

ಮೆಲ್ಬೋರ್ನ್: ಟೂರ್ನಿಯ ತನ್ನ ಅತ್ಯಂತ ಕೆಟ್ಟ ದಿನವನ್ನು ಫೈನಲ್ನಲ್ಲಿ ಎದುರಿಸಿದ ಭಾರತ ತಂಡ ಟಿ20 ಮಹಿಳಾ ವಿಶ್ವಕಪ್ನಲ್ಲಿ ರನ್ನರ್ಅಪ್ ಆಗಿದೆ. ತನ್ನ ಸರ್ವಾಂಗೀಣ ನಿರ್ವಹಣೆಯ ಮೂಲಕ ಮಹಿಳಾ ಭಾರತ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ತಂಡ 5ನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನವಾದ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಅಗಾಧ ಶಕ್ತಿಯನ್ನು ಪರಿಚಯಿಸಿತು. 2003ರ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ನ ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯವನ್ನೇ ನೆನಪಿಸಿದಂತಿದ್ದ ಪಂದ್ಯದಲ್ಲಿ ಯಾವುದೂ ಭಾರತ ಮಹಿಳಾ ತಂಡ ಎಣಿಸಿದಂತೆ ಸಾಗಲಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ, ಆರಂಭಿಕ ಬ್ಯಾಟುಗಾರ್ತಿ ಅಲೀಸಾ ಹೀಲಿಯ ಧೈರ್ಯಶಾಲಿ ಇನಿಂಗ್ಸ್ (75ರನ್, 39 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಬೆಥ್ ಮೂನಿಯ (78 ರನ್, 54 ಎಸೆತ, 10 ಬೌಂಡರಿ) ಜವಾಬ್ದಾರಿಯುತ ಆಟದ ಮೂಲಕ 4 ವಿಕೆಟ್ಗೆ 184 ರನ್ಗಳ ಬೃಹತ್ ಮೊತ್ತ ಪೇರಿಸಿತು.
ಪ್ರತಿಯಾಗಿ ಟೂರ್ನಿಯಲ್ಲಿ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದ 16ರ ಹರೆಯದ ಬ್ಯಾಟುಗಾರ್ತಿ ಶೆಫಾಲಿ ವರ್ಮರನ್ನು ಮೊದಲ ಓವರ್ನಲ್ಲಿಯೇ ಕಳೆದುಕೊಂಡ ಭಾರತ, ಒಮ್ಮೆಯೂ ಆಸೀಸ್ಗೆ ಸವಾಲೊಡ್ಡುವ ಪ್ರಯತ್ನವನ್ನೇ ಮಾಡಲಿಲ್ಲ. 19.1 ಓವರ್ಗಳಲ್ಲಿ ಭಾರತ ತಂಡ 99 ರನ್ಗೆ ಆಲೌಟ್ ಆಯಿತು. ಮೇಗನ್ ಸ್ಕಟ್ (18ಕ್ಕೆ 4) ಹಾಗೂ ಜೆಸ್ ಜೊನಾಸೆನ್ (20ಕ್ಕೆ 3) ಯೋಜನಾಬದ್ಧ ದಾಳಿಯ ಮೂಲಕ ಭಾರತದ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಮುರಿದರು.
4ನೇ ಓವರ್ ಮುಗಿಯುವ ವೇಳೆಗಾಗಲೇ ಜೆಮೀಮಾ ರೋಡ್ರಿಗಸ್ (0) ಹಾಗೂ ಸ್ಮೃತಿ ಮಂದನಾ ಎಡಗೈ ಆಫ್ಸ್ಪಿನ್ ದಾಳಿಯಲ್ಲಿ ಮಿಡ್ಆನ್ ಬಳಿ ಕ್ಯಾಚ್ ನೀಡಿ ಹೊರನಡೆದರು. ಆ ನಂತರ ಆಸೀಸ್ ಎಷ್ಟು ಬೇಗ ಗೆಲುವು ದಾಖಲಿಸಲಿದೆ ಎನ್ನುವ ಲೆಕ್ಕಾಚಾರ ಮಾತ್ರವೇ ಉಳಿದುಕೊಂಡಿತ್ತು.
ಹರ್ವನ್ಪ್ರೀತ್ ಮತ್ತೆ ಫೇಲ್
ಇಡೀ ಟೂರ್ನಿಯಲ್ಲಿ ಕಳಪೆ ಫಾಮರ್್ನಲ್ಲಿದ್ದ ಹರ್ವನ್ಪ್ರೀತ್ ಫೈನಲ್ನಲ್ಲಾದರೂ ಫಾಮರ್್ಗೆ ಬರುವ ಆಸೆ ಸುಳ್ಳಾಯಿತು. ಅಪಾಯಕಾರಿ ಸ್ಲಾಗ್ ಸ್ಲೀಪ್ ಮಾಡುವ ಯತ್ನದಲ್ಲಿ ವಿಕೆಟ್ ಕೈಚೆಲ್ಲುವುದರೊಂದಿಗೆ ಭಾರತ 30 ರನ್ಗೆ 4 ವಿಕೆಟ್ ಕಳೆದುಕೊಂಡಿತ್ತು.
ಒಂದು ಬೌಂಡರಿಯೊಂದಿಗೆ ಕೆಲ ಹೊತ್ತು ಕ್ರೀಸ್ನಲ್ಲಿದ್ದ ವೇದಾ ಕೃಷ್ಣಮೂರ್ತಿ 19 ರನ್ ಬಾರಿಸಿದರು. ಗಮನಸೆಳೆಯುವ ಆಟವಾಡಿದ ದೀಪ್ತಿ ಶರ್ಮ (33ರನ್, 35 ಎಸೆತ, 2 ಬೌಂಡರಿ) ಭಾರತದ ಪರವಾಗಿ ಗರಿಷ್ಠ ರನ್ ಬಾರಿಸಿದರು. ಕೊನೇ 13 ಎಸೆತಗಳಲ್ಲಿ ಭಾರತದ ನಾಲ್ಕು ವಿಕೆಟ್ ಪತನವಾಗುವುದರೊಂದಿಗೆ ಭಾರತ ತಂಡ 100 ರನ್ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.
ಟ್ರೋಫಿ ತಪ್ಪಿಸಿದ ಕೆಟ್ಟ ಫೀಲ್ಡಿಂಗ್
ದೀಪ್ತಿ ಶರ್ಮ ಎಸೆದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ್ದ ಅಲೀಸಾ ಹೀಲಿ, 9 ರನ್ ಬಾರಿಸಿದ್ದ ವೇಳೆ ಜೀವದಾನ ಪಡೆದರು. ಮೊದಲ ಓವರ್ನ 5ನೇ ಎಸೆತವನ್ನು ಹೀಲಿ ಕವರ್ಸ್ನತ್ತ ಅಟ್ಟಿದ್ದರು. ಆದರೆ, ಅನಗತ್ಯವಾಗಿ ಡೈವ್ ಮಾಡಿ ಕ್ಯಾಚ್ ಹಿಡಿಯುವ ಪ್ರಯತ್ನ ಮಾಡಿದ ಶೆಫಾಲಿ ಕ್ಯಾಚ್ ಕೈಚೆಲ್ಲಿದರು. ಆ ಓವರ್ನಲ್ಲಿ ದೀಪ್ತಿ 14 ರನ್ ಬಿಟ್ಟುಕೊಟ್ಟರು.ಆ ಬಳಿಕ 8 ರನ್ ಬಾರಿಸಿದ್ದ ವೇಳೆ ಬೆಥ್ ಮೂನಿಯ ರಿಟರ್ನ್ ಕ್ಯಾಚ್ಅನ್ನು ಪಡೆಯುವ ಯತ್ನದಲ್ಲಿ ರಾಜೇಶ್ವರಿ ಗಾಯಕ್ವಾಡ್ ವಿಫಲರಾದರು.
ಆರಂಭದಲ್ಲಿಯೇ ಸಿಕ್ಕ ಜೀವದಾನದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಹೀಲಿ-ಮೂನಿ ಜೋಡಿ ಮೊದಲ ವಿಕೆಟ್ಗೆ 70 ಎಸೆತದಲ್ಲಿ 115 ರನ್ ಜತೆಯಾಟವಾಡುವ ಮೂಲಕ ಭದ್ರಬುನಾದಿ ಹಾಕಿದರು. 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹೀಲಿ, ಶಿಖಾ ಪಾಂಡೆ ಎಸೆದ 11ನೇ ಓವರ್ನ 3ನೇ ಎಸೆತವನ್ನು ಸಿಕ್ಸರ್ಗಟ್ಟಿ ತಂಡದ ಮೊತ್ತವನ್ನು ಶತಕದ ಗಡಿ ದಾಟಿಸಿದರು.
ನಂತರದ ಎರಡೂ ಎಸೆತವನ್ನು ಸಿಕ್ಸರ್ಗಟ್ಟಿದ್ದರಿಂದ ಆ ಓವರ್ನಲ್ಲಿ 23 ರನ್ ಆಸೀಸ್ಗೆ ಸೇರಿತು. ಮರು ಓವರ್ನಲ್ಲಿ ಹೀಲಿ ಔಟಾದರೂ, ಆಸೀಸ್ಗೆ ಸುಲಭವಾಗಿ 200 ರನ್ಗಳ ಗಡಿ ದಾಟುವ ಅವಕಾಶವಿತ್ತು. ಒಂದೆಡೆ ಬೆಥ್ ಮೂನಿ ಅದೇ ಪ್ರಯತ್ನದಲ್ಲಿ ವೇಗವಾಗಿ ರನ್ ಕಲೆಹಾಕಿದರೆ, 17ನೇ ಓವರ್ನಲ್ಲಿ ದೀಪ್ತಿ ಶರ್ಮ ನಾಯಕಿ ಮೆಗ್ ಲ್ಯಾನಿಂಗ್ (16) ಹಾಗೂ ಆಶ್ಲೆಗ್ ಗಾರ್ಡನರ್ (2) ವಿಕೆಟ್ ಉರುಳಿಸಿ ಕಡಿವಾಣ ಹಾಕಿದರು. ಕೊನೆ ಮೂರು ಓವರ್ಗಳಲ್ಲಿ ಭಾರತ ಕೇವಲ 27 ರನ್ ನೀಡುವ ಮೂಲಕ ಆಸೀಸ್ನ 200 ರನ್ ಆಸೆಯನ್ನು ಹಾಳು ಮಾಡಿತ್ತು.
ಆಸ್ಟ್ರೇಲಿಯಾ: 4 ವಿಕೆಟ್ಗೆ 184
ಇತರ: 4. ವಿಕೆಟ್ ಪತನ: 1-115, 2-154, 3-156, 4-176. ಬೌಲಿಂಗ್: ದೀಪ್ತಿ ಶರ್ಮ 4-0-38-2, ಶಿಖಾ ಪಾಂಡೆ 4-0-52-0, ರಾಜೇಶ್ವರಿ ಗಾಯಕ್ವಾಡ್ 4-0-29-0, ಪೂನಮ್ ಯಾದವ್ 4-0-30-1, ರಾಧಾ 4-0-34-1. ಭಾರತ: 19. 1 ಓವರ್ಗಳಲ್ಲಿ 99
ಇತರ: 5. ವಿಕೆಟ್ ಪತನ: 1-2, 2-8, 3-18, 4-30, 5-58, 6-88, 7-92, 8-96, 9-97. ಬೌಲಿಂಗ್: ಮೇಗನ್ ಸ್ಕಟ್ 3.1-0-18-4, ಜೆಸ್ ಜೊನಾಸೆನ್ 4-0-20-3, ಸೋಫಿ ಮೊಲಿನೆಕ್ಸ್ 4-0-21-1, ಕಿಮ್ಮೆನ್ಸ್ 4-0-17-1, ನಿಕೋಲಾ 4-0-23-1.