ಕನ್ವರ್ ಯಾತ್ರೆ ಆಹಾರ ಮಳಿಗೆಗಳಿಗೆ ಆದೇಶ ವಿವಾದ: ಉತ್ತರ ಪ್ರದೇಶದ ನಡೆಗೆ ಸುಪ್ರೀಂ ಕೋರ್ಟ್ ತಡೆ

kannawar
Published on

ನವದೆಹಲಿ: ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿನ ಹೋಟೆಲ್​, ರೆಸ್ಟೋರೆಂಟ್​ ಮತ್ತು ತಿನಿಸು ಮಾರಾಟಗಾರರು ತಮ್ಮ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರಗಳು ಹೊರಡಿಸಿದ ಆದೇಶಕ್ಕೆ ವಿಧಿಸಿರುವ ಮಧ್ಯಂತರ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮತ್ತೆ ವಿಸ್ತರಿಸಿದೆ.

ನಾಮಫಲಕ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶ ಪ್ರಶ್ನಿಸಿ ನಾಗರಿಕ ಹಕ್ಕುಗಳ ರಕ್ಷಣಾ ಸಂಘಟನೆಯ ಎನ್‌ಜಿಒವೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನ್ಯಾಯಮೂರ್ತಿಗಳಾದ ಹೃಷಿಕೇಶ್‌ ರಾಯ್‌ ಮತ್ತು ಎಸ್‌ವಿಎನ್‌ ಭಟ್ಟಿ ಇರುವ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ ಜುಲೈ 22ರಂದು ಮಧ್ಯಂತರ ತಡೆ ನೀಡಿ, ಇಂದಿಗೆ ವಿಚಾರಣೆಯನ್ನು ಮುಂದೂಡಿತ್ತು. ಇಂದು ವಿಚಾರಣೆ ನಡೆಸಿದ ನ್ಯಾಯಪೀಠವು ಈ ಹಿಂದೆ ಹೇಳಿದಂತೆ ಅಂಗಡಿ ಮಾಲೀಕರ ಹೆಸರು ಪ್ರದರ್ಶಿಸುವಂತೆ ವ್ಯಾಪಾರಿಗಳನ್ನು ಒತ್ತಾಯ ಮಾಡುವಂತಿಲ್ಲ ಎಂದು ಹೇಳಿ ಮತ್ತೆ ಮಧ್ಯಂತರ ತಡೆಯನ್ನು ಮತ್ತೆ ವಿಸ್ತರಿಸಿದೆ.

ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರಕ್ಕೆ ನ್ಯಾಯಾಲಯವು ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡಿದೆ. ಮುಂದಿನ ವಿಚಾರಣೆಯನ್ನು ಎರಡು ವಾರಗಳಲ್ಲಿ ನಿಗದಿಪಡಿಸಿದೆ. ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತನ್ನ ನಿರ್ದೇಶನವನ್ನು ಸಮರ್ಥಿಸಿಕೊಂಡಿದೆ.

ಕನ್ವರ್ ಯಾತ್ರೆ ಸುಗಮವಾಗಿ, ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ಸಾಗಲಿ ಎಂದು ಈ ನಿಯಮ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿತು. ಆದರೆ ನ್ಯಾಯಾಲಯ, ವ್ಯಾಪಾರಿಗಳ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ಅಂಗಡಿ ಮಾಲೀಕರು ಬಯಸಿದರೆ ಯಾವ ತರಹದ ಆಹಾರ ಅವರ ಅಂಗಡಿಗಳಲ್ಲಿ ಸಿಗುತ್ತದೆ ಎಂಬುದನ್ನು ಬೋರ್ಡ್‌ನಲ್ಲಿ ಪ್ರಕಟಿಸಬಹುದು ಎಂದು ಹೇಳಿದೆ.

ಪವಿತ್ರ ಕನ್ವರ್ ಯಾತ್ರೆ ಶ್ರಾವಣ ಮಾಸದಲ್ಲಿ ನಡೆಯುತ್ತದೆ. ಜುಲೈ 22 ಪ್ರಾರಂಭವಾಗುವ ಈ ಯಾತ್ರೆ ಆಗಸ್ಟ್ 2ರವರೆಗೆ ನಡೆಯಲಿದೆ. ಈ ಯಾತ್ರೆಯ ಮೂಲಕ ಶಿವಭಕ್ತರು ಹರಿದ್ವಾರದಿಂದ ಪುಣ್ಯ ತೀರ್ಥ ತಂದು ಉತ್ತರ ಪ್ರದೇಶದ ಮುಜಾಫರ್‌ನಗರದ ಮಾರ್ಗವಾಗಿ ತೆರಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net