2025ರ ಜನವರಿ 18ರಿಂದ ಮಹಿಳೆಯರ 19 ವಯೋಮಿತಿ ವಿಶ್ವಕಪ್​; ಭಾರತಕ್ಕೆ ವಿಂಡೀಸ್​ ಮೊದಲ ಎದುರಾಳಿ

web u19 wc
Published on

ನವದೆಹಲಿ: ಮುಂದಿನ ವರ್ಷ ಜನವರಿ 18ರಿಂದ ಫೆಬ್ರವರಿ 2ರವರೆಗೆ ಮಲೇಷ್ಯಾದಲ್ಲಿ ನಡೆಯಲಿರುವ 2ನೇ ಆವೃತ್ತಿಯ ಮಹಿಳೆಯರ 19 ವಯೋಮಿತಿಯ ಟಿ20 ವಿಶ್ವಕಪ್​ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಭಾನುವಾರ ಬಿಡುಗಡೆಗೊಳಿಸಿದೆ. ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದು ಬೀಗಿದ್ದ ಭಾರತ ತಂಡ ಹಾಲಿ ಚಾಂಪಿಯನ್​ ಪಟ್ಟದೊಂದಿಗೆ ವೆಸ್ಟ್​ ಇಂಡೀಸ್​ ವಿರುದ್ಧ ಜನವರಿ 19ರಂದು ಅಭಿಯಾನ ಆರಂಭಿಸಲಿದೆ.

ಭಾರತದ ಜತೆಗೆ ವೆಸ್ಟ್​ ಇಂಡೀಸ್​, ಶ್ರೀಲಂಕಾ ಮತ್ತು ಆತಿಥೇಯ ಮಲೇಷ್ಯಾ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ದಕ್ಷಿಣ ಆಫ್ರಿಕಾದಲ್ಲಿ ಕಳೆದ ವರ್ಷ ನಡೆದ ಚೊಚ್ಚಲ ಆವೃತ್ತಿಯ ಫೈನಲ್​ನಲ್ಲಿ ಶೆಫಾಲಿ ವರ್ಮ ಸಾರಥ್ಯದ ಭಾರತ ತಂಡ ಇಂಗ್ಲೆಂಡ್​ ವಿರುದ್ಧ ಗೆದ್ದು ಪ್ರಶಸ್ತಿ ಒಲಿಸಿಕೊಂಡಿತ್ತು.

ಆಸೀಸ್​-ಸ್ಕಾಟ್ಲೆಂಡ್​ ಉದ್ಘಾಟನಾ ಪಂದ್ಯ

ಜನವರಿ 18ರಂದು ಆಸ್ಟ್ರೆಲಿಯಾ-ಸ್ಕಾಟ್ಲೆಂಡ್​ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಟೂರ್ನಿಯ ಮೊದಲ ದಿನವೇ ಒಟ್ಟು 4 ಪಂದ್ಯಗಳು ನಡೆಯಲಿವೆ. ಇಂಗ್ಲೆಂಡ್​-ಐರ್ಲೆಂಡ್​, ಸಮೋವಾ-ಆಫ್ರಿಕಾದ ಅರ್ಹತಾ ತಂಡ, ಬಾಂಗ್ಲಾದೇಶ-ಏಷ್ಯಾದ ಅರ್ಹತಾ ತಂಡಗಳ ನಡುವೆ ಇತರ 3 ಪಂದ್ಯಗಳು ನಡೆಯಲಿವೆ. ಜನವರಿ 20, 22ರಂದು ಒಂದೇ ದಿನ ಒಟ್ಟು ತಲಾ 6 ಪಂದ್ಯಗಳು ನಡೆಯಲಿವೆ.

ಟೂರ್ನಿ ಸ್ವರೂಪ: ಟೂರ್ನಿಯಲ್ಲಿ ಭಾಗವಹಿಸುವ 16 ತಂಡಗಳನ್ನು ತಲಾ 4ರಂತೆ 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ರೌಂಡ್​ ರಾಬಿನ್​ ಮಾದರಿಯಲ್ಲಿ ಎಲ್ಲ ತಂಡಗಳು ತಲಾ 3 ಲೀಗ್​ ಪಂದ್ಯಗಳನ್ನು ಆಡಿದ ನಂತರ, ಪ್ರತಿ ಗುಂಪಿನ ಅಗ್ರ 3 ತಂಡಗಳು ಸೂಪರ್​-6 ಹಂತಕ್ಕೇರಲಿವೆ. ಪ್ರತಿ ಗುಂಪಿನಲ್ಲಿ ಕೊನೇ ಸ್ಥಾನ ಪಡೆದ ತಂಡಗಳು ಕೊನೇ ಸ್ಥಾನದ ಪ್ಲೇಆಫ್​​ನಲ್ಲಿ ಆಡಲಿವೆ. ಸೂಪರ್​ ಸಿಕ್ಸ್​ಗೆ ಅರ್ಹತೆ ಪಡೆಯುವ 12 ತಂಡಗಳನ್ನು ತಲಾ 6ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗುವುದು. ಎ, ಡಿ ಗುಂಪಿನ ಅಗ್ರ 3 ತಂಡಗಳು ಸೂಪರ್​-6ನಲ್ಲಿ ಗ್ರೂಪ್​&1 ಮತ್ತು ಬಿ, ಸಿ ಗುಂಪಿನ ಅಗ್ರ 3 ತಂಡಗಳು ಗ್ರೂಪ್-2ನಲ್ಲಿ ಸ್ಥಾನ ಪಡೆಯಲಿವೆ. ಲೀಗ್​ ಹಂತದಲ್ಲಿ ಗಳಿಸಿದ (ಸೂಪರ್​-6 ಹಂತಕ್ಕೇರಿದ ತಂಡಗಳ ವಿರುದ್ಧ) ರನ್​ರೇಟ್​ ಮತ್ತು ಅಂಕಗಳನ್ನು ಸೂಪರ್​-6 ಹಂತಕ್ಕೂ ಕೊಂಡೊಯ್ಯಲಾಗುತ್ತದೆ. ಸೂಪರ್​-6ನಲ್ಲಿ ಎದುರಾಳಿ ಗುಂಪಿನ 3 ತಂಡಗಳನ್ನು ತಲಾ ಒಮ್ಮೆ ಎದುರಿಸಲಾಗುತ್ತದೆ. ಅಂತಿಮವಾಗಿ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್​ಗೇರಲಿವೆ. ಜನವರಿ 31ರಂದು ಸೆಮಿಫೈನಲ್ಸ್​ ಮತ್ತು ಫೆಬ್ರವರಿ 2ರಂದು ಫೈನಲ್​ ಪಂದ್ಯ ನಡೆಯಲಿದೆ. ಸೆಮಿಫೈನಲ್ಸ್​ ಮತ್ತು ಫೈನಲ್​ ಪಂದ್ಯಗಳಿಗೆ ಮಾತ್ರ ಮೀಸಲು ದಿನವಿರಲಿದೆ.

ಟೂರ್ನಿಯಲ್ಲಿ ಭಾಗವಹಿಸುವ 14 ತಂಡಗಳು ಈಗಾಗಲೆ ಅಂತಿಮಗೊಂಡಿದ್ದು, ಇನ್ನೆರಡು ತಂಡಗಳು ಆಫ್ರಿಕಾ ಮತ್ತು ಏಷ್ಯಾದ ಅರ್ಹತಾ ಟೂರ್ನಿಯಿಂದ ಆಯ್ಕೆಯಾಗಲಿವೆ. ಟೂರ್ನಿಯಲ್ಲಿ ಒಟ್ಟು 41 ಪಂದ್ಯಗಳು ನಡೆಯಲಿವೆ. ಮಲೇಷ್ಯಾದ 4 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ.

ಗುಂಪುಗಳು:

ಎ: ಭಾರತ, ವೆಸ್ಟ್​ ಇಂಡೀಸ್​, ಶ್ರೀಲಂಕಾ, ಮಲೇಷ್ಯಾ.

ಬಿ: ಇಂಗ್ಲೆಂಡ್​, ಪಾಕಿಸ್ತಾನ, ಐರ್ಲೆಂಡ್​, ಅಮೆರಿಕ.

ಸಿ: ನ್ಯೂಜಿಲೆಂಡ್​, ದಕ್ಷಿಣ ಆಫ್ರಿಕಾ, ಸಮೋವಾ, ಆಫ್ರಿಕಾದ ಅರ್ಹತಾ ತಂಡ.

ಡಿ: ಆಸ್ಟ್ರೆಲಿಯಾ, ಬಾಂಗ್ಲಾದೇಶ, ಸ್ಕಾಟ್ಲೆಂಡ್​, ಏಷ್ಯಾದ ಅರ್ಹತಾ ತಂಡ.

ಭಾರತದ ಲೀಗ್​ ಪಂದ್ಯಗಳು

ದಿನಾಂಕ: ಎದುರಾಳಿ

ಜನವರಿ 19: ವೆಸ್ಟ್​ ಇಂಡೀಸ್​

ಜನವರಿ 21: ಮಲೇಷ್ಯಾ

ಜನವರಿ 23: ಶ್ರೀಲಂಕಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net