

ನವದೆಹಲಿ: ವಿಶ್ವದ ಶ್ರೀಮಂತ ಟಿ20 ಲೀಗ್ ಎನಿಸಿರುವ ಐಪಿಎಲ್ ಟೂರ್ನಿಯ 17ನೇ ಆವೃತ್ತಿಯನ್ನು ಮಾರ್ಚ್ 22ರಿಂದ ಮೇ 26ರವರೆಗೆ ನಡೆಸಲು ಬಿಸಿಸಿಐ ಯೋಜನೆ ಹಾಕಿಕೊಂಡಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯ ದಿನಾಂಕ ಪ್ರಕಟಗೊಂಡ ಬಳಿಕ ಬಿಸಿಸಿಐ, ಐಪಿಎಲ್ ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದೆ. ಚುನಾವಣೆಯ ನಡುವೆಯೂ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ಸಂಟಿಸಲು ಬಿಸಿಸಿಐ ಯೋಜಿಸಿದೆ.
ವೆಸ್ಟ್ ಇಂಡೀಸ್-ಅಮೆರಿಕದಲ್ಲಿ ಟಿ20 ವಿಶ್ವಕಪ್ ಟೂರ್ನಿ ಜೂನ್ 1ರಿಂದ ನಡೆಯಲಿದೆ. ಅದಕ್ಕೆ 5 ದಿನ ಮುನ್ನ ಐಪಿಎಲ್ ಟೂರ್ನಿ ಮುಕ್ತಾಯಗೊಳ್ಳಲಿದೆ. ಆದರೆ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಜೂನ್ 5ರಂದು ತನ್ನ ಮೊದಲ ಪಂದ್ಯ ಆಡಲಿದೆ. ಅಂದರೆ ಭಾರತದ ಆಟಗಾರರಿಗೆ ವಿಶ್ವಕಪ್ ಸಿದ್ಧತೆಗೆ 9 ದಿನಗಳ ಕಾಲಾವಕಾಶ ಲಭಿಸಲಿದೆ.
ಈ ನಡುವೆ ಐಪಿಎಲ್ಗೆ ಸಂಪೂರ್ಣವಾಗಿ ತನ್ನ ಆಟಗಾರರನ್ನು ಬಿಟ್ಟುಕೊಡುವ ಬಗ್ಗೆ ಹಲವು ದೇಶಗಳ ಕ್ರಿಕೆಟ್ ಮಂಡಳಿಗಳು ಈಗಾಗಲೆ ಬಿಸಿಸಿಐಗೆ ಭರವಸೆ ನೀಡಿವೆ ಎನ್ನಲಾಗಿದೆ. ಆದರೂ ಕೆಲವು ಪ್ರಮುಖ ವಿದೇಶಿ ಆಟಗಾರರು, ಟಿ20 ವಿಶ್ವಕಪ್ ಸಿದ್ಧತೆಗಾಗಿ ತಾವೇ ಖುದ್ದಾಗಿ ಐಪಿಎಲ್ನಿಂದ ಬೇಗನೆ ನಿರ್ಗಮಿಸಲು ಮುಂದಾದರೆ ಬಿಸಿಸಿಐಗೆ ಅದನ್ನು ತಡೆಯಲು ಸಾಧ್ಯವಾಗದು. ಸದ್ಯಕ್ಕೆ ಬಿಸಿಸಿಐಗೆ ಮಾತ್ರ, ಚುನಾವಣೆಯ ನಡುವೆಯೂ ಭಾರತದಲ್ಲೇ ಸಂಪೂರ್ಣ ಐಪಿಎಲ್ ಆಯೋಜಿಸುವುದೇ ಪ್ರಮುಖ ಸವಾಲು ಎನಿಸಿದೆ.