

ಬೆಂಗಳೂರು: ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಸರ್ವಾಂಗೀಣ ನಿರ್ವಹಣೆ ತೋರುವ ಮೂಲಕ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಕಳೆದ ವರ್ಷದ ಫೈನಲಿಸ್ಟ್ ತಂಡಗಳ ನಡುವೆ ನಡೆದ ಉದ್ಘಾಟನಾ ಪಂದ್ಯದಲ್ಲಿ ಎಡಗೈ ವೇಗಿ ಅಭಿಲಾಷ್ ಶೆಟ್ಟಿ (17ಕ್ಕೆ 3) ಕರಾರುವಾಕ್ ಬೌಲಿಂಗ್ ದಾಳಿಯ ನೆರವಿನಿಂದ ಗುಲ್ಬರ್ಗಾ ತಂಡ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 6 ವಿಕೆಟ್ಗಳಿಂದ ಗೆಲುವು ದಾಖಲಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಬೆಂಗಳೂರು, 6 ವಿಕೆಟ್ಗೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಗುಲ್ಬರ್ಗಾ ತಂಡ 17.3 ಓವರ್ಗಳಲ್ಲಿ 4 ವಿಕೆಟ್ಗೆ 138 ರನ್ ಗಳಿಸಿ ಜಯಭೇರಿ ಬಾರಿಸಿತು. ಆರಂಭಿಕರಾದ ಎಲ್ಆರ್ ಚೇತನ್ (36) ಮತ್ತು ಆದರ್ಶ್ ಪ್ರಜ್ವಲ್ (31) ಬಿರುಸಿನ ಆರಂಭ ಒದಗಿಸಿ ಗುಲ್ಬರ್ಗಾ ಚೇಸಿಂಗ್ಗೆ ಬಲ ತುಂಬಿದರು. ಬಳಿಕ ಕೆವಿ ಅನೀಶ್ (29*) ಮತ್ತು ಅಮಿತ್ ವರ್ಮ (28) ಉಪಯುಕ್ತ ಕೊಡುಗೆ ನೀಡಿ ಇನ್ನೂ 2.3 ಓವರ್ ಬಾಕಿ ಇರುವಂತೆಯೇ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.
ಅಭಿಲಾಷ್ ಕಡಿವಾಣ
ಅಭಿಲಾಷ್ ಶೆಟ್ಟಿ ಪಂದ್ಯದ ಮೊದಲ ಓವರ್ನಲ್ಲಿ ನಾಯಕ ಮಯಾಂಕ್ ಅಗರ್ವಾಲ್ (4) ವಿಕೆಟ್ ಕಬಳಿಸಿದರೆ, ಮರುಓವರ್ನಲ್ಲಿ ಮತ್ತೋರ್ವ ಆರಂಭಿಕ ಡಿ. ನಿಶ್ಚಲ್ (1) ವಿಕೆಟ್ ಪಡೆದರು. ನಂತರ ಜೆಸ್ವಂತ್ ಆಚಾರ್ಯ (29) ಮತ್ತು ಪವನ್ ದೇಶಪಾಂಡೆ (14) ಮತ್ತೋರ್ವ ವೇಗಿ ಶರಣ್ ಗೌಡ (24ಕ್ಕೆ 2) ಬಲೆಗೆ ಬಿದ್ದರು. ಇದರಿಂದ ಬೆಂಗಳೂರು ತಂಡ 58 ರನ್ಗಳಿಗೆ 4 ವಿಕೆಟ್ ಕಳೆದುಕೊಂಡ ತತ್ತರಿಸಿತು. ನಂತರ ವಿಕೆಟ್ ಕೀಪರ್&ಬ್ಯಾಟರ್ ಸೂರಜ್ ಅಹುಜಾ (62*ರನ್, 46 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕದಾಸರೆಯ ಮೂಲಕ ಬೆಂಗಳೂರಿಗೆ ಗೌರವಯುತ ಮೊತ್ತ ಪೇರಿಸಲು ನೆರವಾದರು.
ಬೆಂಗಳೂರು ಬ್ಲಾಸ್ಟರ್ಸ್: 6 ವಿಕೆಟ್ಗೆ 137 (ನಿಶ್ಚಲ್ 1, ಮಯಾಂಕ್ 4, ಜೆಸ್ವಂತ್ 29, ಪವನ್ ದೇಶಪಾಂಡೆ 14, ಸೂರಜ್ ಅಹುಜಾ 62*, ಅಭಿಲಾಷ್ ಶೆಟ್ಟಿ 17ಕ್ಕೆ 3, ಶರಣ್ ಗೌಡ 24ಕ್ಕೆ 2). ಗುಲ್ಬರ್ಗಾ ಮಿಸ್ಟಿಕ್ಸ್: 17.3 ಓವರ್ಗಳಲ್ಲಿ 4 ವಿಕೆಟ್ಗೆ 138 (ಎಲ್ಆರ್ ಚೇತನ್ 36, ಆದರ್ಶ ಪ್ರಜ್ವಲ್ 31, ಕೆವಿ ಅನೀಶ್ 29*, ಅಮಿತ್ ವರ್ಮ 28, ಶುಭಾಂಗ್ ಹೆಗ್ಡೆ 25ಕ್ಕೆ 3, ಸ್ರಾರ್ಜ್ 21ಕ್ಕೆ 1). ಪಂದ್ಯಶ್ರೇಷ್ಠ: ಅಭಿಲಾಷ್ ಶೆಟ್ಟಿ.
ಹುಬ್ಬಳ್ಳಿ ಟೈಗರ್ಸ್ ಶುಭಾರಂಭ
ಮನೀಷ್ ಪಾಂಡೆ ಸಾರಥ್ಯದ ಹುಬ್ಬಳ್ಳಿ ಟೈಗರ್ಸ್ ತಂಡ ಮಳೆಬಾಧಿತ ದಿನದ ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ವಿಜೆಡಿ ನಿಯಮದನ್ವಯ 9 ವಿಕೆಟ್ಗಳಿಂದ ಸುಲಭ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್ಗೆ ಇಳಿದ ಮೈಸೂರು 9 ವಿಕೆಟ್ಗೆ 111 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಹುಬ್ಬಳ್ಳಿ 4.3 ಓವರ್ಗಳಲ್ಲಿ 1 ವಿಕೆಟ್ಗೆ 51 ರನ್ ಗಳಿಸಿದಾಗ ಮಳೆ ಅಡಚಣೆ ತಂದಿತು. ನಂತರ 13 ಓವರ್ಗಳಲ್ಲಿ 80 ರನ್ಗಳ ಪರಿಷತ ಗುರಿ ಪಡೆದ ಹುಬ್ಬಳ್ಳಿ, ಮೊಹಮದ್ ತಾಹ (61*) ಬಿರುಸಿನಾಟದಿಂದ 8.1 ಓವರ್ಗಳಲ್ಲಿ 1 ವಿಕೆಟ್ಗೆ 82 ರನ್ ಗಳಿಸಿ ಶುಭಾರಂಭ ಕಂಡಿತು.
ಇಂದಿನ ಪಂದ್ಯಗಳು
ಮಂಗಳೂರು ಡ್ರ್ಯಾಗನ್ಸ್-ಶಿವಮೊಗ್ಗ ಲಯನ್ಸ್
ಆರಂಭ: ಮಧ್ಯಾಹ್ನ 1.00
ಗುಲ್ಬರ್ಗಾ ಮಿಸ್ಟಿಕ್ಸ್-ಹುಬ್ಬಳ್ಳಿ ಟೈಗರ್ಸ್
ಆರಂಭ: ಸಂಜೆ 5.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2