

ಕೊಲಂಬೊ: ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಆತಿಥೆಯರ ಎದುರು ಪ್ರವಾಸಿ ತಂಡದ ಆಟಗಾರರು ಮೇಲುಗೈ ಸಾಧಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಆಟಗಾರರು ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ. ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರು ಬುಧವಾರ (ಜುಲೈ 31) ನಿಧನರಾದರು. ಅವರಿಗೆ ಸಂತಾಪ ಸೂಚಿಸುವ ನಿಟ್ಟಿನಲ್ಲಿ ಭಾರತ ಆಟಗಾರರು ಕೈಗೆ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಬಿಸಿಸಿಐ ಬುಧವಾರ ನಿಧನರಾದ ಭಾರತದ ಮಾಜಿ ಕ್ರಿಕೆಟಿಗ ಮತ್ತು ತರಬೇತುದಾರ ಅಂಶುಮಾನ್ ಗಾಯಕ್ವಾಡ್ ಅವರ ಸ್ಮರಣಾರ್ಥ ಟೀಮ್ ಇಂಡಿಯಾ ಇಂದು ಕಪ್ಪು ತೋಳುಗಳನ್ನು ಧರಿಸಿದೆ ಎಂದು ತಿಳಿಸಿದೆ.
ಭಾರತದ ಪರ 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿರುವ ಅಂಶುಮಾನ್ ಗಾಯಕ್ವಾಡ್ 2254 ರನ್ ಗಳಿಸಿದ್ದಾರೆ. 1983 ರಲ್ಲಿ ಜಲಂಧರ್ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ 201 ರನ್ಗಳಿಸಿದ್ದರು. ಕಳೆದ ಕೆಲ ದಿನಗಳ ಹಿಂದೆ ತೀವ್ರ ಅಸ್ವಸ್ಥರಾಗಿ ಅಂಶುಮಾನ್ ಅವರು ಆಸ್ಪತ್ರೆ ಸೇರಿದಾಗ ಬಿಸಿಸಿಐ ಅವರ ಚಿಕಿತ್ಸೆಗೆಂದು ಒಂದು ಕೋಟಿ ರೂಪಾಯ ಧನಸಹಾಯ ಮಾಡಿತ್ತು.