ಇಂದಿನಿಂದ ಮಹಿಳೆಯರ ಏಷ್ಯನ್​ ಚಾಂಪಿಯನ್ಸ್​ ಟ್ರೋಫಿ ಹಾಕಿ; ಭಾರತಕ್ಕೆ ಮಲೇಷ್ಯಾ ಮೊದಲ ಎದುರಾಳಿ

web hockey
Published on

ರಾಜ್​ಗಿರ್​ (ಬಿಹಾರ): ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು ವಿಫಲವಾದ ನಿರಾಸೆಯ ಬಳಿಕ ಹೊಸ ಆರಂಭಕ್ಕೆ ಸಜ್ಜಾಗಿರುವ ಭಾರತದ ಮಹಿಳಾ ಹಾಕಿ ತಂಡ ಸೋಮವಾರದಿಂದ ಬಿಹಾರದ ಐತಿಹಾಸಿಕ ನಗರ ರಾಜ್​ಗಿರ್​ನ ವೈಭರಗಿರಿ ಬೆಟ್ಟದಲ್ಲಿರುವ ಸ್ಟೇಡಿಯಂನಲ್ಲಿ ನಡೆಯಲಿರುವ 8ನೇ ಆವೃತ್ತಿಯ ಏಷ್ಯನ್​ ಚಾಂಪಿಯನ್ಸ್​ ಟ್ರೋಫಿಯಲ್ಲಿ ಶುಭಾರಂಭ ಕಾಣುವ ತವಕದಲ್ಲಿದೆ. ಹಾಲಿ ಚಾಂಪಿಯನ್​ ಹಾಗೂ ಆತಿಥೇಯ ಭಾರತ ತಂಡ ಮೊದಲ ಪಂದ್ಯದಲ್ಲಿ ತನಗಿಂತ ಕೆಳ ಶ್ರೇಯಾಂಕಿತ ಮಲೇಷ್ಯಾ ತಂಡವನ್ನು ಎದುರಿಸಲಿದೆ.

ಟೂರ್ನಿಯ ಕಳೆದ 7 ಆವೃತ್ತಿಗಳಲ್ಲಿ ಭಾರತ 2 ಬಾರಿ (2016, 2023) ಚಾಂಪಿಯನ್​ ಪಟ್ಟವೇರಿದ್ದು, ಈ ಬಾರಿ ತವರಿನಲ್ಲೇ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿದೆ. ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು ವಿಲವಾದ ಬಳಿಕ ಎಫ್​ಐಎಚ್​ ಪ್ರೊ ಲೀಗ್​ನಲ್ಲಿ ಹಾಲಿ ವರ್ಷ ಆಡಿರುವ 16 ಪಂದ್ಯಗಳಲ್ಲಿ ಭಾರತ 13ರಲ್ಲಿ ಸೋತಿದ್ದು, 2ರಲ್ಲಿ ಮಾತ್ರ ಗೆದ್ದಿದೆ. ಒಂದು ಪಂದ್ಯ ಡ್ರಾಗೊಂಡಿದೆ. ಆದರೆ ಇದೀಗ ತವರಿನ ಟೂರ್ನಿಯಲ್ಲಿ ಪುಟಿದೇಳುವ ಹಂಬಲದಲ್ಲಿದೆ.

ಮಿಡ್​ಫೀಲ್ಡರ್​ ಸಲಿಮಾ ಟೆಟೆ ಸಾರಥ್ಯದ ಭಾರತ ತಂಡ ಯುವ ಮತ್ತು ಅನುಭವಿ ಆಟಗಾರ್ತಿಯರಿಂದ ಕೂಡಿದೆ. ಸ್ಟ್ರೆ$ಕರ್​ ನವನೀತ್​ ಕೌರ್​ ಉಪನಾಯಕಿಯಾಗಿದ್ದಾರೆ.

ಭಾರತ ತಂಡ ಟೂರ್ನಿಯಲ್ಲಿ ಫೇವರಿಟ್​ ಆಗಿ ಅಭಿಯಾನ ಆರಂಭಿಸಿದರೂ, ಪ್ಯಾರಿಸ್​ ಒಲಿಂಪಿಕ್ಸ್​ ರಜತ ವಿಜೇತ ಚೀನಾ ತಂಡ ಪ್ರಮುಖ ಸವಾಲೆನಿಸಿದೆ. ಟೂರ್ನಿ ಇತಿಹಾಸದ ಅತ್ಯಂತ ಯಶಸ್ವಿ ತಂಡವಾಗಿರುವ 3 ಬಾರಿಯ ಚಾಂಪಿಯನ್​ ದಣ ಕೊರಿಯಾ ಮತ್ತು 2 ಬಾರಿಯ ಚಾಂಪಿಯನ್​ ಜಪಾನ್​ ಕೂಡ ಪ್ರಬಲ ತಂಡಗಳಾಗಿವೆ.

ಭಾರತದ ಪಂದ್ಯಗಳು

ದಿನಾಂಕ ಎದುರಾಳಿ

ನ.11 ಮಲೇಷ್ಯಾ

ನ.12 ಕೊರಿಯಾ

ನ.14 ಥಾಯ್ಲೆಂಡ್​

ನ.16 ಚೀನಾ

ನ. 17 ಜಪಾನ್​

*ಎಲ್ಲ ಪಂದ್ಯ ಆರಂಭ: ಸಂಜೆ 4.45

*ನೇರಪ್ರಸಾರ: ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಭಾಗವಹಿಸಿರುವ ಎಲ್ಲ 6 ತಂಡಗಳು ಲೀಗ್​ ಹಂತದಲ್ಲಿ ರೌಂಡ್​ ರಾಬಿನ್​ ಮಾದರಿಯಲ್ಲಿ ಪರಸ್ಪರ ತಲಾ ಒಮ್ಮೆ ಮುಖಾಮುಖಿ ಆಗಲಿವೆ. ಅಂತಿಮವಾಗಿ ಅಂಕಪಟ್ಟಿಯ ಅಗ್ರ 4 ತಂಡಗಳು ಸೆಮಿಫೈನಲ್​ ಹಂತಕ್ಕೇರಲಿವೆ. ನ. 19ಕ್ಕೆ ಸೆಮಿಫೈನಲ್ಸ್​ ಮತ್ತು ನ.20ಕ್ಕೆ ಫೈನಲ್​ ಮತ್ತು 3ನೇ ಸ್ಥಾನದ ಪಂದ್ಯಗಳು ನಡೆಯಲಿವೆ.

ಸಮಯ ಬದಲಾವಣೆ

ಹೊನಲುಬೆಳಕಿನಲ್ಲಿ ಕೀಟಗಳಿಂದ ತೊಂದರೆ ಎದುರಾಗುವುದನ್ನು ತಪ್ಪಿಸುವ ಸಲುವಾಗಿ ಟೂರ್ನಿಯಲ್ಲಿ ರಾತ್ರಿ ಪಂದ್ಯಗಳನ್ನು ಆಡದಿರಲು ನಿರ್ಧರಿಸಲಾಗಿದೆ. ಇದರಿಂದಾಗಿ ಪಂದ್ಯಗಳು ಮಧ್ಯಾಹ್ನ 12.15ರಿಂದಲೇ ಶುರುವಾಗಲಿವೆ. ಈ ಮುನ್ನ ಮಧ್ಯಾಹ್ನ 3 ಗಂಟೆಯ ನಂತರವೇ ಪಂದ್ಯಗಳು ನಿಗದಿಯಾಗಿದ್ದವು. ಹೊಸ ವೇಳಾಪಟ್ಟಿ ಅನ್ವಯ ದಿನದ 2ನೇ ಪಂದ್ಯ ಮಧ್ಯಾಹ್ನ 2.30ರಿಂದ ನಡೆದರೆ, 3ನೇ ಹಾಗೂ ಅಂತಿಮ ಪಂದ್ಯ ಸಂಜೆ 4.45ರಿಂದ ನಡೆಯಲಿವೆ.

ಮಿಷನ್​ ವಿಶ್ವಕಪ್​, ಒಲಿಂಪಿಕ್ಸ್​ ಶುರು

ಇತ್ತೀಚೆಗಿನ ಕೆಟ್ಟ ನಿರ್ವಹಣೆಗಳನ್ನು ಬದಿಗೊತ್ತಿ 2026ರ ವಿಶ್ವಕಪ್​ ಮತ್ತು 2028ರ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಆರಂಭ ಕಾಣುವುದು ನಮ್ಮ ಗುರಿಯಾಗಿದೆ ಎಂದು ಭಾರತದ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್​ ಹರೇಂದ್ರ ಸಿಂಗ್​ ಹೇಳಿದ್ದಾರೆ. ಈ ಟೂರ್ನಿಯು ಭವಿಷ್ಯದ ಯೋಜನೆಗಳಿಗೆ ಭದ್ರ ಬುನಾದಿ ಆಗಿರಲಿದೆ. 2026ರ ವಿಶ್ವಕಪ್​ ಮತ್ತು 2028ರ ಒಲಿಂಪಿಕ್ಸ್​ಗೆ ನಮ್ಮ ಸಿದ್ಧತೆಯೂ ಇಲ್ಲಿಂದಲೇ ಶುರುವಾಗಲಿದೆ. ನಮ್ಮ ಇತ್ತೀಚೆಗಿನ ಸೋಲುಗಳಿಗೆ ತಾಂತ್ರಿಕತೆಯಲ್ಲ, ಫಿಟ್ನೆಸ್​ ಕೊರತೆ ಪ್ರಮುಖ ಕಾರಣವಾಗಿತ್ತು. ಹೀಗಾಗಿ ಭಾರತೀಯ ಸೇನಾ ಅಕಾಡೆಮಿಯಲ್ಲಿ ಆಟಗಾರ್ತಿಯರು ಫಿಟ್ನೆಸ್​ ತರಬೇತಿ ಪಡೆದುಕೊಂಡಿದ್ದಾರೆ. ಅದರ ಫಲಿತಾಂಶವನ್ನು ನಾವಿಲ್ಲಿ ನೋಡಬಹುದು. ಆಧುನಿಕ ಹಾಕಿಯಲ್ಲಿ ಫಿಟ್ನೆಸ್​ಗೆ ಅಗ್ರ ಆದ್ಯತೆ ನೀಡಬೇಕಾಗುತ್ತದೆ ಎಂದು ಹರೇಂದ್ರ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net