

ಅಹಮದಾಬಾದ್: ಭಾನುವಾರ ನಡೆಯಲಿರುವ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಗೆದ್ದು 3ನೇ ಬಾರಿ ವಿಶ್ವ ಚಾಂಪಿಯಯನ್ ಪಟ್ಟಕ್ಕೇರುವ ಜತೆಗೆ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ದ ಅವಳಿ ಸೇಡು ತೀರಿಸಿಕೊಳ್ಳುವ ಅವಕಾಶವಿದೆ.
ಇಪ್ಪತ್ತು ವರ್ಷಗಳ ಹಿಂದೆ 2003ರಲ್ಲಿ ಮೊದಲ ಬಾರಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಮುಖಾಮುಖಿ ಆದಾಗ ಭಾರತ ನಿರಾಸೆ ಅನುಭವಿಸಿತ್ತು. ಜೊಹಾನ್ಸ್ರ್ಬಗ್ನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ಸೌರವ್ ಗಂಗೂಲಿ ಬಳಗ, ರಿಕಿ ಪಾಂಟಿಂಗ್ (140*) ಆರ್ಭಟದಿಂದ 2 ವಿಕೆಟ್ಗೆ 359 ರನ್ ಬಿಟ್ಟುಕೊಟ್ಟಿತ್ತು. ಪ್ರತಿಯಾಗಿ ಆರಂಭಿಕ ಆಘಾತ ಎದುರಿಸಿದ್ದ ಭಾರತ ಸೆಹ್ವಾಗ್ (82) ಹೋರಾಟ ನಡುವೆ 234 ರನ್ಗಳಿಗೆ ಆಲೌಟ್ ಆಗಿ 125 ರನ್ಗಳಿಂದ ಸೋತಿತ್ತು.
ಇನ್ನು 5 ತಿಂಗಳ ಹಿಂದೆ 2ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಮುಖಾಮುಖಿಯಲ್ಲೂ ಭಾರತ ಎಡವಿತ್ತು. ಓವಲ್ನಲ್ಲಿ ಟ್ರಾವಿಸ್ ಹೆಡ್ (163), ಸ್ಟೀವನ್ ಸ್ಮಿತ್ (121) ಶತಕದೊಂದಿಗೆ ಆಸೀಸ್ ಸಂಘಟಿತ ಬೌಲಿಂಗ್ ಎದುರು ಭಾರತ 209 ರನ್ಗಳಿಂದ ಸೋತಿತ್ತು. ಇವೆರಡೂ ಸೋಲುಗಳಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಈಗ ರೋಹಿತ್ ಶರ್ಮ ಬಳಗದ ಮುಂದಿದೆ.