ಒಂದೇ ಪಂದ್ಯದಲ್ಲಿ ಇಬ್ಬರು ಬೆನ್​ ಸ್ಟೋಕ್ಸ್​! ಒಂದು ಕ್ಷಣ ನಮ್ಮ ಕಣ್ಣುಗಳನ್ನೇ ನಂಬಲಾಗದ ದೃಶ್ಯವಿದು

Ben Stokes 123
Published on

ನವದೆಹಲಿ: ಇಂಗ್ಲೆಂಡ್​ ಮತ್ತು ವೆಸ್ಟ್​ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಅಚ್ಚರಿಯ ದೃಶ್ಯವೊಂದು ಕಂಡುಬಂದಿದೆ. ಇಂಗ್ಲೆಂಡ್ ಇನ್ನಿಂಗ್ಸ್‌ ಸಮಯದಲ್ಲಿ ಸ್ಟೇಡಿಯಂನಲ್ಲಿ ಇಬ್ಬರು ಬೆನ್‌ ಸ್ಟೋಕ್ಸ್ ಕಾಣಿಸಿಕೊಂಡರು. ಈ ದೃಶ್ಯವನ್ನು ನೋಡಿ ಅಭಿಮಾನಿಗಳು ಒಂದು ಕ್ಷಣ ತಮ್ಮ ಕಣ್ಣನ್ನು ತಾವೇ ನಂಬಲಿಲ್ಲ. ಅಭಿಮಾನಿಗಳು ಮಾತ್ರವಲ್ಲ, ಇತ್ತೀಚೆಗಷ್ಟೇ ನಿವೃತ್ತರಾದ ಜೇಮ್ಸ್ ಆಂಡರ್ಸನ್ ಕೂಡ ಇದನ್ನು ನಂಬಲಿಲ್ಲ. ಅಷ್ಟಕ್ಕೂ ಸ್ಟೇಡಿಯಂನಲ್ಲಿ ಕಂಡುಬಂದಿದ್ದೇನು ಎಂಬುದನ್ನು ನಾವೀಗ ವಿವರವಾಗಿ ತಿಳಿದುಕೊಳ್ಳೋಣ.

ನಿನ್ನೆ ಟೆಸ್ಟ್​ ಪಂದ್ಯದ ನಾಲ್ಕನೇ ದಿನದಂದು ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ಮುಂದುವರಿಸಿತು. ಈ ಸಮಯದಲ್ಲಿ ಕ್ಯಾಮೆರಾಮನ್ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರನ್ನೇ ಹೋಲುವ ಮತ್ತೊಬ್ಬ ವ್ಯಕ್ತಿಯನ್ನು ಸ್ಟೇಡಿಯಂನಲ್ಲಿ ಸೆರೆಹಿಡಿದರು. ಬಳಿಕ ಇಬ್ಬರನ್ನು ಒಟ್ಟಿಗೆ ತೋರಿಸಿದರು. ಇದನ್ನು ನೋಡಿದ ಆ್ಯಂಡರ್ಸನ್ ಅವರು ಬೆನ್​ ಸ್ಟೋಕ್ಸ್ ಕಡೆ ನೋಡಿ ನಕ್ಕರು. ಸ್ಟೋಕ್ಸ್ ಕೂಡ ಅಚ್ಚರಿ ವ್ಯಕ್ತಪಡಿಸಿದರು.

ತನ್ನ ತದ್ರೂಪಿಯನ್ನು ನೋಡಿದ ಇಂಗ್ಲೆಂಡ್ ನಾಯಕ ಬೆನ್​ ಸ್ಟೋಕ್ಸ್​ ಆರಂಭದಲ್ಲಿ ಅದನ್ನು ನಂಬಲಿಲ್ಲ. ನಾಲ್ಕೈದು ಬಾರಿ ಕಣ್ಣು ಮಿಟುಕಿಸುತ್ತಾ, ಆಶ್ಚರ್ಯದಿಂದ ತನ್ನ ತದ್ರೂಪಿಯನ್ನೇ ನೋಡುತ್ತಾ ಮುಗುಳ್ನಕ್ಕರು. ಬಳಿಕ ತನ್ನ ಬೆರಳುಗಳಿಂದ ಒಂದು ಚಿಹ್ನೆಯನ್ನು ಮಾಡಿ ಕಣ್ಣುಗಳ ಮೇಲೆ ಇಟ್ಟು ನನ್ನ ಕಣ್ಣನ್ನು ನಾನೇ ನಂಬಲಾಗುತ್ತಿಲ್ಲ ಎನ್ನುವ ಅರ್ಥದಲ್ಲಿ ಅಚ್ಚರಿ ವ್ಯಕ್ತಪಡಿಸಿದರು. ಬೆನ್​ ಸ್ಟೋಕ್ಸ್​ ಪ್ರತಿಕ್ರಿಯೆ ನೋಡಿ ಪಕ್ಕದಲ್ಲಿ ಕುಳಿತಿದ್ದ ಆ್ಯಂಡರ್ಸನ್ ಕೂಡ ನಕ್ಕರು. ಇದೇ ಸಂದರ್ಭದಲ್ಲಿ ಸ್ಟೋಕ್ಸ್​ ತದ್ರೂಪಿ ಕೂಡ ತನ್ನನ್ನು ತೆರೆಯ ಮೇಲೆ ನೋಡಿ ಆಶ್ಚರ್ಯಚಕಿತನಾದನು. ಸದ್ಯಕ್ಕೆ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್​​ನ ಮೊದಲ ಓವರ್​ನಲ್ಲಿ ಇಂಗ್ಲೆಂಡ್​ ಒಂದು ವಿಕೆಟ್ ಕಳೆದುಕೊಂಡಿತು. ಆದಾಗ್ಯೂ, ನಂತರ ಕ್ರೀಸ್​ನಲ್ಲಿ ನೆಲೆ ನಿಂತ ಬೆನ್ ಡಕೆಟ್ ಮತ್ತು ಒಲಿ ಪೋಪ್ ಇನ್ನಿಂಗ್ಸ್ ಅನ್ನು ಮುನ್ನಡೆಸಿದರು. ಡಕೆಟ್ ಕೇವಲ 59 ಎಸೆತಗಳಲ್ಲಿ 71 ರನ್ ಗಳಿಸಿದರೆ ಪೋಪ್ 121 ರನ್ ಗಳಿಸಿದರು. ನಂತರ ಸ್ಟೋಕ್ಸ್ ಅರ್ಧಶತಕದ ನೆರವಿನೊಂದಿಗೆ ಇಂಗ್ಲೆಂಡ್​ 416 ರನ್ ಗಳಿಸಿತು.​

ವೆಸ್ಟ್ ಇಂಡೀಸ್ ದಿಟ್ಟ ಉತ್ತರ ನೀಡಿ ಮೊದಲ ಇನ್ನಿಂಗ್ಸ್​ನಲ್ಲಿ 457 ರನ್ ಗಳಿಸಿ 41 ರನ್​ಗಳ ಮುನ್ನಡೆ ಸಾಧಿಸಿತು. ಇದರಲ್ಲಿ ಕ್ವೆಮ್ ಹಾಡ್ಜ್ (121), ಅಲಿಕ್ ಅತಾನಾಜೆ (82) ಮತ್ತು ಜೋಶುವಾ ಡಿಸಿಲ್ವಾ (82) ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 425 ರನ್ ಗಳಿಸಿದೆ. ಇದರೊಂದಿಗೆ 384 ರನ್‌ಗಳ ಮುನ್ನಡೆ ಪಡೆದೆ. ಸದ್ಯ ವೆಸ್ಟ್ ಇಂಡೀಸ್ ಚೇಸಿಂಗ್​ನಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಸಂಕಷ್ಟದಲ್ಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net