

ದುಬೈ: ಪುರುಷರ ಟಿ20 ವಿಶ್ವಕಪ್ ಗೆಲುವಿನ ಸಾಧನೆ ಪುನರಾವರ್ತಿಸುವ ಹಂಬಲದಲ್ಲಿ ಕಣಕ್ಕಿಳಿದ ಭಾರತದ ಮಹಿಳೆಯರ ತಂಡ ಮೊದಲ ಪಂದ್ಯದಲ್ಲೇ ನ್ಯೂಜಿಲೆಂಡ್ ಎದುರು ಎಡವಿದೆ. ಇದರಿಂದ ಭಾರತದ ಸೆಮೀಸ್ ಹಾದಿ ಕಠಿಣಗೊಂಡಿದೆ. ಈ ಸೋಲಿನ ನಡುವೆ ಪಂದ್ಯದಲ್ಲಿ ರನೌಟ್-ಡೆಡ್ಬಾಲ್ ವಿವಾದವೂ ಭಾರತವನ್ನು ಕಾಡಿತು.
ದೀಪ್ತಿ ಶರ್ಮ ಎಸೆದ ಪಂದ್ಯದ 14ನೇ ಓವರ್ನ ಕೊನೇ ಎಸೆತದಲ್ಲಿ ಅಮೆಲಿಯಾ ಕೆರ್ 2ನೇ ರನ್ ಕಸಿಯಲು ಯತ್ನಿಸಿದಾಗ ಕೀಪರ್ ರಿಚಾ ಘೋಷ್, ಅವರನ್ನು ರನೌಟ್ ಮಾಡಿದರು. ಆದರೆ ಅಂಪೈರ್, ಡೆಡ್ಬಾಲ್ ಎಂದು ಪರಿಗಣಿಸಿ ರನೌಟ್ ತೀರ್ಪು ನೀಡಲು ನಿರಾಕರಿಸಿದರು. ಕೆರ್-ಡಿವೈನ್ ಮೊದಲ ರನ್ ಗಳಿಸಿದ ಬೆನ್ನಲ್ಲೇ ಅಂಪೈರ್, ಬೌಲರ್ ದೀಪ್ತಿಗೆ ಕ್ಯಾಪ್ ಮರಳಿಸಿದರು. ಈ ನಡುವೆ ಕಿವೀಸ್ ಜೋಡಿ 2ನೇ ರನ್ ಕಸಿಯಲು ಯತ್ನಿಸಿದಾಗ ಭಾರತ ರನೌಟ್ ಮಾಡಿದರೂ, ಅಂಪೈರ್ ಔಟ್ ನೀಡಲಿಲ್ಲ. ಇದರಿಂದ ಅಂಪೈರ್ ಮತ್ತು ನಾಯಕಿ ಹರ್ಮಾನ್ಪ್ರೀತ್ ಕೌರ್ ನಡುವೆ ಕೆಲಕಾಲ ವಾಗ್ವಾದ ಏರ್ಪಟ್ಟಿತು.
ಈ ವಿವಾದ ಭಾರತದ ಆಟಗಾರ್ತಿಯರನ್ನು ಮಾನಸಿಕವಾಗಿಯೂ ಕುಗ್ಗಿಸಿತು. ಇದು ಕೂಡ ಬಳಿಕ ಅವರ ನಿರ್ವಹಣೆಯ ಮೇಲೆ ಪರಿಣಾಮ ಬೀರಿತು. ಈ ವಿವಾದದಿಂದಾಗಿ ಹರ್ಮಾನ್ಪ್ರೀತ್ ಕೌರ್ ಇನ್ನು ಐಸಿಸಿಯಿಂದ ದಂಡ ಅಥವಾ ನಿಷೇಧ ಶಿಕ್ಷೆಗೂ ಗುರಿಯಾಗುವ ಸಾಧ್ಯತೆ ಕಾಣಿಸಿದೆ. ಅಂಪೈರ್ ಜತೆಗೆ ವಾಗ್ವಾದ ನಡೆಸುವ ಮೂಲಕ ಅವರು ಐಸಿಸಿ ನೀತಿಸಂಹಿತೆಯನ್ನು ಉಲ್ಲಂಘಿಸಿದಂತಾಗಿದೆ.