

ನವದೆಹಲಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಕಬಳಿಸಿದರೆ ಹೊಸ ದಾಖಲೆಯೊಂದನ್ನು ಬರೆಯುವ ಅವಕಾಶ ಭಾರತದ ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ಎದುರಾಗಿದೆ.
ಆಸ್ಟ್ರೆಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಸದ್ಯ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಗರಿಷ್ಠ 70 ವಿಕೆಟ್ (14 ಪಂದ್ಯ) ಕಬಳಿಸಿದ ದಾಖಲೆ ಹೊಂದಿದ್ದಾರೆ. ಅಶ್ವಿನ್ ಸದ್ಯ 13 ಪಂದ್ಯಗಳಿಂದ 67 ವಿಕೆಟ್ ಕಬಳಿಸಿದ್ದು, ಇನ್ನು 4 ವಿಕೆಟ್ ಕಬಳಿಸಿದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಗರಿಷ್ಠ ವಿಕೆಟ್ ಗಳಿಸಿದ ಬೌಲರ್ ಎನಿಸಲಿದ್ದಾರೆ.
ನ್ಯೂಜಿಲೆಂಡ್ ತಂಡದಲ್ಲಿ ಈ ಸಾಧನೆಗೆ ಹತ್ತಿರದಲ್ಲಿರುವವರು ವೇಗಿ ಟಿಮ್ ಸೌಥಿ. ಆದರೆ ಸೌಥಿ ಸದ್ಯ 10 ಪಂದ್ಯಗಳಿಂದ 51 ವಿಕೆಟ್ ಗಳಿಸಿದ್ದು, ಕಮ್ಮಿನ್ಸ್ ದಾಖಲೆ ಹಿಮ್ಮೆಟ್ಟಿಸಬೇಕಾದರೆ ಫೈನಲ್ ಪಂದ್ಯದ ಎಲ್ಲ 20 ವಿಕೆಟ್ ಕಬಳಿಸಬೇಕಾದ ಅಸಾಧ್ಯ ಸವಾಲು ಹೊಂದಿದ್ದಾರೆ. ಹೀಗಾಗಿ ಅಶ್ವಿನ್ ದಾಖಲೆ ಬರೆಯಬಹುದಾದ ನೆಚ್ಚಿನ ಬೌಲರ್ ಎನಿಸಿದ್ದಾರೆ.
ಆದರೆ ಸೌಥಾಂಪ್ಟನ್ ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ನೀಡಲಿರುವ ಕಾರಣ ಸದ್ಯಕ್ಕೆ ಭಾರತ ತಂಡ ಓರ್ವ ಸ್ಪಿನ್ ಬೌಲರನ್ನು ಮಾತ್ರ ಪಂದ್ಯದಲ್ಲಿ ಆಡಿಸುವ ಸಾಧ್ಯತೆ ಇದೆ. ಹೀಗಾಗಿ ಆ ಓರ್ವ ಸ್ಪಿನ್ನರ್ ಆಗಿ ಅಶ್ವಿನ್ ಅವರಿಗೇ ಆಡುವ ಅವಕಾಶ ಸಿಕ್ಕರಷ್ಟೇ ದಾಖಲೆ ಸುಲಭವಾಗಲಿದೆ. ತಂಡದಲ್ಲಿ ಸ್ಪಿನ್ನರ್ ಸ್ಥಾನಕ್ಕೆ ರವೀಂದ್ರ ಜಡೇಜಾ ಮತ್ತು ಅರ್ ಪಟೇಲ್ ಕೂಡ ಸ್ಪರ್ಧೆಯಲ್ಲಿದ್ದಾರೆ.