

IND vs ENG: ಪ್ರಸಕ್ತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಮೊದಲ ಪಂದ್ಯವನ್ನು ಸೋತಿದೆ. ಇನ್ನೂ 4 ಪಂದ್ಯಗಳು ಬಾಕಿ ಉಳಿದಿವೆ. ಇದೇ ಜುಲೈ 2ರಿಂದ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ಗೆ ಭಾರತ ಸನ್ನದ್ಧಗೊಂಡಿದ್ದೇ ಆದರೂ ತಂಡದಲ್ಲಿ ಸ್ಟಾರ್ ವೇಗಿಯ ಅಲಭ್ಯ ವದಂತಿ ಸದ್ಯ ಕ್ರಿಕೆಟ್ ಪ್ರಿಯರಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ.
ಎರಡನೇ ಟೆಸ್ಟ್ನಲ್ಲಿ ಭಾರತ ಪರ ಜಸ್ಪ್ರಿತ್ ಬುಮ್ರಾ ಕಣಕ್ಕಿಳಿಯುವುದು ಬಹುತೇಕ ಅನುಮಾನ ಎಂದೇ ಹೇಳಲಾಗಿದೆ. ಆದರೆ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮಾತ್ರ ಈ ಕುರಿತಂತೆ ಇಲ್ಲಿಯವರೆಗೂ ಸ್ಪಷ್ಟಪಡಿಸಿಲ್ಲ. ಇದೇ ಹಲವರ ಗೊಂದಲಕ್ಕೆ ಕಾರಣವಾಗಿದೆ. ಇನ್ನು ಈ ಕುರಿತಂತೆ ಕಡೆಗೂ ಪ್ರತಿಕ್ರಿಯಿಸಿರುವ ಭಾರತ ತಂಡದ ಟೆಸ್ಟ್ ಕ್ಯಾಪ್ಟನ್ ಶುಭಮನ್ ಗಿಲ್, "ಬುಮ್ರಾ ಖಂಡಿತ ಲಭ್ಯವಿದ್ದಾರೆ. ಆದರೆ, ಅವರನ್ನು ಮೈದಾನಕ್ಕಿಳಿಸುವ ನಿರ್ಧಾರವನ್ನು ವರ್ಕ್ಲೋಡ್ ಮ್ಯಾನೇಜ್ಮೆಂಟ್ ಮತ್ತು ಇತರೆ ವಿಷಯಗಳನ್ನು ಗಮನಿಸಿ ತೆಗೆದುಕೊಳ್ಳಲಾಗುವುದು" ಎಂದರು.
"ಅಂತಿಮ ನೆಟ್ ಪ್ರ್ಯಾಕ್ಟೀಸ್ ಬಳಿಕ ಅವರ ಲಭ್ಯತೆ ಕುರಿತು ಸ್ಪಷ್ಟತೆ ಸಿಗಲಿದೆ. ನಮಗೆ ಗೊತ್ತಿದೆ ಅವರು ಐದು ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಮಾತ್ರ ಆಡಲಿದ್ದಾರೆ ಎಂದು. ಮುಂದಿನ 4 ಪಂದ್ಯಗಳಿಗೆ ಯಾರನ್ನು ಆಡಿಸಬೇಕು ಎಂಬುದು ಮ್ಯಾನೇಜ್ಮೆಂಟ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ" ಎಂದು ಭಾರತದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ತಿಳಿಸಿದ್ದಾರೆ,(ಏಜೆನ್ಸೀಸ್).