ರಕ್ತ ಮತ್ತು ಕ್ರಿಕೆಟ್ ಅಕ್ಕಪಕ್ಕದಲ್ಲಿ ಹರಿಯುತ್ತದೆಯೇ; ಭಾರತ ಮತ್ತು ಪಾಕ್​​ ಪಂದ್ಯಕ್ಕೆ ಸಂಸದ ಸಂಜಯ್​ ರಾವತ್ ಕಿಡಿ! | Sanjay Raut

Sanjay Raut
Published on

Sanjay Raut: ಮುಂಬರುವ ಏಷ್ಯಾ ಕಪ್‌ನಲ್ಲಿ ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಆಡಲು ಅವಕಾಶ ನೀಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿರುವ ಸಂಸದ ಸಂಜಯ್​ ರಾವತ್​​, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಉಗ್ರಗಾಮಿಗಳು ನಡೆಸಿದ ಭಯೋತ್ಪಾದಕ ದಾಳಿಯ ನಂತರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದಕ್ಕೆ ರಾವತ್ ಇದು ನೋವಿನ ಸಂಗತಿ ಎಂದಿದ್ದಾರೆ.

ಪ್ರಧಾನಿಗೆ ತಾವೂ ಬರೆದಿರುವ ಪತ್ರದಲ್ಲಿ ರಾವತ್, ಅನೇಕ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಭಯೋತ್ಪಾದನೆಯ ವಿರುದ್ಧ 'ಆಪರೇಷನ್ ಸಿಂಧೂರ್' ಇನ್ನೂ ಮುಗಿದಿಲ್ಲ ಎಂದು ಹೇಳುವ ಸರ್ಕಾರ ಪಾಕಿಸ್ತಾನದೊಂದಿಗಿನ ಕ್ರೀಡಾ ಸಂಬಂಧವನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ ಎಂದರು. ಪಹಲ್ಗಾಮ್ ದಾಳಿಯಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರ ಸಿಂಧೂರವನ್ನು ಅಳಿಸಿ ಹಾಕಿದ್ದು, ಆ ಕುಟುಂಬದವರ ದುಃಖ ಮತ್ತು ಭಾವನೆಗಳ ಬಗ್ಗೆ ಸರ್ಕಾರ ಸ್ವಲ್ಪವಾದರೂ ಯೋಚಿಸಿದೆಯಾ ಎಂದು ಪ್ರಶ್ನಿಸಿದ್ದಾರೆ.

ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಹೇಳಿದ ಪ್ರಧಾನಿ ಮಾತನ್ನು ಉಲ್ಲೇಖಿಸುತ್ತಾ, ಈಗ ರಕ್ತ ಮತ್ತು ಕ್ರಿಕೆಟ್ ಅಕ್ಕಪಕ್ಕದಲ್ಲಿ ಹರಿಯುತ್ತದೆಯೇ? ಎಂದು ಪ್ರಶ್ನಿಸಿದರು. ಮಾನ್ಯ ಪ್ರಧಾನ ಮಂತ್ರಿಗಳೇ, ಹಲ್ಗಾಮ್ ದಾಳಿಯಲ್ಲಿ ಮಡಿದ ಭಾರತೀಯರ ರಕ್ತ ಇನ್ನೂ ಒಣಗಿಲ್ಲ, ಮತ್ತು ಅವರ ಕುಟುಂಬಗಳ ಕಣ್ಣೀರು ಇನ್ನೂ ನಿಂತಿಲ್ಲ. ಹಾಗಿದ್ದರೂ, ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯಗಳನ್ನು ಆಡುವುದು ಅಮಾನವೀಯ ಎಂದಿದ್ದಾರೆ.

ಸರ್ಕಾರವು ಬಾಹ್ಯ ಒತ್ತಡಕ್ಕೆ ಮಣಿದಿದೆ ಎಂದು ಆರೋಪಿಸಿದ ರಾವತ್,​ಅಮೆರಿಕ ಸೇರಿದಂತೆ ಅಂತರರಾಷ್ಟ್ರೀಯ ಶಕ್ತಿಗಳಿಂದ ಪ್ರಭಾವಿತವಾಗಿ ಈ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ಇದೆ ಎಂದರು. ಭಾರತ-ಪಾಕಿಸ್ತಾನ ಪಂದ್ಯಗಳು ದೊಡ್ಡ ಪ್ರಮಾಣದ ಬೆಟ್ಟಿಂಗ್ ಮತ್ತು ಆನ್‌ಲೈನ್ ಜೂಜಾಟಕ್ಕೆ ಅವಕಾಶ ನೀಡುತ್ತಿದ್ದು, ಇದರಲ್ಲಿ ಬಿಜೆಪಿಯ ಕೆಲೆವು ಸದಸ್ಯರು ಭಾಗಿಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ಟೀಕೆಗೆ ಕಾರಣವೇನು..?

ಕಳೆದ ಒಂದು ತಿಂಗಳಿನಿಂದ ಹೆಚ್ಚುತ್ತಿರುವ ವಿರೋಧದ ನಡುವೆಯೇ, ಕೇಂದ್ರ ಕ್ರೀಡಾ ಸಚಿವಾಲಯ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ಭಾಗವಹಿಸಲು ಅನುಮತಿ ನೀಡಿದ ನಂತರ ಈ ವಿವಾದ ಉಂಟಾಗಿದೆ. ಏಷ್ಯಾ ಕಪ್ ವೇಳಾಪಟ್ಟಿಯನ್ನು ಘೋಷಿಸಿದಾಗಿನಿಂದ, ಪಾಕಿಸ್ತಾನದ ಪಂದ್ಯವನ್ನು ಬಹಿಷ್ಕರಿಸಬೇಕೆಂಬ ಬೇಡಿಕೆಗಳು ತೀವ್ರಗೊಂಡಿದ್ದು, ಗಡಿಯಾಚೆಗಿನ ಭಯೋತ್ಪಾದನೆ ಮುಂದುವರಿದಿರುವಾಗ ಪಾಕಿಸ್ತಾನದೊಂದಿಗೆ ಆಡುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net