ಇಂದು ವಿಶ್ವ 10ಕೆ ಬೆಂಗಳೂರು ಓಟದ ಹಬ್ಬ; 35 ಸಾವಿರ ಓಟಗಾರರು ಭಾಗಿ ನಿರೀಕ್ಷೆ

web 10k
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಉದ್ಯಾನನಗರಿಯ ಜನತೆಗೆ ಮುಂಜಾನೆಯಿಂದಲೇ ಜೋಶ್​ ತುಂಬುವ ಓಟದ ಹಬ್ಬಕ್ಕೆ ವೇದಿಕೆ ಸಜ್ಜಾಗಿದೆ. 17ನೇ ಆವೃತ್ತಿಯ ಟಿಸಿಎಸ್​ ವಿಶ್ವ 10ಕೆ ಬೆಂಗಳೂರು ಓಟ ಭಾನುವಾರ ನಡೆಯಲಿದೆ. 1.80 ಕೋಟಿ ರೂ. ಬಹುಮಾನ ಮೊತ್ತವನ್ನು ಹೊಂದಿರುವ ವಿಶ್ವ ಅಥ್ಲೆಟಿಕ್ಸ್​ ಗೋಲ್ಡ್​ ಲೇಬಲ್​ ರೇಸ್​ನಲ್ಲಿ ಈ ಬಾರಿ ಸುಮಾರು 35 ಓಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಆತಿಥೇಯ ಭಾರತದೊಂದಿಗೆ ಕೀನ್ಯಾ, ಉಗಾಂಡ, ಇಥಿಯೋಪಿಯಾ ಮುಂತಾದ ಆಫ್ರಿಕಾ ದೇಶದ ಎಲೀಟ್​ ಓಟಗಾರರು ಕೂಟಕ್ಕೆ ಮೆರುಗು ತುಂಬಲಿದ್ದಾರೆ.

ಭಾರತೀಯ ಸೇನೆ, ಕರ್ನಾಟಕ ಮತ್ತು ಕೇರಳ ಉಪಪ್ರದೇಶದ ಬೆಂಬಲದೊಂದಿಗೆ ಫೀಲ್ಡ್​ ಮಾರ್ಷಲ್​ ಸ್ಯಾಮ್​ ಮಾಣೆಕ್​ ಪರೇಡ್​ ಮೈದಾನದ ಹೊರಗೆ ಓಟ ಆರಂಭ ಮತ್ತು ಮುಕ್ತಾಯವನ್ನು ಕಾಣಲಿದೆ. ನಗರದ ಪ್ರಮುಖ ಹೆಗ್ಗುರುತುಗಳಾದ ಕಬ್ಬನ್​ ಪಾರ್ಕ್​, ಹಲಸೂರು ಕೆರೆ ಮತ್ತು ಚಿನ್ನಸ್ವಾಮಿ ಸ್ಟೇಡಿಯಂ ಮಾರ್ಗವಾಗಿ ರೇಸ್​ ಹಾದು ಹೋಗಲಿದೆ.

ಮಜಾ ರನ್​ ಉದ್ದಕ್ಕೂ ಚಿಯರ್​ ವಲಯಗಳನ್ನು ಸ್ಥಾಪಿಸಲಾಗುತ್ತದೆ. ವಿಧಾನಸೌಧ ಬಳಿಯ ಪ್ರಮುಖ ಸ್ಥಳಗಳು ಸಂಗೀತ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಪ್ರದರ್ಶನದ ಕೇಂದ್ರಗಳಾಗಿ ರೂಪಾಂತರಗೊಳ್ಳಲಿವೆ. ಕ್ಲಬ್​ಗಳು, ಎನ್​ಜಿಒಗಳು, ಶಾಲೆಗಳು, ಕಾಪೋರ್ರೇಟ್​ ತಂಡಗಳು ಮತ್ತು ಸಮುದಾಯ ಸಮೂಹಗಳು ಸೇರಿದಂತೆ ಉತ್ಸಾಹಿ ಗುಂಪುಗಳು ಮಾರ್ಗವನ್ನು ಸಾಲುಗಟ್ಟಿ ನಿಲ್ಲಲಿವೆ. ಈ ಮೂಲಕ ಓಟದ ಉತ್ಸಾಹವನ್ನು ಹೆಚ್ಚಿಸುವ ಮತ್ತು ಪ್ರತಿ ಹೆಜ್ಜೆಯಲ್ಲೂ ಓಟಗಾರರನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸಲಾಗುತ್ತದೆ.

ಫೋರ್ಟಿಸ್​ನಿಂದ ವೈದ್ಯಕಿಯ ಸೌಲಭ್ಯ: ವಿಶ್ವ 10ಕೆ ಓಟದ ಹೋಲ್ಡಿಂಗ್​ ಪ್ರದೇಶದಲ್ಲಿ 1 ವೈದ್ಯಕಿಯ ನಿಲ್ದಾಣ ನಿರ್ಮಿಸಲಾಗಿದೆ. ರೇಸ್​ ಮಾರ್ಗದಲ್ಲಿ 5 ವೈದ್ಯಕಿಯ ಕೇಂದ್ರ ಸ್ಥಾಪಿಸಲಾಗುವುದು. ಮಾಣೆಕ್​ ಷಾ ಪರೇಡ್​ ಮೈದಾನದೊಳಗೆ 1 ವೈದ್ಯಕಿಯ ಬೇಸ್​ ಕ್ಯಾಂಪ್​ ಇರಲಿದೆ. ತ್ವರಿತ ಪ್ರಕ್ರಿಯೆಗಾಗಿ 10 ಬೈಕುಗಳಲ್ಲಿ ವೈದ್ಯರು ತಿರುಗಲಿದ್ದಾರೆ. ರೇಸ್​ ದಿನದಂದು ಒಟ್ಟು 290 ವೈದ್ಯಕಿಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ಭಾನುವಾರದ ಓಟದ ಸ್ಪರ್ಧೆಯ ವೇಳಾಪಟ್ಟಿ

ಬೆಳಗ್ಗೆ: 5.30: ವಿಶ್ವ 10ಕೆ ಎಲೀಟ್​ ಮಹಿಳೆಯರ ವಿಭಾಗ.

ಬೆಳಗ್ಗೆ 6.08: ವಿಶ್ವ 10ಕೆ ಎಲೀಟ್​ ಪುರುಷರ ವಿಭಾಗ.

ಬೆಳಗ್ಗೆ 6.10: ಮುಕ್ತ 10ಕೆ ವಿಭಾಗ

ಬೆಳಗ್ಗೆ 8.00: ಅಂಕವಿಲಕರ ವಿಭಾಗದ 3 ಕಿಮೀ ಓಟ.

ಬೆಳಗ್ಗೆ 8.05: ಹಿರಿಯ ನಾಗರಿಕರ 3 ಕಿಮೀ ಓಟ.

ಬೆಳಗ್ಗೆ 8.30: ಮಜಾ ರನ್​ (4.2 ಕಿಮೀ).

*ನೇರಪ್ರಸಾರ: ಸೋನಿ ಸ್ಪೋರ್ಟ್ಸ್​1, ಎಚ್​ಡಿ.

ದಲೀಲಾ ರಾಯಭಾರಿ

ಅಮೆರಿಕದ ಅವಳಿ ಒಲಿಂಪಿಕ್ಸ್​ ಚಾಂಪಿಯನ್​ ಓಟಗಾರ್ತಿ ದಲೀಲಾ ಮುಹಮ್ಮದ್​ ವಿಶ್ವ 10ಕೆ ಓಟದ ಪ್ರಚಾರ ರಾಯಭಾರಿಯಾಗಿದ್ದಾರೆ. ಈಗಾಗಲೆ ಬೆಂಗಳೂರಿಗೆ ಆಗಮಿಸಿರುವ 34 ವರ್ಷದ ದಲೀಲಾ, ಭಾನುವಾರ ಓಟಗಾರರನ್ನು ಹುರಿದುಂಬಿಸಲಿದ್ದಾರೆ.

ಎಲೀಟ್​ ಅಥ್ಲೀಟ್ಸ್​ ಆಕರ್ಷಣೆ

ಉಗಾಂಡದ ಅವಳಿ ಒಲಿಂಪಿಕ್ಸ್​ ಮತ್ತು ವಿಶ್ವ ಚಾಂಪಿಯನ್​ ಜೋಶುವಾ ಚೆಪ್ಟೆಗಿ, ಕೀನ್ಯಾದ ವಿನ್ಸೆಂಟ್​ ಲಂಗಟ್​, ಇಥಿಯೋಪಿಯಾದ ಸ್ಟೀನ್​ ಕಿಸ್ಸಾ, ಗೇಬ್ರಿಯಲ್​ ಜೆರಾಲ್ಡ್​ ಗೇ, ಕೀನ್ಯಾದ ಓಟಗಾರ್ತಿ ಸಿಂಟಿಯಾ ಚೆಪ್ಗೆನೊ, ಎರಿಟ್ರಿಯನ್​ನ ರಾಹೆಲ್​ ಡೇನಿಯಲ್​, ಇಥಿಯೋಪಿಯಾದ ಅಸ್ಸಪರೆಚ್​ ಆನ್ಲೆ ಎಲೀಟ್​ ಪುರುಷ-ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲಿರುವ ಪ್ರಮುಖ ತಾರೆಯರಾಗಿದ್ದಾರೆ. ಭಾರತೀಯ ಎಲೀಟ್​ ವಿಭಾಗದಲ್ಲಿ ಕಿರಣ್​ ಮಾತ್ರೆ, ಸಾವನ್​ ರ್ಬವಲ್​, ಅಭಿಷೇಲ್​ ಪಾಲ್​, ಕವಿತಾ ಯಾದವ್​, ಸಂಜೀವನಿ ಜಾಧವ್​, ಪೂಲನ್​ ಪಾಲ್​ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಪುಣೆ ಜಾಗ್ಲರ್​ ಕೇತನ್​ ಆಕರ್ಷಣೆ

ವಿಶ್ವ 10ಕೆ ಮುಕ್ತ ಓಟ ವಿಭಾಗದಲ್ಲಿ ಪುಣೆಯ ಜಾಗ್ಲರ್​ ಕೇತನ್​ ಅಭೋಂಕರ್​ ಮೂರು ಚೆಂಡುಗಳನ್ನು ಜಾಗ್ಲಿಂಗ್​ ಮಾಡುವ ಮೂಲಕ ಓಡಲಿದ್ದಾರೆ. ಬರೀ ಓಡುವುದು ಮಾತ್ರವಲ್ಲದೆ ಜಾಗ್ಲಿಂಗ್​ ಮೂಲಕವೇ ಅವರು ರೇಸ್​ ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದಾರೆ. ಅವರು ಜಾಗ್ಲಿಂಗ್​ ಮೂಲಕ 10ಕೆ ಓಟ ಪೂರೈಸಿದ ದೇಶದ ಮೊದಲಿಗರಾಗಿದ್ದಾರೆ. 2015ರಲ್ಲಿ ಓಟಲು ಆರಂಭಿಸಿದ ಅವರು ಇದುವರೆಗೆ 100ಕ್ಕೂ ಅಧಿಕ 10ಕೆ ಓಟಗಳನ್ನು ಪೂರ್ಣಗೊಳಿಸಿದ್ದಾರೆ. "ಲಾಕ್​ಡೌನ್​ ಸಮಯದಲ್ಲಿ ಕುಟುಂಬದೊಂದಿಗೆ ಕ್ರಿಕೆಟ್​ ಆಡುವಾಗ ನಾನು ಆಕಸ್ಮಿಕವಾಗಿ ಜಾಗ್ಲಿಂಗ್​ ಅನ್ನು ಕಂಡುಕೊಂಡೆ. ನನಗೆ ಸ್ವಾಭಾವಿಕವಾಗಿಯೇ ಈ ಸಾಮರ್ಥ್ಯವಿದೆ ಎಂದು ಅರಿತುಕೊಂಡೆ. ನಂತರ ಅಂತಾರಾಷ್ಟ್ರೀಯ ಜಾಗ್ಲಿಂಗ್​ ಮಾಡುವವರಿಂದ ಪ್ರೇರಿತನಾಗಿ, ಜಾಗ್ಲಿಂಗ್​ ಮಾಡುವಾಗ ಓಡಲು ತರಬೇತಿ ಪಡೆದೆ. 5ಕೆ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಜಾಗ್ಲಿಂಗ್​ ಮೂಲಕ ಓಡಿದೆ. ಜನರ ಸಕಾರಾತ್ಮಕ ಬೆಂಬಲ ನನಗೆ ಇದರಲ್ಲಿ ಮುಂದುವರಿಯಲು ಪ್ರೇರಣೆ ನೀಡಿತು' ಎಂದು ಸಾಫ್ಟ್​ವೇರ್​ ವೃತ್ತಿಪರರಾಗಿರುವ ಅಭೋಂಕರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net