

ದಂಬುಲಾ (ಶ್ರೀಲಂಕಾ): ಮಹಿಳೆಯರ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಇಂದು ನಡೆದ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಬರೋಬ್ಬರಿ 10 ವಿಕೆಟ್ ಅಂತರದ ಭರ್ಜರಿ ಜಯಗಳಿಸಿರುವ ಭಾರತ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿದೆ.
ಲೀಗ್ ಸುತ್ತಿನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದ ಟೀಂ ಇಂಡಿಯಾ, ಇದೀಗ ಸೆಮಿಫೈನಲ್ ಪಂದ್ಯದಲ್ಲೂ ಬಾಂಗ್ಲಾ ತಂಡವನ್ನು ಸುಲಭವಾಗಿ ಮಣಿಸಿ ಸತತ ಐದನೇ ಬಾರಿಗೆ ಫೈನಲ್ಗೇರಿದೆ.
ಶ್ರೀಲಂಕಾದ ದಂಬುಲಾದ ರಂಗಿರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಟೀಂ ಇಂಡಿಯಾ ಬೌಲರ್ಗಳ ದಾಳಿಗೆ ನಲುಗಿದ ಬಾಂಗ್ಲಾ ಎಂಟು ವಿಕೆಟ್ಗೆ ಕೇವಲ 80 ರನ್ ಮಾತ್ರ ಗಳಿಸಿತು. 81 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ 11 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿ ತಲುಪಿತು. ಸ್ಮೃತಿ ಮಂದಾನ ಆಕರ್ಷಕ ಅರ್ಧಶತಕ (55) ಗಳಿಸಿದರೆ ಶೆಫಾಲಿ ವರ್ಮಾ ಅಜೇಯ 26 ರನ್ಗಳಿಸಿದರು.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಆರಂಭಿಸಿದ ಬಾಂಗ್ಲಾ ತಂಡಕ್ಕೆ ಮೊದಲ ಓವರ್ನಲ್ಲೇ ವೇಗಿ ರೇಣುಕಾ ಶಾಕ್ ನೀಡಿದರು. ಆರಂಭಿಕ ಮೂರು ಆಟಗಾರರ ವಿಕೆಟ್ಗಳನ್ನು ಕಿತ್ತು ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇವರ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾ 21 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು.
4 ಓವರ್ ಬೌಲಿಂಗ್ ನಡೆಸಿದ ರೇಣುಕಾ ಸಿಂಗ್ 1 ಮೇಡನ್ ಸಹಿತ ಕೇವಲ 10 ರನ್ ನೀಡಿ 3 ವಿಕೆಟ್ ಉರುಳಿಸಿದರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 50 ವಿಕೆಟ್ಗಳ ಮೈಲುಗಲ್ಲು ತಲುಪಿದರು.