾರೆ ಎಂದು ಸವೀಟಿ ಬೋರಾ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ದೀಪಕ್​ ಕೂಡ ತನ್ನ ಅತ್ತೆ ಮನೆಯವರ ವಿರುದ್ಧ ಆಸ್ತಿ ಕಬಳಿಕೆ ಮತ್ತು ಮೋಸದ ಆರೋಪ ಮಾಡಿದ್ದಾರೆ. ಗಂಡ&ಹೆಂಡತಿ ಇಬ್ಬರೂ ಪೊಲೀಸರಿಗೆ ದೂರನ್ನೂ ಸಲ್ಲಿಸಿದ್ದಾರೆ. ಈ ನಡುವೆ ವಿಚ್ಛೇದನ ಬೇಕೆಂದು ಸವೀಟಿ&ದೀಪಕ್​ ಇಬ್ಬರೂ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.

ಬಾಕ್ಸಿಂಗ್​ ತ್ಯಜಿಸುವಂತೆ ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಜತೆಗೆ ವರದಣೆಗಾಗಿ ಪತಿ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ನಡೆದ ಗಲಾಟೆಯ ಬಳಿಕ ತನ್ನನ್ನು ಗಂಡನ ಮನೆಯಿಂದ ಹೊರಹಾಕಲಾಗಿದೆ ಎಂದು ವಿಶ್ವ ಚಾಂಪಿಯನ್​ ಸ್ವರ್ಣ ಪದಕ ವಿಜೇತೆ 32 ವರ್ಷದ ಸವೀಟಿ ಬೋರಾ ಹರಿಯಾಣದ ಹಿಸಾರ್​ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ 2016ರ ಕಬಡ್ಡಿ ವಿಶ್ವಕಪ್​ ವಿಜೇತ ದೀಪಕ್​ ಹೂಡಾ ರೋಹ್ಟಕ್​ನಲ್ಲಿ ಪೊಲೀಸರಿಗೆ ದೂರು ನೀಡಿದ್ದು, ಮಾವನ ಮನೆಯವರು ತನಗೆ 25 ಲಕ್ಷ ರೂ. ನೀಡುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

2022ರ ಜುಲೈನಲ್ಲಿ ಸವೀಟಿ-ದೀಪಕ್​ ವಿವಾಹ ನಡೆದಿತ್ತು. ಸವೀಟಿಗೆ ಇತ್ತೀಚೆಗೆ ಅರ್ಜುನ ಪ್ರಶಸ್ತಿಯೂ ಲಭಿಸಿತ್ತು. ದೀಪಕ್​ಗೆ 2020ರಲ್ಲೇ ಅರ್ಜುನ ದೊರೆತಿತ್ತು. ದೀಪಕ್​ ಹೂಡಾ 2024ರ ಸಾಲಿನಲ್ಲಿ ಹರಿಯಾಣ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಆದರೆ ಪರಾಭವಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net