

ನವದೆಹಲಿ: ಜೂನ್ 29ರಂದು ಮುಕ್ತಾಯಗೊಂಡ ಚುಟುಕು ವಿಶ್ವ ಸಮರದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ ತಂಡವು ಕಪ್ ಬರವನ್ನು ನೀಗಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಕೆಲವು ತಿಂಗಳ ಹಿಂದೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಎಡವಿದ್ದ ಭಾರತ ತಂಡವು ಅಜೇಯವಾಗಿ ಕಪ್ ಗೆಲ್ಲುವ ಕನಸನ್ನು ಆಸ್ಟ್ರೇಲಿಯಾ ಭಗ್ನಗೊಳಿಸಿತ್ತು. ಅಹದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಪಿಚ್ಅನನ್ಉ ನಿಧಾನಗೊಳಿಸಲಾಗಿತ್ತು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಆರೋಪಿಸಿದ್ದರು.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದ ಕೈಫ್, ನಾನು ಮೂರು ದಿನಗಳ ಕಾಲ ಗುಜರಾತ್ನಲ್ಲಿದ್ದೆ. ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರು ಫೈನಲ್ಗೆ ಮುಂಚಿತವಾಗಿ 3 ದಿನಗಳ ಕಾಲ ಪ್ರತಿದಿನ ಪಿಚ್ ಅನ್ನು ಪರಿಶೀಲಿಸುತ್ತಿದ್ದರು. ಪಿಚ್ನ ಬಣ್ಣ ಬದಲಾಗುತ್ತಿರುವುದನ್ನು ನಾನು ಗಮನಿಸಿದ್ದೆ. ಪಿಚ್ಗೆ ಯಾವುದೇ ರೀತಿಯ ವಾಟರಿಂಗ್ ಮಾಡಿರಲಿಲ್ಲ. ಭಾರತವು ಆಸ್ಟ್ರೇಲಿಯಾಕ್ಕೆ ನಿಧಾನಗತಿಯ ಪಿಚ್ ನೀಡಲು ಬಯಸಿತ್ತು. ಜನರು ಇದನ್ನು ನಂಬುವುದಿಲ್ಲವಾದರೂ ಇದು ನಿಜ.
ಆಸ್ಟ್ರೇಲಿಯಾದಲ್ಲಿ ಪ್ಯಾಟ್ ಕಮ್ಮಿನ್ಸ್, ಮತ್ತು ಮಿಚೆಲ್ ಸ್ಟಾರ್ಕ್ ಇದ್ದಾರೆ. ಇವರನ್ನು ಉದ್ದೇಶವಾಗಿಟ್ಟುಕೊಂಡು ಭಾರತ ತಂಡವು ನಿಧಾನಗತಿಯ ಪಿಚ್ ನೀಡಲು ಬಯಸಿತ್ತು. ಕ್ಯುರೇಟರ್ಗಳು ತಮ್ಮದೇ ಆದ ಕೆಲಸವನ್ನು ಮಾಡುತ್ತಾರೆ ಮತ್ತು ಅವರ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎಂಬುದು ತಪ್ಪು. ನಾವು ಮನೆಯಲ್ಲಿ ಆಡುತ್ತಿದ್ದೆವು ಮತ್ತು ತುಸು ಹೆಚ್ಚಿಗೆ ಮಾಡಿದ್ದೆವು ಎಂದು ಕೈಫ್ ಹೇಳಿದ್ದರು.
ಕೈಫ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್, ಪಿಚ್ಅನ್ನು ನಿಧಾನಗೊಳಿಸಲಾಗಿತ್ತು ಎಂಬ ಮಾತನ್ನು ನಾನು ಕೇಳಿದ್ದೇನೆ. ಆದರೆ, ಈ ಮಾತನ್ನು ನಾನು ಒಪ್ಪುವುದಿಲ್ಲ. ಹಿಂದಿನ ಪಂದ್ಯಗಳಲ್ಲಿಯೂ ನಾವು ಇದೇ ರೀತಿಯ ವಿಕೆಟ್ಗಳ ಮೇಲೆ ಆಡಿದ್ದೆವು. ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳು ನಿಧಾನಗತಿಯ ಪಿಚ್ಗಳಲ್ಲಿ ನಡೆದವು. ಆದರೆ, ಅಹಮದಾಬಾದ್ ಪಿಚ್ನಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ ಎಂದು ಹೇಳಿದ್ದಾರೆ.