

ಹಾಂಗ್ರೆೌ: ಕರ್ನಾಟಕದ ಅಂಧ ಓಟಗಾರ್ತಿ ರಕ್ಷಿತಾ ರಾಜು ಏಷ್ಯನ್ ಪ್ಯಾರಾ ಗೇಮ್ಸ್ನ ಮಹಿಳೆಯರ 1,500 ಮೀ. ಓಟದ ಟಿ11 ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಕೋಚ್ ಹಾಗೂ ಗೈಡ್ ರಾಹುಲ್ ಮಾರ್ಗದರ್ಶನದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಭಾರತದ ಮತ್ತೋರ್ವ ಓಟಗಾರ್ತಿ ಲಲಿತಾ ಕೆ. ಈ ವಿಭಾಗದಲ್ಲಿ ಬೆಳ್ಳಿ ಜಯಿಸಿದರು.
ರಕ್ಷಿತಾ 2018ರ ಆವೃತ್ತಿಯಲ್ಲೂ ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಕರ್ನಾಟಕದ ಅಂಧ ಓಟಗಾರ ಶರತ್ ಶಂಕರಪ್ಪ ಎಂ. ಪುರುಷರ 1,500 ಮೀ. ಓಟದಲ್ಲಿ ಬೆಳ್ಳಿ ಪದಕ ಒಲಿಸಿಕೊಂಡರೆ, ಭಾರತದ ಮತ್ತೋರ್ವ ಓಟಗಾರ ಬಲ್ವಂತ್ ಸಿಂಗ್ ರಾವತ್ ಕಂಚು ಜಯಿಸಿದರು.
ಜಾವೆಲಿನ್ ಎಸೆತದಲ್ಲಿ ಸುಮಿತ್ ವಿಶ್ವದಾಖಲೆ
ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಸುಮಿತ್ ಆಂತಿಲ್ ಜಾವೆಲಿನ್ ಎಸೆತದ ಎಫ್64 ವಿಭಾಗದಲ್ಲಿ 73.29 ಮೀ. ದೂರದ ಎಸೆತದೊಂದಿಗೆ ವಿಶ್ವದಾಖಲೆ ಬರೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 25 ವರ್ಷದ ಸುಮಿತ್ ಹಾಲಿ ವರ್ಷ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ 70.83 ಮೀ. ದೂರ ಎಸೆದಿದ್ದ ತನ್ನದೇ ವಿಶ್ವದಾಖಲೆಯನ್ನು ಸುಧಾರಿಸಿಕೊಂಡರು. ಸ್ಪರ್ಧೆಯಲ್ಲಿದ್ದ ಮತ್ತೋರ್ವ ಭಾರತೀಯ ಪುಷ್ಪೇಂದ್ರ ಸಿಂಗ್ 62.09 ಮೀ. ಎಸೆತದೊಂದಿಗೆ ಕಂಚಿನ ಪದಕ ಒಲಿಸಿಕೊಂಡರು.