

ಮುಂಬೈ: ಗಾಯದ ಸಮಸ್ಯೆಯಿಂದಾಗಿ ಟೀಮ್ ಇಂಡಿಯಾದಿಂದ ವಿರಾಮ ಪಡೆದು ಸದ್ಯ ಚೇತರಿಸಿಕೊಂಡಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 16ನೇ ಆವೃತ್ತಿಯ ಡಿವೈ ಪಾಟೀಲ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ್ದು, ಎರಡನೇ ಬಾರಿಗೆ ಶತಕ ಸಿಡಿಸಿದ್ದಾರೆ.
ರಿಲಯೆನ್ಸ್-1 ತಂಡದ ಪರ ಆಡುತ್ತಿರುವ ಪಾಂಡ್ಯ ಶುಕ್ರವಾರ ನಡೆದ ಬಿಪಿಸಿಎಲ್ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ 55 ಎಸೆತಗಳಲ್ಲಿ 158 ರನ್ ಸಿಡಿಸಿ ಗಮನಸೆಳೆದಿದ್ದಾರೆ. ಇದರಲ್ಲಿ 6 ಬೌಂಡರಿ ಮತ್ತು 20 ಸಿಕ್ಸರ್ಗಳಿದ್ದವು.
ಹಾರ್ದಿಕ್ ಟೂರ್ನಿಯಲ್ಲಿ ಸಿಡಿಸಿದ 2ನೇ ಶತಕ ಇದಾಗಿದೆ. ಇದಕ್ಕೂ ಮೊದಲು ಮಂಗಳವಾರ ನಡೆದ ಪಂದ್ಯದಲ್ಲಿ ಸಿಎಜಿ ತಂಡದ ವಿರುದ್ಧ 7 ಬೌಂಡರಿ, 10 ಸಿಕ್ಸರ್ ನೆರವಿನಿಂದ 39 ಎಸೆತಗಳಲ್ಲಿ ಬರೋಬ್ಬರಿ 105 ರನ್ ಸಿಡಿಸಿದ್ದರು.
ಚೇತರಿಕೆಯೊಂದಿಗೆ ಭರ್ಜರಿ ಫಾರ್ಮ್ಗೆ ಮರಳಿರುವ ಹಾರ್ದಿಕ್ ಮುಂಬೈ ಇಂಡಿಯನ್ಸ್ ಪರ ಐಪಿಎಲ್ನಲ್ಲಿ ಕಣಕ್ಕಿಳಿಯಲು ಸಿದ್ಧತೆ ಕೈಗೊಂಡಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ಕೂಡ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹಾರ್ದಿಕ್ ವಿಡಿಯೋ ಅಪ್ಲೋಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಪಾಂಡ್ಯ ಬ್ಯಾಟಿಂಗ್ ಮೆಚ್ಚಿಕೊಂಡಿರುವ ಭಾವಿ ಪತ್ನಿ ನತಾಶಾ ಸ್ಟಾಂಕೋವಿಕ್ ಹಾರ್ದಿಕ್ರನ್ನು ಕುಂಗ್ ಫೂ ಪಾಂಡ್ಯ ಎಂದು ಕರೆದಿದ್ದಾರೆ.
ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಿಲಯೆನ್ಸ್ ತಂಡ 238 ರನ್ ಪೇರಿಸಿತು. ಪ್ರತಿಯಾಗಿ ಬಿಪಿಸಿಎಲ್ ತಂಡ 134 ರನ್ಗೆ ಕುಸಿದು 104 ರನ್ಗಳಿಂದ ಶರಣಾಯಿತು. ಪಾಂಡ್ಯ 1 ವಿಕೆಟ್ ಕಬಳಿಸಿ ಬೌಲಿಂಗ್ನಲ್ಲೂ ಮಿಂಚಿದರು.
5 ತಿಂಗಳ ಹಿಂದಷ್ಟೇ ಬೆನ್ನು ನೋವು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾದ ಕಾರಣ ನ್ಯೂಜಿಲೆಂಡ್ ಪ್ರವಾಸಕ್ಕೆ ಅಲಭ್ಯರಾಗಿದ್ದರು. ಬಳಿಕ ಬೆಂಗಳೂರಿನಲ್ಲಿ ಎನ್ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಪಾಂಡ್ಯ ಭಾರತ ತಂಡಕ್ಕೆ ಮರಳುವ ನಿರೀಕ್ಷೆ ಹೆಚ್ಚಾಗಿದೆ. (ಏಜೆನ್ಸೀಸ್)