

ಚೆನ್ನೈ: ಹಾಲಿ ರನ್ನರ್ಅಪ್ ನ್ಯೂಜಿಲೆಂಡ್ ತಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸರ್ವಾಂಗೀಣ ನಿರ್ವಹಣೆ ಮುಂದುವರಿಸುವ ಮೂಲಕ ಸತತ ಮೂರನೇ ಗೆಲುವಿನ ಸಂಭ್ರಮ ಕಂಡಿದೆ. ವೇಗಿಗಳ ಮಾರಕ ಬೌಲಿಂಗ್ ದಾಳಿ ಮತ್ತು ನಾಯಕ ಕೇನ್ ವಿಲಿಯಮ್ಸನ್ (78 ರನ್, 107 ಎಸೆತ, 8 ಬೌಂಡರಿ, 1 ಸಿಕ್ಸರ್), ಡೆರಿಲ್ ಮಿಚೆಲ್ (89*ರನ್, 67 ಎಸೆತ, 6 ಬೌಂಡರಿ, 4 ಸಿಕ್ಸರ್) ಉಪಯುಕ್ತ ಬ್ಯಾಟಿಂಗ್ ನಿರ್ವಹಣೆಯ ಬಲದಿಂದ ನ್ಯೂಜಿಲೆಂಡ್ ತಂಡ ತನ್ನ 3ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 8 ವಿಕೆಟ್ಗಳಿಂದ ಮಣಿಸಿತು.
ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಬಾಂಗ್ಲಾ, ಆರಂಭಿಕ ಆಘಾತದ ನಡುವೆ 9 ವಿಕೆಟ್ಗೆ 245 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಕಿವೀಸ್ 42.5 ಓವರ್ಗಳಲ್ಲಿ 2 ವಿಕೆಟ್ಗೆ 248 ರನ್ ಪೇರಿಸಿ ಗೆಲುವಿನ ಓಟ ಮುಂದುವರಿಸಿತು. ವಿಲಿಯಮ್ಸನ್ 2ನೇ ವಿಕೆಟ್ಗೆ ಡೆವೊನ್ ಕಾನ್ವೇ (45) ಜತೆ 80 ಮತ್ತು ಮಿಚೆಲ್ ಜತೆ 108 ರನ್ ಸೇರಿಸಿ ಜಯದ ಹಾದಿ ಸುಲಭಗೊಳಿಸಿದರು.
ಕಿವೀಸ್ ವೇಗಿಗಳಿಂದ ಕಡಿವಾಣ
ಪಂದ್ಯದ ಮೊದಲ ಎಸೆತದಲ್ಲೇ ಲಿಟನ್ ದಾಸ್ (0) ವಿಕೆಟ್ ಕಬಳಿಸಿದ ವೇಗಿ ಟ್ರೆಂಟ್ ಬೌಲ್ಟ್ (45ಕ್ಕೆ 2) ಕಿವೀಸ್ಗೆ ಕನಸಿನ ಆರಂಭ ಒದಗಿಸಿದರು. ಬಳಿಕ ಇನ್ನಿಬ್ಬರು ವೇಗಿಗಳಾದ ಮ್ಯಾಟ್ ಹೆನ್ರಿ (58ಕ್ಕೆ 2) ಮತ್ತು ಲಾಕಿ ಫಗ್ಯುರ್ಸನ್ (49ಕ್ಕೆ 3) ಕೂಡ ಬಿಗಿ ದಾಳಿ ಸಂಟಿಸಿದರು. ಇದರಿಂದ ಒಂದು ಹಂತದಲ್ಲಿ 56 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಪರದಾಡಿದ ಬಾಂಗ್ಲಾ, ನಾಯಕ ಶಕೀಬ್ ಅಲ್ ಹಸನ್ (40), ಮುಶ್ಫೀಕರ್ ರಹೀಂ (66) ಹೋರಾಟದಿಂದ ಗೌರವಯುತ ಮೊತ್ತ ಪೇರಿಸುವಲ್ಲಿ ಸಫಲವಾಯಿತು.
ಬಾಂಗ್ಲಾದೇಶ: 9 ವಿಕೆಟ್ಗೆ 245 (ಮೆಹಿದಿ ಹಸನ್ 30, ಶಾಂಟೊ 7, ಶಕೀಬ್ 40, ಮುಶ್ಫೀಕರ್ 66, ಹೃದಯ್ 13, ಮಹಮುದುಲ್ಲಾ 41*, ಟಸ್ಕಿನ್ 17, ಫಗ್ಯುರ್ಸನ್ 49ಕ್ಕೆ 3, ಹೆನ್ರಿ 58ಕ್ಕೆ 2, ಬೌಲ್ಟ್ 45ಕ್ಕೆ 2, ಸ್ಯಾಂಟ್ನರ್ 31ಕ್ಕೆ 1), ನ್ಯೂಜಿಲೆಂಡ್: 42.5 ಓವರ್ಗಳಲ್ಲಿ 2 ವಿಕೆಟ್ಗೆ 248 (ಕಾನ್ವೇ 45, ರಚಿನ್ 9, ವಿಲಿಯಮ್ಸನ್ 78, ಮಿಚೆಲ್ 89*, ಫಿಲಿಪ್ಸ್ 16*, ಮುಸ್ತಾಫಿಜುರ್ 36ಕ್ಕೆ 1, ಶಕೀಬ್ 54ಕ್ಕೆ 1). ಪಂದ್ಯಶ್ರೇಷ್ಠ: ಲಾಕಿ ಫಗ್ಯುರ್ಸನ್.
ವಿಲಿಯಮ್ಸನ್ಗೆ ಮತ್ತೆ ಗಾಯ
ಮೊಣಕಾಲು ಗಾಯದಿಂದ ಚೇತರಿಸಿಕೊಂಡು ಸುಮಾರು 7 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅರ್ಧಶತಕ ಬಾರಿಸುವ ಮೂಲಕ ಯಶಸ್ವಿ ಪುನರಾಗಮನ ಕಂಡರು. ಆದರೆ ವೇಗಿ ಟಸ್ಕಿನ್ ಅಹ್ಮದ್ ಓವರ್ನಲ್ಲಿ ಮಿಡ್&ಆನ್ನತ್ತ ಚೆಂಡು ಬಾರಿಸಿ ಸಿಂಗಲ್ಸ್ ಕಸಿಯುವ ವೇಳೆ ಬಂದ ಥ್ರೋ ಅವರ ಎಡಕೈಗೆ ತಾಗಿತು. ಇದರಿಂದ ಅವರ ಮೊಣಕೈಗೆ ಗಾಯವಾಯಿತು. ಬಳಿಕ ನೋವಿನ ನಡುವೆ ಕೆಲ ಎಸೆತ ಎದುರಿಸಿದ ಬಳಿಕ ನಿವೃತ್ತಿ ಹೊಂದಿ ಡ್ರೆಸ್ಸಿಂಗ್ ರೂಂಗೆ ಮರಳಿ ಹೆಚ್ಚಿನ ಚಿಕಿತ್ಸೆ ಪಡೆದರು.