

ಹೈದರಾಬಾದ್: ಆಂಗ್ಲರ ಬಜ್ಬಾಲ್ ಆಟಕ್ಕೆ ಅದೇ ರೀತಿಯ ಆಕ್ರಮಣಕಾರಿ ಪ್ರತಿತಂತ್ರಕ್ಕೆ ಭಾರತ ಮೊರೆ ಹೋಗುವುದಿಲ್ಲ. ಹಾಗೆಂದು ಹಿಂದೆಯೂ ಸರಿಯುವುದಿಲ್ಲ. ಭಾರತ ತಂಡ ಪರಿಸ್ಥಿತಿಗೆ ತಕ್ಕಂತೆ ಯೋಜನೆಗಳನ್ನು ಕಾರ್ಯಗತಗೊಳಿಸಲಿದೆ ಎಂದು ದ್ರಾವಿಡ್ ಹೇಳಿದರು. "ನಾವೂ ಅಲ್ಟ್ರಾ ಆಕ್ರಮಣಕಾರಿ ಆಟಕ್ಕಿಳಿಯುವುದಿಲ್ಲ. ಪರಿಸ್ಥಿತಿಗೆ ತಕ್ಕಂತೆ ಆಟವಾಡುತ್ತೇವೆ. ಆದರೆ ನಮ್ಮ ಬ್ಯಾಟಿಂಗ್ ಸರದಿಯ ಅಗ್ರ 6-7 ಬ್ಯಾಟರ್ಗಳೂ ಸ್ವಾಭಾವಿಕವಾಗಿಯೇ ಸಕಾರಾತ್ಮಕ ಆಟ ಆಡಬಲ್ಲವರಾಗಿದ್ದಾರೆ. ದೀರ್ಘಕಾಲ ಬ್ಯಾಟಿಂಗ್ ಮಾಡುವುದೇ ನಮ್ಮ ಆದ್ಯತೆ ಆಗಿರಲಿದೆ. ಹಾಗೆಂದು ರಕ್ಷಣಾತ್ಮಕ ತಂತ್ರಕ್ಕೆ ಮೊರೆ ಹೋಗುವುದಿಲ್ಲ' ಎಂದು ದ್ರಾವಿಡ್ ತಿಳಿಸಿದರು.
ಬ್ರೆಂಡನ್ ಮೆಕ್ಕಲಂ ಕೋಚ್ ಮತ್ತು ಬೆನ್ ಸ್ಟೋಕ್ಸ್ ನಾಯಕರಾದ ಬಳಿಕ ಟೆಸ್ಟ್ನಲ್ಲೂ ಆಕ್ರಮಣಕಾರಿಯಾಗಿ ಆಡುತ್ತಿರುವ ಇಂಗ್ಲೆಂಡ್ ಕೊನೇ 18 ಟೆಸ್ಟ್ಗಳಲ್ಲಿ 13ರಲ್ಲಿ ಗೆಲುವು ಸಾಧಿಸಿದೆ. "ಪಾಕಿಸ್ತಾನ, ನ್ಯೂಜಿಲೆಂಡ್, ಆಸ್ಟ್ರೆಲಿಯಾದಲ್ಲಿ ಇಂಗ್ಲೆಂಡ್ ತಂಡ ಬಜ್ಬಾಲ್ ಮೂಲಕವೇ ಯಶಸ್ಸು ಕಂಡಿದೆ. ಹೀಗಾಗಿ ನಾವು ಅವರ ತಂತ್ರವನ್ನು ಗೌರವಿಸುತ್ತೇವೆ. ಆದರೆ ಭಾರತದ ಪಿಚ್ಗಳು ಅವರಿಗೆ ಸವಾಲು ಒಡ್ಡಲಿವೆ. ನಮ್ಮ ಬೌಲರ್ಗಳೂ ಅನುಭವಿಗಳಾಗಿದ್ದು, ಆಂಗ್ಲರ ಆಕ್ರಮಣಕ್ಕೆ ಯಾವ ರೀತಿ ತಿರುಗೇಟು ನೀಡಲಿದ್ದಾರೆ ಎಂಬ ಕುತೂಹಲ ನನಗೂ ಇದೆ' ಎಂದು ದ್ರಾವಿಡ್ ಹೇಳಿದರು.
ಬುಮ್ರಾಗೆ ವಿಕೆಟ್ ಬೇಟೆ ವಿಶ್ವಾಸ
ಆಂಗ್ಲರ ಆಕ್ರಮಣಕಾರಿ ಬಜ್ಬಾಲ್ ಕಾರ್ಯತಂತ್ರವೂ ತನಗೆ ಹೆಚ್ಚಿನ ವಿಕೆಟ್ ಕಬಳಿಸುವ ಅವಕಾಶಗಳನ್ನು ಸೃಷ್ಟಿಸಲಿವೆ ಎಂದು ಭಾರತ ಟೆಸ್ಟ್ ತಂಡದ ಉಪನಾಯಕ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್ಅನ್ನು ಆಡುವ ಮತ್ತೊಂದು ಹೊಸ ಆಕ್ರಮಣಕಾರಿ ಪ್ರಕಾರವನ್ನು ಇಂಗ್ಲೆಂಡ್ ತಂಡ ತೋರಿಸಿಕೊಟ್ಟಿದೆ ಎಂದಿರುವ ಬುಮ್ರಾ, ಓರ್ವ ಬೌಲರ್ ಆಗಿ ನಾನು ಈ ಆಕ್ರಮಣಕಾರಿ ಆಟದ ಲಾಭ ಪಡೆದು ಹೆಚ್ಚಿನ ವಿಕೆಟ್ಗಳನ್ನು ಬಾಚಿಕೊಳ್ಳಲು ಪ್ರಯತ್ನಿಸಲಿದ್ದೇನೆ ಎಂದಿದ್ದಾರೆ.
ಹೈದರಾಬಾದ್ನಲ್ಲಿ ಸ್ಪಿನ್ ಸ್ನೇಹಿ ಪಿಚ್
ಇಂಗ್ಲೆಂಡ್ ವಿರುದ್ಧ ಗುರುವಾರದಿಂದ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಹೈದರಾಬಾದ್ನಲ್ಲಿ ನಿರೀಕ್ಷೆಯಂತೆಯೇ ಸ್ಪಿನ್ ಸ್ನೇಹಿ ಪಿಚ್ ಸಿದ್ಧಪಡಿಸಲಾಗಿದೆ. ಪಿಚ್ ಸ್ಪಿನ್ ಸ್ನೇಹಿಯಾಗಿರಲಿದೆ ಎಂದು ಕೋಚ್ ದ್ರಾವಿಡ್ ಕೂಡ ಲೆಕ್ಕಾಚಾರ ಹಾಕಿದ್ದಾರೆ. ಆದರೆ ಮೊದಲ ದಿನದಿಂದಲೇ ಪಿಚ್ ಸ್ಪಿನ್ನರ್ಗಳಿಗೆ ನೆರವಾಗಬಹುದೇ ಎಂಬುದನ್ನು ಹೇಳಲಾಗದು ಎಂದಿದ್ದಾರೆ.