ಬೆಂಗಳೂರು: ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ತನ್ನ 4ನೇ ಲೀಗ್ ಪಂದ್ಯದಲ್ಲಿ ಬಂಗಾಳ ವಿರುದ್ಧ ಇನಿಂಗ್ಸ್ ಹಿನ್ನಡೆ ಅನುಭವಿಸಿ ಡ್ರಾಕ್ಕೆ ತೃಪ್ತಿಪಡುವುದರೊಂದಿಗೆ ಕೇವಲ 1 ಅಂಕಕ್ಕೆ ಸಮಾಧಾನ ಪಟ್ಟಿದ್ದು, ಸಿ ಗುಂಪಿನ ಅಂಕಪಟ್ಟಿಯಲ್ಲಿ ಒಟ್ಟು 9 ಅಂಕದೊಂದಿಗೆ 4ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಇದರಿಂದಾಗಿ ಅಗ್ರ 2 ತಂಡಗಳ ಪೈಕಿ ಒಂದಾಗಿ ನಾಕೌಟ್ ಹಂತಕ್ಕೇರುವ ಹಾದಿ ಮತ್ತಷ್ಟು ದುರ್ಗಮಗೊಂಡಿದೆ.
ಕರ್ನಾಟಕ ಇನ್ನು ಟೂರ್ನಿಯ ಉಳಿದ 3 ಲೀಗ್ ಪಂದ್ಯಗಳಲ್ಲಿ ಉತ್ತರ ಪ್ರದೇಶ (ನ.13-16), ಪಂಜಾಬ್ (ಜ.23-26), ಹರಿಯಾಣ (ಜ.30-ಫೆ.2) ವಿರುದ್ಧ ಆಡಲಿದ್ದು, ಈ ಮೂರರಲ್ಲೂ ಗೆದ್ದರಷ್ಟೇ ನಾಕೌಟ್ಗೆ ಆಸೆ ಪಡಬಹುದು. ಸದ್ಯ ಹರಿಯಾಣ (19), ಕೇರಳ (15) ಮತ್ತು ಮಧ್ಯಪ್ರದೇಶ (10) ಅಗ್ರ 3 ಸ್ಥಾನದಲ್ಲಿವೆ. ಪ್ರತಿ ಗುಂಪಿನ ಅಗ್ರ 2 ತಂಡಗಳಷ್ಟೇ ಕ್ವಾರ್ಟರ್ಫೈನಲ್ ಹಂತಕ್ಕೇರಲಿವೆ.
ಮಧ್ಯಪ್ರದೇಶ ಮತ್ತು ಕೇರಳ ವಿರುದ್ಧದ ಮೊದಲ 2 ಪಂದ್ಯಗಳಲ್ಲಿ ಮಳೆ ಮತ್ತು ಒದ್ದೆ ಮೈದಾನದಿಂದಾಗಿ ಉಭಯ ತಂಡಗಳ ಮೊದಲ ಇನಿಂಗ್ಸ್ ಕೂಡ ಪೂರ್ಣಗೊಳ್ಳದೆ ಕರ್ನಾಟಕ ತಂಡ ತಲಾ ಒಂದು ಅಂಕಕ್ಕೆ ತೃಪ್ತಿಪಟ್ಟಿದ್ದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. 3ನೇ ಪಂದ್ಯದಲ್ಲಿ ಬಿಹಾರ ವಿರುದ್ಧ ಪಟನಾದಲ್ಲಿ ಗೆಲುವು ದಾಖಲಿಸಿದ್ದ ಕರ್ನಾಟಕ ತಂಡ, 4ನೇ ಪಂದ್ಯವನ್ನು ತವರಿನಲ್ಲಿ ಆಡಿದರೂ ಅದರ ಲಾಭವೆತ್ತದೆ ಬಂಗಾಳಕ್ಕೆ ಮುನ್ನಡೆ ಬಿಟ್ಟುಕೊಟ್ಟಿದ್ದು ಕೂಡ ನಾಕೌಟ್ ಆಸೆಗೆ ಹೊಡತ ನೀಡಿದೆ.