

RCB : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮೂರು ಬಾರಿ ಫೈನಲ್ ತಲುಪಿದರೂ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಒಮ್ಮೆಯೂ ಕಪ್ ಗೆದ್ದಿಲ್ಲ. ಈ ಕ್ಯಾಶ್ ರಿಚ್ ಲೀಗ್ನ ಆರಂಭದಿಂದಲೂ ಟೀಮ್ ಇಂಡಿಯಾ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಆಡುತ್ತಿದ್ದಾರೆ. ಅವರ ಐಪಿಎಲ್ ವೃತ್ತಿಜೀವನದಲ್ಲಿ ಕಪ್ ಕೊರತೆ ಮಾತ್ರ ಹಾಗೆಯೇ ಉಳಿದಿದೆ.
ಆರ್‌ಸಿಬಿಗೆ ಅಷ್ಟೊಂದು ಅಭಿಮಾನಿ ಬಳಗವಿದೆ ಅಂದರೆ ಅದಕ್ಕೆ ಕೊಹ್ಲಿಯೇ ಪ್ರಮುಖ ಕಾರಣ ಎಂಬುದರಲ್ಲಿ ಸಂದೇಹವಿಲ್ಲ. ತನ್ನ ಇಮೇಜ್ ಮೂಲಕವೇ ಆರ್‌ಸಿಬಿಯ ಪ್ರಮುಖ ಮುಖವಾಗಿರುವ ಕಿಂಗ್ ಕೊಹ್ಲಿ, 2011ರಲ್ಲಿ ಮೊದಲ ಬಾರಿಗೆ ಆರ್‌ಸಿಬಿ ತಂಡದ ನಾಯಕನಾಗಿ ಅಧಿಕಾರ ವಹಿಸಿಕೊಂಡರು. ಎರಡು ವರ್ಷಗಳ ಕಾಲ ಪೂರ್ಣಾವಧಿ ನಾಯಕನಾಗಿ ನೇಮಕಗೊಂಡ ಕೊಹ್ಲಿ, 2016 ರಲ್ಲಿ ತಂಡವನ್ನು ಫೈನಲ್‌ಗೆ ಕೊಂಡೊಯ್ದರು. ಆದರೆ, ಆರ್‌ಸಿಬಿ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ಬರಿಗೈಯಲ್ಲಿ ಮರಳಿತು. ಇದಾದ ಬಳಿಕ ತಂಡದಲ್ಲಿ ಯಾವುದೇ ಗಮನಾರ್ಹ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ನಾಯಕತ್ವದ ಹೊರೆ ಮತ್ತು ಕೆಲಸದ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಕೊಹ್ಲಿ 2021ರಲ್ಲಿ ನಾಯಕತ್ವದ ಜವಾಬ್ದಾರಿಗಳಿಂದ ಕೆಳಗಿಳಿದರು.
ಕೊಹ್ಲಿ ಕೆಳಗಿಳಿದ ಬಳಿಕ ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಅವರನ್ನು ಆರ್‌ಸಿಬಿಯ ನಾಯಕನನ್ನಾಗಿ ನೇಮಿಸಲಾಯಿತು. ಡುಪ್ಲೆಸಿಸ್ ಅವರು 2024ರವರೆಗೆ ನಾಯಕರಾಗಿ ತಂಡವನ್ನು ಮುನ್ನಡೆಸಿದರು. ಆದಾಗ್ಯೂ, ಆರ್‌ಸಿಬಿ ಮೆಗಾ ಹರಾಜಿಗೂ ಮುನ್ನ ಡುಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿತು ಮತ್ತು ಹರಾಜಿನ ಸಮಯದಲ್ಲಿ ಅವರನ್ನು ಮತ್ತೆ ಖರೀದಿಸಲು ಆರ್‌ಸಿಬಿ ಆಸಕ್ತಿ ತೋರಲಿಲ್ಲ. ಈ ಹಿನ್ನೆಲೆಯಲ್ಲಿ 2025ರ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಹೊಸ ನಾಯಕ ಸಿಗುವುದು ಖಚಿತವಾಗಿದೆ. ಅವರು ಕೊಹ್ಲಿ ಹೊರತು ಬೇರೆ ಯಾರೂ ಅಲ್ಲ ಎಂಬ ಪ್ರಚಾರವೂ ನಡೆಯುತ್ತಿದೆ.
ಇದೀಗ ಸ್ಪೋರ್ಟ್ಸ್ಟಕ್ ಜೊತೆ ಮಾತನಾಡಿದ ಆರ್‌ಸಿಬಿ ಹೆಡ್ ಕೋಚ್ ಆ್ಯಂಡಿ ಫ್ಲವರ್, ತಂಡದ ಬಗ್ಗೆ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಆರ್‌ಸಿಬಿಯ ಹೊಸ ಯುಗ ಆರಂಭವಾಗಲಿದೆ. ಮುಂದಿನ ಮೂರು ವರ್ಷಗಳಲ್ಲಿ ನಾವು ನಿರೀಕ್ಷಿತ ಫಲಿತಾಂಶಗಳನ್ನು ಸಾಧಿಸಲಿದ್ದೇವೆ. ಎಲ್ಲರೂ ಆಶಿಸುತ್ತಿರುವುದು ಈ ಬಾರಿ ನಿಜವಾಗುವ ಸಾಧ್ಯತೆಯಿದೆ ಎಂದು ಆ್ಯಂಡಿ ಫ್ಲವರ್ ಹೇಳಿದರು.
ಕೊಹ್ಲಿ ಮತ್ತೊಮ್ಮೆ ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎಂಬ ಚರ್ಚೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಆ್ಯಂಡಿ ಫ್ಲವರ್ ಆ ಬಗ್ಗೆ ಇನ್ನು ಯಾವುದೇ ಚರ್ಚೆಯಾಗಿಲ್ಲ ಎಂದರು. ಮತ್ತೊಂದೆಡೆ, ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಬೊಬಾಟ್ ಕೂಡ ನಾಯಕತ್ವದ ವಿಷಯ ಇನ್ನೂ ಚರ್ಚಿಸಲಾಗಿಲ್ಲ ಎಂದು ಹೇಳಿದ್ದಾರೆ. ಆದರೆ, ಕೊಹ್ಲಿ ಮತ್ತೆ ನಾಯಕತ್ವ ವಹಿಸುವ ಸಾಧ್ಯತೆ ದಟ್ಟವಾಗಿದೆ.
ಇದುವರೆಗೆ ಐಪಿಎಲ್ ವೃತ್ತಿಜೀವನದಲ್ಲಿ 252 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 8004 ರನ್ ಗಳಿಸಿದ್ದಾರೆ. ಇದರಲ್ಲಿ ಎಂಟು ಶತಕಗಳು ಮತ್ತು 55 ಅರ್ಧಶತಕಗಳು ಸೇರಿವೆ. ಅದೇ ರೀತಿ ಕೊಹ್ಲಿ ಅವರ ಖಾತೆಯಲ್ಲಿ 705 ಬೌಂಡರಿಗಳು ಮತ್ತು 272 ಸಿಕ್ಸರ್‌ಗಳಿವೆ. ಬಲಗೈ ಮಧ್ಯಮ ವೇಗಿ ಕೊಹ್ಲಿ, ಐಪಿಎಲ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
ಕಳೆದ ವರ್ಷ ಪ್ಲೇಆಫ್ ತಲುಪಿದ್ದ ಆರ್‌ಸಿಬಿ ಫೈನಲ್‌ಗೆ ತಲುಪಲು ಸಾಧ್ಯವಾಗಲಿಲ್ಲ. ಎಲಿಮಿನೇಟರ್ ಪಂದ್ಯದಲ್ಲೇ ವಾಪಾಸ್ಸಾದರು. ಬಿಸಿಸಿಐ ಈಗಾಗಲೇ ಮೂರು ವರ್ಷಗಳ ಐಪಿಎಲ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 2025ರ ಐಪಿಎಲ್ ಟೂರ್ನಿ ಮಾರ್ಚ್ 14 ರಿಂದ ಮೇ 25ರವರೆಗೆ ನಡೆಯಲಿದೆ. 2026ರ ಐಪಿಎಲ್ ಟೂರ್ನಿ ಮಾರ್ಚ್ 15 ರಿಂದ ಮೇ 31 ರವರೆಗೆ ಮತ್ತು 2027ರ ಐಪಿಎಲ್ ಟೂರ್ನಿ ಮಾರ್ಚ್ 14 ರಿಂದ ಮೇ 30 ರವರೆಗೆ ನಡೆಯಲಿದೆ. (ಏಜೆನ್ಸೀಸ್)