

ಲಂಡನ್: ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ವೈಯಕ್ತಿಕ ಕಾರಣ ನೀಡಿ ಭಾರತ ಪ್ರವಾಸದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ಬಜ್ಬಾಲ್ ಕಾರ್ಯತಂತ್ರದ ಪ್ರಮುಖ ಭಾಗವಾಗಿದ್ದ ಹ್ಯಾರಿ ಬ್ರೂಕ್ ಗೈರು ಆಂಗ್ಲರಿಗೆ ಸರಣಿ ಮುನ್ನವೇ ಭಾರಿ ಹಿನ್ನಡೆ ತಂದಿದೆ.
ಭಾರತಕ್ಕೆ ಆಗಮಿಸುವುದಕ್ಕೆ ಮುನ್ನ ಅಬುಧಾಬಿಯಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಇಂಗ್ಲೆಂಡ್ ತಂಡದೊಂದಿಗೆ ಬ್ರೂಕ್ ಇದ್ದರು. ಆದರೆ ಇದೀಗ ಅವರು ಅಬುಧಾಬಿಯಿಂದ ಭಾರತಕ್ಕೆ ಬರದೆ, ತವರಿಗೆ ಮರಳುತ್ತಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ. 5 ಪಂದ್ಯಗಳ ಟೆಸ್ಟ್ ಸರಣಿ ಗುರುವಾರ ಹೈದರಾಬಾದ್ ಶುರುವಾಗಲಿದ್ದು, ಮಾರ್ಚ್ 11ರವರೆಗೂ ನಡೆಯಲಿದೆ. ಆದರೆ 24 ವರ್ಷದ ಬ್ರೂಕ್ ಸರಣಿಯ ಕೊನೇ ಕೆಲ ಪಂದ್ಯಗಳಿಗಾದರೂ ತಂಡ ಸೇರಿಕೊಳ್ಳುವ ಸಾಧ್ಯತೆಯನ್ನು ಇಸಿಬಿ ತಳ್ಳಿಹಾಕಿದೆ.
2022ರಲ್ಲಿ ದಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಪದಾರ್ಪಣೆ ಮಾಡಿದ್ದ ಹ್ಯಾರಿ ಬ್ರೂಕ್ ಇದುವರೆಗೆ ಆಡಿರುವ 12 ಟೆಸ್ಟ್ಗಳಲ್ಲಿ 4 ಶತಕಗಳ ಸಹಿತ 62ರ ಸರಾಸರಿಯಲ್ಲಿ 1,1181 ರನ್ ಸಿಡಿಸಿದ್ದಾರೆ. ಬಜ್ಬಾಲ್ ಕಾರ್ಯತಂತ್ರದ ಭಾಗವಾಗಿ ಅವರು 91.76 ಸ್ಟ್ರೆ$ಕ್ರೇಟ್ನಲ್ಲಿ ರನ್ ಗಳಿಸಿರುವುದು ಗಮನಾರ್ಹ. ಈ ಮುನ್ನ ಪಾಕ್ ಪ್ರವಾಸದಲ್ಲಿ ಇಂಗ್ಲೆಂಡ್ ಭರ್ಜರಿ ಗೆಲುವು ಸಾಧಿಸುವಲ್ಲಿ ಬ್ರೂಕ್ ಪ್ರಮುಖ ಪಾತ್ರ ವಹಿಸಿದ್ದರು.
ಲಾರೆನ್ಸ್ ಬದಲಿ ಆಟಗಾರ
ಮಧ್ಯಮ ಕ್ರಮಾಂಕದ ಬ್ಯಾಟರ್ ಡೇನ್ ಲಾರೆನ್ಸ್ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಹ್ಯಾರಿ ಬ್ರೂಕ್ ಸ್ಥಾನ ತುಂಬಲಿದ್ದಾರೆ. 26 ವರ್ಷದ ಲಾರೆನ್ಸ್ ಸೋಮವಾರ ಭಾರತಕ್ಕೆ ಆಗಮಿಸಲಿದ್ದಾರೆ. ಇದುವರೆಗೆ 11 ಟೆಸ್ಟ್ ಆಡಿರುವ ಲಾರೆನ್ಸ್ 4 ಅರ್ಧಶತಕಗಳ ಸಹಿತ 551 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ತಂಡ ಆಗಮನ
ಭಾರತ ಪ್ರವಾಸಕ್ಕೆ ಪೂರ್ವಭಾವಿಯಾಗಿ 10 ದಿನಗಳ ಕಾಲ ಅಬುಧಾಬಿಯಲ್ಲಿ ಸಿದ್ಧತೆ ನಡೆಸಿರುವ ಇಂಗ್ಲೆಂಡ್ ತಂಡ ಭಾನುವಾರ ಹೈದರಾಬಾದ್ಗೆ ಆಗಮಿಸಿದ್ದು, ಸೋಮವಾರದಿಂದ ಇಲ್ಲೇ ಅಭ್ಯಾಸ ನಡೆಸಲಿದೆ.