

ಬೆಂಗಳೂರು: ಹಲವು ಏಕಪಕ್ಷೀಯ ಪಂದ್ಯಗಳಿಂದ ಕೂಡಿರುವ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ ಹಂತಕ್ಕೇರುವ ಪೈಪೋಟಿಯೂ ಬಹುತೇಕ ಏಕಪಕ್ಷೀಯವಾಗಿ ಸಾಗುತ್ತಿದೆ. ಲೀಗ್ ಹಂತದಲ್ಲಿ 31 ಪಂದ್ಯಗಳು ಮುಗಿದಿದ್ದು, ಇನ್ನು 14 ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಇದುವರೆಗೆ ಯಾವ ತಂಡಕ್ಕೂ ಸೆಮೀಸ್ ಸ್ಥಾನ ಖಚಿತವಾಗದಿದ್ದರೂ, ಇವೇ ನಾಲ್ಕು ತಂಡಗಳು ಉಪಾಂತ್ಯಕ್ಕೇರಬಹುದು ಎಂದು ಹೇಳಬಹುದಾದಷ್ಟು ಸ್ಪಷ್ಟ ಚಿತ್ರಣ ನಿರ್ಮಾಣವಾಗಿದೆ. ಸದ್ಯದ ಪ್ರಕಾರ ಆತಿಥೇಯ ಭಾರತ ಈಗಾಗಲೆ ಸೆಮೀಸ್ಗೆ ಒಂದು ಕಾಲು ಇಟ್ಟಿದ್ದರೆ, ದಕ್ಷಿಣ ಆಫ್ರಿಕಾ ಕೂಡ ಬಹುತೇಕ ಸನಿಹದಲ್ಲಿದೆ. ಉಳಿದೆರಡು ಸ್ಥಾನಗಳಿಗೆ ಹಾಲಿ ರನ್ನರ್ಅಪ್ ನ್ಯೂಜಿಲೆಂಡ್ ಮತ್ತು 5 ಬಾರಿಯ ಚಾಂಪಿಯನ್ ಆಸ್ಟ್ರೆಲಿಯಾ ನೆಚ್ಚಿನ ತಂಡಗಳಾಗಿವೆ. ಆದರೆ ಉಳಿದ 6 ತಂಡಗಳ ಪೈಕಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಬಾಂಗ್ಲಾ ಹೊರತಾಗಿ 4 ತಂಡಗಳಷ್ಟೇ ಇನ್ನೂ ರೇಸ್ನಲ್ಲಿವೆ ಎನ್ನಬಹುದು. ಅಫ್ಘಾನಿಸ್ತಾನ ನಿಕಟ ಪೈಪೋಟಿ ಒಡ್ಡುವ ಅವಕಾಶ ಹೊಂದಿದ್ದರೆ, ಮಾಜಿ ಚಾಂಪಿಯನ್ಗಳಾದ ಶ್ರೀಲಂಕಾ, ಪಾಕಿಸ್ತಾನ ಜತೆಗೆ ನೆದರ್ಲೆಂಡ್ ಇನ್ನೂ ಅಲ್ಪ ಆಸೆ ಉಳಿಸಿಕೊಂಡಿವೆ.
ಭಾರತ:
ಆತಿಥೇಯ ಭಾರತ ಸತತ 6 ಜಯದೊಂದಿಗೆ ಸೆಮೀಸ್ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದ್ದರೂ, ಉಪಾಂತ್ಯ ಪ್ರವೇಶಕ್ಕೆ ಇನ್ನೂ ಅಧಿಕೃತ ಮುದ್ರೆ ಬಿದ್ದಿಲ್ಲ. ಯಾಕೆಂದರೆ ಲೆಕ್ಕಾಚಾರಗಳ ಪ್ರಕಾರ, ಉಳಿದ 3 ಪಂದ್ಯಗಳಲ್ಲಿ ಹೀನಾಯವಾಗಿ ಸೋತರೆ ಈಗಲೂ ಹೊರಬೀಳುವ ಅಪಾಯವಿದೆ! ಅಫ್ಘಾನಿಸ್ತಾನ ಸಹಿತ 5 ತಂಡಗಳು ಸದ್ಯ ತಲಾ 12 ಅಂಕ ಕಲೆಹಾಕುವ ಅವಕಾಶ ಹೊಂದಿವೆ. ಇದು ಸಾಧ್ಯವಾದರೆ ಉತ್ತಮ ರನ್ರೇಟ್ ಹೊಂದಿರುವ 4 ತಂಡಗಳಷ್ಟೇ ಸೆಮೀಸ್ಗೇರಲಿವೆ. ಆದರೆ ಸದ್ಯ ಭಾರತದ ರನ್ರೇಟ್ ಉತ್ತಮವಾಗಿಯೇ ಇದೆ. ಯಾವುದಕ್ಕೂ ಇನ್ನೊಂದು ಪಂದ್ಯ ಗೆದ್ದರೆ, ಬೇರಾವ ಲೆಕ್ಕಾಚಾರವೂ ಇಲ್ಲದೆ ಸೆಮೀಸ್ ಸ್ಥಾನ ಖಚಿತಪಡಿಸಿಕೊಳ್ಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಭಾರತ ಅಂಕಪಟ್ಟಿಯ ಅಗ್ರ ತಂಡವಾಗಿ ಉಪಾಂತ್ಯಕ್ಕೇರುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.
ಬಾಕಿ ಪಂದ್ಯ: ನ. 2: ಶ್ರೀಲಂಕಾ (ಮುಂಬೈ), ನ. 5: ದಕ್ಷಿಣ ಆಫ್ರಿಕಾ (ಕೋಲ್ಕತ), ನ.12: ನೆದರ್ಲೆಂಡ್ (ಬೆಂಗಳೂರು).
ದಕ್ಷಿಣ ಆಫ್ರಿಕಾ:
ಆರಂಭಿಕ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿರುವ ದಕ್ಷಿಣ ಆಫ್ರಿಕಾದ ಸೆಮೀಸ್ ಹಾದಿಯೂ ಸುಗಮವೆನಿಸಿದೆ. ಉಳಿದ 3ರಲ್ಲಿ 2ರಲ್ಲಿ ಗೆದ್ದರೆ ಸೆಮೀಸ್ ಖಚಿತವೆನಿಸಲಿದೆ. ಬಲಿಷ್ಠ ರನ್ರೇಟ್ನಿಂದಾಗಿ 1ರಲ್ಲಿ ಗೆದ್ದರೂ ಸೆಮೀಸ್ ತಪ್ಪುವ ಸಾಧ್ಯತೆ ಕ್ಷೀಣ. ಆದರೆ, ಮೊದಲು ಬ್ಯಾಟಿಂಗ್ ಮಾಡಿದಾಗ ರನ್ಪ್ರವಾಹ ಹರಿಸುವ ಹರಿಣಗಳು, ಚೇಸಿಂಗ್ನಲ್ಲಿ ದೌರ್ಬಲ್ಯ ಹೊಂದಿರುವುದರಿಂದ ಉಳಿದ 3ರಲ್ಲೂ ಸೋತರೆ ಹೊರಬೀಳುವ ಅಪಾಯವೂ ಇದೆ.
ಬಾಕಿ ಪಂದ್ಯ: ನ. 1: ನ್ಯೂಜಿಲೆಂಡ್ (ಪುಣೆ), ನ.5: ಭಾರತ (ಕೋಲ್ಕತ), ನ. 10: ಅಫ್ಘಾನಿಸ್ತಾನ (ಅಹಮದಾಬಾದ್).
ನ್ಯೂಜಿಲೆಂಡ್:
ಆರಂಭಿಕ 4 ಗೆಲುವುಗಳ ಬಳಿಕ ಸತತ 2 ಪಂದ್ಯ ಸೋತಿರುವ ಹಾಲಿ ರನ್ನರ್ಅಪ್ ಕಿವೀಸ್ಗೆ ಸೆಮೀಸ್ ಸ್ಥಾನ ಒಲಿಸಿಕೊಳ್ಳಲು ಉಳಿದ 3ರಲ್ಲಿ ಎರಡಾದರೂ ಗೆಲುವು ಬೇಕಾಗಿದೆ. ಉಳಿದ 3 ಪಂದ್ಯಗಳಲ್ಲಿ ಸೆಮೀಸ್ ರೇಸ್ನಲ್ಲಿರುವ ತಂಡಗಳನ್ನೇ ಎದುರಿಸಬೇಕಿರುವುದರಿಂದ, ಹಿಂದಿನ ಲಯಕ್ಕೆ ಮರಳದಿದ್ದರೆ ಅಪಾಯವಾಗಬಹುದು. ಪ್ರಮುಖವಾಗಿ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ಸೋಲದಂತೆ ಎಚ್ಚರಿಕೆ ವಹಿಸಬೇಕಿದೆ. ಉಳಿದ 3ರಲ್ಲಿ 1ರಲ್ಲಿ ಗೆದ್ದರೂ, ಆಫ್ಘನ್ ಒಂದು ಪಂದ್ಯ ಸೋತರೆ, ಉತ್ತಮ ರನ್ರೇಟ್ನಿಂದಾಗಿ ಸೆಮೀಸ್ ಆಸೆ ಇಡಬಹುದಾಗಿದೆ.
ಬಾಕಿ ಪಂದ್ಯ: ನ.1: ದಕ್ಷಿಣ ಆಫ್ರಿಕಾ (ಪುಣೆ), ನ.4: ಪಾಕಿಸ್ತಾನ (ಬೆಂಗಳೂರು), ನ. 9: ಶ್ರೀಲಂಕಾ (ಬೆಂಗಳೂರು).
ಆಸ್ಟ್ರೆಲಿಯಾ:
ಆರಂಭಿಕ 2 ಪಂದ್ಯಗಳ ಸೋಲಿನ ಬಳಿಕ ಸತತ 4 ಪಂದ್ಯ ಗೆದ್ದು ಬೀಗುತ್ತಿರುವ ಆಸೀಸ್ಗೆ 6ನೇ ಬಾರಿ ಪ್ರಶಸ್ತಿ ಗೆಲ್ಲುವ ಆಸೆ ಜೀವಂತವಿಡಲು ಇನ್ನೂ 2 ಗೆಲುವು ಬೇಕಿದೆ. ಈ ಪೈಕಿ, ಸದ್ಯ ದುರ್ಬಲವಾಗಿರುವ ಬಾಂಗ್ಲಾ ವಿರುದ್ಧ ಆಡುವ ಅನುಕೂಲವಿದೆ. ಆದರೆ, ಇನ್ನೆರಡು ಪಂದ್ಯಗಳನ್ನು ಸಾಂಪ್ರದಾಯಕ ಎದುರಾಳಿ ಇಂಗ್ಲೆಂಡ್ ಮತ್ತು ದೈತ್ಯಸಂಹಾರಿ ಅಫ್ಘಾನಿಸ್ತಾನ ಎದುರು ಆಡಬೇಕಿದೆ. ಹೀಗಾಗಿ ಈ 2ರಲ್ಲಿ ಕನಿಷ್ಠ ಒಂದರಲ್ಲಿ ಗೆದ್ದರೂ, ಸೆಮೀಸ್ ಅವಕಾಶ ವೃದ್ಧಿಸಲಿದೆ. ಉಳಿದ 3ರಲ್ಲಿ 1ರಲ್ಲಿ ಮಾತ್ರ ಗೆದ್ದರೆ, ಉತ್ತಮ ರನ್ರೇಟ್ನಿಂದಷ್ಟೇ ಆಸೀಸ್ ಸೆಮೀಸ್ಗೇರಬಹುದು.
ಬಾಕಿ ಪಂದ್ಯ: ನ. 4: ಇಂಗ್ಲೆಂಡ್ (ಅಹಮದಾಬಾದ್), ನ. 7: ಅಫ್ಘಾನಿಸ್ತಾನ (ಮುಂಬೈ), ನ. 11: ಬಾಂಗ್ಲಾದೇಶ (ಪುಣೆ).
ಅಫ್ಘಾನಿಸ್ತಾನ
ಹಾಲಿ ಚಾಂಪಿಯನ್ ಇಂಗ್ಲೆಂಡ್, ಮಾಜಿ ಚಾಂಪಿಯನ್ಗಳಾದ ಪಾಕಿಸ್ತಾನ, ಶ್ರೀಲಂಕಾಕ್ಕೆ ಆಘಾತ ನೀಡಿ ಗಮನಸೆಳೆದಿರುವ ಅಫ್ಘಾನಿಸ್ತಾನ, ಅಚ್ಚರಿಯ ತಂಡವಾಗಿ ಸೆಮೀಸ್ಗೇರುವ ಅವಕಾಶ ಈಗಲೂ ಜೀವಂತವಾಗಿದೆ. ಸದ್ಯದ ಲೆಕ್ಕಾಚಾರ ಪ್ರಕಾರ, ಸೆಮೀಸ್ ರೇಸ್ನಲ್ಲಿರುವ 5ನೇ ತಂಡ ಇದುವೇ ಆಗಿದೆ. ಉಳಿದ 3ರಲ್ಲೂ ಗೆದ್ದರೆ ಆಫ್ಘನ್ 12 ಅಂಕ ಕಲೆಹಾಕಲಿರುವುದರಿಂದ ಇತಿಹಾಸ ಸೃಷ್ಟಿಸುವ ಅವಕಾಶ ಹೆಚ್ಚಿದೆ. ಸ್ಪಿನ್ನರ್ಗಳೆದುರು ದೌರ್ಬಲ್ಯ ಹೊಂದಿರುವ ತಂಡಗಳೇ ಮುಂದಿನ 3 ಎದುರಾಳಿಗಳಾಗಿರುವುದರಿಂದ, ಸದ್ಯಕ್ಕೆ ಯಾವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಬಾಕಿ ಪಂದ್ಯ: ನ.3: ನೆದರ್ಲೆಂಡ್ (ಲಖನೌ), ನ.7: ಆಸ್ಟ್ರೆಲಿಯಾ (ಮುಂಬೈ), ನ.10: ದಕ್ಷಿಣ ಆಫ್ರಿಕಾ (ಅಹಮದಾಬಾದ್).
ಪಾಕಿಸ್ತಾನ, ಶ್ರೀಲಂಕಾ, ನೆದರ್ಲೆಂಡ್
ಲೆಕ್ಕಾಚಾರಗಳ ಪ್ರಕಾರ, ಪಾಕಿಸ್ತಾನ, ಶ್ರೀಲಂಕಾ, ನೆದರ್ಲೆಂಡ್ಗೂ ಸೆಮೀಸ್ ಅವಕಾಶವಿದೆ. ಆದರೆ ಇದು ತೀರ ವಿರಳ ಸಾಧ್ಯತೆಯಾಗಿದೆ. ಈ 3 ತಂಡಗಳು ಉಳಿದೆಲ್ಲ ಪಂದ್ಯಗಳಲ್ಲಿ ಗೆಲ್ಲಬೇಕು, ಇತರ ಪಂದ್ಯಗಳ ಫಲಿತಾಂಶ ವರದಾನವಾಗಬೇಕು ಮತ್ತು ರನ್ರೇಟ್ನಲ್ಲೂ ಮೇಲುಗೈ ಸಾಧಿಸಬೇಕು. ಈ ಪೈಕಿ ಒಂದರಲ್ಲಿ ಎಡವಿದರೂ ಗೇಟ್ಪಾಸ್ ಸಿಗಲಿದೆ. ಆಸೀಸ್, ಕಿವೀಸ್ ತಂಡಗಳು ಉಳಿದ 3ರಲ್ಲಿ ಒಂದರಲ್ಲಷ್ಟೇ ಗೆದ್ದರೆ, ದಕ್ಷಿಣ ಆಫ್ರಿಕಾ ಉಳಿದ ಮೂರೂ ಪಂದ್ಯ ಸೋತರೆ, ಆಫ್ಘನ್ 1 ಪಂದ್ಯ ಸೋತರೆ, ಪಾಕ್, ಲಂಕಾ, ನೆದರ್ಲೆಂಡ್ ಉಳಿದ 3 ಪಂದ್ಯ ಗೆದ್ದರೆ ಆಗ 7 ತಂಡಗಳು ತಲಾ 10 ಅಂಕ ಕಲೆಹಾಕಲಿದ್ದು, ಈ ಪೈಕಿ ಉತ್ತಮ ರನ್ರೇಟ್ ಹೊಂದಿರುವ 3 ತಂಡಗಳು ಉಪಾಂತ್ಯಕ್ಕೇರುತ್ತವೆ.
ಪಾಕ್ ಬಾಕಿ ಪಂದ್ಯ: ನ.4: ನ್ಯೂಜಿಲೆಂಡ್ (ಬೆಂಗಳೂರು), ನ. 11: ಇಂಗ್ಲೆಂಡ್ (ಕೋಲ್ಕತ).
ಶ್ರೀಲಂಕಾ ಬಾಕಿ ಪಂದ್ಯ: ನ.2: ಭಾರತ (ಮುಂಬೈ), ನ.6: ಬಾಂಗ್ಲಾದೇಶ (ನವದೆಹಲಿ), ನ.9: ನ್ಯೂಜಿಲೆಂಡ್ (ಬೆಂಗಳೂರು).
ನೆದರ್ಲೆಂಡ್ ಬಾಕಿ ಪಂದ್ಯ: ನ.3: ಅಫ್ಘಾನಿಸ್ತಾನ (ಲಖನೌ), ನ. 8: ಇಂಗ್ಲೆಂಡ್ (ಪುಣೆ), ನ.12: ಭಾರತ (ಬೆಂಗಳೂರು).