

ಬೆಂಗಳೂರು: ಈ ಸಲದ ಏಕದಿನ ವಿಶ್ವಕಪ್ ಹೊಸ ಇತಿಹಾಸ ಬರೆಯುವ ಸೂಚನೆಯನ್ನು ಮೊದಲ ವಾರದಲ್ಲೇ ರವಾನಿಸಿದೆ. ಟೂರ್ನಿ ಆರಂಭದ ಮೊದಲ 9 ಪಂದ್ಯಗಳಲ್ಲೇ ಹಲವು ದಾಖಲೆಗಳು ಧೂಳೀಪಟವಾಗಿವೆ. ರನ್ಪ್ರವಾಹ ಹರಿಯುತ್ತಿದ್ದರೆ, ಶತಕಗಳ ಸುರಿಮಳೆಯೂ ಆಗುತ್ತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ವಿಶ್ವಕಪ್ ಇನ್ನಷ್ಟು ಕುತೂಹಲ ಕೆರಳಿಸುವುದು ನಿಶ್ಚಿತವೆನಿಸಿದೆ.
13ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯ ಆರಂಭಿಕ 9 ಪಂದ್ಯಗಳಲ್ಲಿ ಒಟ್ಟು 11 ಶತಕಗಳು ದಾಖಲಾಗಿವೆ. ಈ ಪೈಕಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೂವರು ಬ್ಯಾಟರ್ಗಳು ಶತಕ ಸಿಡಿಸಿದ್ದರು. ವಿಶ್ವಕಪ್ನ ಇನಿಂಗ್ಸ್ ಒಂದರಲ್ಲಿ ಮೂರು ಶತಕ ದಾಖಲಾಗಿದ್ದು ಇದೇ ಮೊದಲಾಗಿತ್ತು. ಇನ್ನು ಶ್ರೀಲಂಕಾ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಒಟ್ಟು 4 ಶತಕಗಳು ದಾಖಲಾದವು. ಇದೂ, ಏಕದಿನ ವಿಶ್ವಕಪ್ ಪಂದ್ಯವೊಂದರಲ್ಲಿ 4 ಶತಕ ಸಿಡಿದ ಮೊದಲ ದೃಷ್ಟಾಂತವೆನಿಸಿದೆ.
ದಕ್ಷಿಣ ಆಫ್ರಿಕಾದ ಏಡನ್ ಮಾರ್ಕ್ರಮ್ 49 ಎಸೆತಗಳಲ್ಲೇ ಶತಕ ಸಿಡಿಸಿದ ವಿಶ್ವಕಪ್ನ ಅತಿವೇಗದ ಶತಕ ಸಾಧಕ ಎನಿಸಿದ್ದರೆ, ರೋಹಿತ್ ಶರ್ಮ 63 ಎಸೆತಗಳಲ್ಲೇ ಶತಕ ಬಾರಿಸಿ ವಿಶ್ವಕಪ್ನಲ್ಲಿ ಭಾರತ ಪರ ಅತಿವೇಗದ ಶತಕ ಸಾಧಕ ಎನಿಸಿದರು. ಇನ್ನು ರೋಹಿತ್ ಶರ್ಮ 7ನೇ ಶತಕದೊಂದಿಗೆ ಸಚಿನ್ ತೆಂಡುಲ್ಕರ್ರನ್ನು (6) ಹಿಂದಿಕ್ಕಿ ವಿಶ್ವಕಪ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟರ್ ಎನಿಸಿದರು.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 344 ರನ್ ಮೊತ್ತವನ್ನು ಬೆನ್ನಟ್ಟುವ ಮೂಲಕ ಪಾಕಿಸ್ತಾನ ವಿಶ್ವಕಪ್ ಇತಿಹಾಸದ ಸರ್ವಾಧಿಕ ಮೊತ್ತದ ಚೇಸಿಂಗ್ ದಾಖಲೆ ಬರೆಯಿತು. ಇನ್ನು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಣ ಆಫ್ರಿಕಾ 428 ರನ್ ಪೇರಿಸುವ ಮೂಲಕ ವಿಶ್ವಕಪ್ನಲ್ಲಿ ಬೃಹತ್ ಮೊತ್ತದ ದಾಖಲೆ ಬರೆಯಿತು. ವಿಶ್ವಕಪ್ನಲ್ಲಿ ಮೊದಲ ವಾರದಲ್ಲೇ ಇಷ್ಟೊಂದು ದಾಖಲೆಗಳು ಪತನಗೊಂಡಿದ್ದರೆ, ಇನ್ನುಳಿದ 36 ಪಂದ್ಯಗಳಲ್ಲಿ ಎಷ್ಟೊಂದು ದಾಖಲೆಗಳು ನಿರ್ಮಾಣವಾಗಬಹುದು ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳದ್ದಾಗಿದೆ.