

ಪರ್ತ್: ಆಸೀಸ್ ಆರಂಭಿಕ ಉಸ್ಮಾನ್ ಖವಾಜಗೆ ಪ್ಯಾಲೆಸ್ತೀನ್ ಬೆಂಬಲಿಸುವ ಬರಹ ಹೊಂದಿರುವ ಶೂಗಳನ್ನು ಧರಿಸಿ ಮೈದಾನಕ್ಕಿಳಿಯಲು ಐಸಿಸಿ ನಿರ್ಬಂಧ ಹೇರಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಆಸ್ಟ್ರೆಲಿಯಾ ಹಾಗೂ ಪ್ರವಾಸಿ ಪಾಕಿಸ್ತಾನ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಗುರುವಾರ ಆರಂಭವಾಗಲಿದ್ದು, ಇದರಲ್ಲಿ ಅದೇ ಶೂಗಳೊಂದಿಗೆ ಆಡಲು ಖವಾಜ ಸಿದ್ಧರಾಗಿದ್ದರು. ಆದರೆ ಐಸಿಸಿ ನಡೆಯಿಂದಾಗಿ ಅವರು ನಿರಾಸೆ ಅನುಭವಿಸಿದ್ದಾರೆ.
"ಎಲ್ಲ ಜೀವಗಳು ಸಮಾನ' ಮತ್ತು "ಸ್ವಾತಂತ್ರ್ಯವು ಮಾನವ ಹಕ್ಕು' ಎಂಬ ಸಂದೇಶಗಳನ್ನು ಬರೆದ ಶೂಗಳಿಗೆ "ಕ್ರಿಕೆಟ್ ಆಸ್ಟ್ರೆಲಿಯಾ' ಅನುಮತಿ ನೀಡಿದ್ದರೂ, ರಾಜಕೀಯ ಸಂದೇಶಗಳನ್ನು ನಿರ್ಬಂಧಿಸುವ ಐಸಿಸಿ ನೀತಿಸಂಹಿತೆಯ ಅನ್ವಯ ಇದಕ್ಕೆ ಅವಕಾಶ ನಿರಾಕರಿಸಲಾಗಿದೆ. ಈ ಬಗ್ಗೆ ಖವಾಜ ಎಕ್ಸ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಐಸಿಸಿ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖವಾಜ ಪಾಕಿಸ್ತಾನ ಮೂಲದ ಆಟಗಾರರಾಗಿದ್ದು, ಬುಧವಾರ ಅಭ್ಯಾಸದ ವೇಳೆ ಇದೇ ಶೂಗಳನ್ನು ಧರಿಸಿದ್ದರು.
ಏಕದಿನ ವಿಶ್ವಕಪ್ ವೈಫಲ್ಯದ ಬಳಿಕ ಮೇಜರ್ ಸರ್ಜರಿಗೆ ಒಳಗಾಗಿರುವ ಪಾಕ್ ತಂಡ ಹೊಸ ಟೆಸ್ಟ್ ನಾಯಕ ಶಾನ್ ಮಸೂದ್ ಸಾರಥ್ಯದಲ್ಲಿ ಆಸೀಸ್ ಎದುರು ಮೊದಲ ಬಾರಿಗೆ ಕಣಕ್ಕಿಳಿಯಲಿದೆ. ಅನುಭವಿ ಸ್ಪಿನ್ನರ್ ನಾಥನ್ ಲ್ಯಾನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ 3ನೇ ಆಸೀಸ್ ಆಟಗಾರ ಎನಿಸುವ ಮೂಲಕ ಶೇನ್ ವಾರ್ನ್ (708) ಹಾಗೂ ಗ್ಲೆನ್ ಮೆಕ್ಗ್ರಾತ್ (563) ಸಾಲಿಗೆ ಸೇರಲು ಸಜ್ಜಾಗಿದ್ದಾರೆ. ಈ ಸಾಧನೆಗೆ ಲ್ಯಾನ್ ಇನ್ನೂ 4 ವಿಕೆಟ್ ಕಬಳಿಸಬೇಕಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಕಬಳಿಸಿದ 7 ಬೌಲರ್ಗಳಲ್ಲಿ ಶೇನ್ ವಾರ್ನ್, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್, ಭಾರತದ ಅನಿಲ್ ಕುಂಭ್ಳೆ ಮಾತ್ರ ಸ್ಪಿನ್ನರ್ಗಳಾಗಿದ್ದಾರೆ.