

ನವದೆಹಲಿ: ಗುರುವಾರ ನಡೆದ ಐದು ಪಂದ್ಯಗಳ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಆತಿಥೇಯ ಭಾರತ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 2 ವಿಕೆಟ್ಗಳ ಭರ್ಜರಿ ಗೆಲುವಿನೊಂದಿಗೆ 1-0 ಅಂತರದಲ್ಲಿ ಮುನ್ನೆಡೆ ಸಾಧಿಸಿದೆ. ಗುರಿ ಬೆನ್ನತ್ತಿದ ಭಾರತಕ್ಕೆ ಒಂದು ಎಸೆತಕ್ಕೆ ಒಂದು ರನ್ ಬೇಕಿರುವಾಗ ಯುವ ಎಡಗೈ ಆಟಗಾರ ರಿಂಕು ಸಿಂಗ್ ಸಿಕ್ಸರ್ ಸಿಡಿಸಿದರು. ಆದರೆ, ಸಿಕ್ಸರ್ ಅನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಅದಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ.
ನಿನ್ನೆ (ನ.23) ವಿಶಾಖಪಟ್ಟಣದ ಡಾ. ವೈ.ಎಸ್. ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿ ಆಸ್ಟ್ರೇಲಿಯಾ, ಜೋಶ್ ಇಂಗ್ಲಿಸ್ (110 ರನ್, 50 ಎಸೆತ, 11 ಬೌಂಡರಿ, 8 ಸಿಕ್ಸರ್) ಅಬ್ಬರದ ಶತಕದ ನೆರವಿನಿಂದ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.
ಗುರಿ ಬೆನ್ನತ್ತಿದ ಟೀಮ್ ಇಂಡಿಯಾ, ಸೂರ್ಯಕುಮಾರ್ ಯಾದವ್ (80 ರನ್, 42 ಎಸೆತ, 9 ಬೌಂಡರಿ, 4 ಸಿಕ್ಸರ್) ಮತ್ತು ಇಶಾನ್ ಕಿಶಾನ್ (58 ರನ್, 39 ಎಸೆತ, 2 ಬೌಂಡರಿ, 5 ಸಿಕ್ಸರ್) ಅವರ ಅಮೋಘ ಅರ್ಧಶತಕಗಳ ನೆರವಿನಿಂದ ಆಸೀಸ್ ಗುರಿಯನ್ನು ಮುಟ್ಟಿತು. ಆದಾಗ್ಯೂ ಸೂರ್ಯಕುಮಾರ್ ಮತ್ತು ಇಶಾನ್ ಔಟಾದ ಬಳಿಕ ಕೊನೆಯಲ್ಲಿ ಅಬ್ಬರಿಸಿದ ರಿಂಕು ಸಿಂಗ್ (ಅಜೇಯ 22 ರನ್, 14 ಎಸೆತ, 4 ಬೌಂಡರಿ) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಟೀಮ್ ಇಂಡಿಯಾ ಗೆಲುವಿಗೆ 6 ಎಸೆತದಲ್ಲಿ 7 ರನ್ ಬೇಕಿದ್ದಾಗ ಸೀನ್ ಅಬ್ಬಾಟ್ ಎಸೆದ ಕೊನೆ ಓವರ್ನಲ್ಲಿ ಅಕ್ಷರ್ ಪಟೇಲ್ (2), ರವಿ ಬಿಷ್ಣೋಯ್ (0) ಮತ್ತು ಅರ್ಷದೀಪ್ ಸಿಂಗ್ (0) ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಒಂದು ಎಸೆತಕ್ಕೆ ಒಂದು ರನ್ ಬೇಕಿದ್ದ ಸಂರ್ಭದಲ್ಲಿ ರಿಂಕು ಸಿಂಗ್ ಸಿಕ್ಸರ್ ಸಿಡಿಸಿದರು. ಆದರೆ, ಸಿಕ್ಸರ್ ಅನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಕೊನೆಯ ಎಸೆತ ನೋಬಾಲ್ ಎಂದು ಅಂಪೈರ್ ತೀರ್ಪು ನೀಡಿದರು. ಗೆಲುವಿಗೆ ಒಂದು ರನ್ ಬೇಕಿದ್ದರಿಂದ ಸಿಕ್ಸರ್ ಬದಲು ನೋಬಾಲ್ ಅನ್ನು ಗಣನೆಗೆ ತೆಗೆದುಕೊಳ್ಳಲಾಯಿತು. ಇದರಿಂದ ರಿಂಕು, ಸಿಕ್ಸರ್ ವ್ಯರ್ಥವಾಯಿತು. ಅಂತಿಮವಾಗಿ ಭಾರತ 19.5 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಗೆಲುವಿನ ನಗೆ ಬೀರಿತು. (ಏಜೆನ್ಸೀಸ್)