

ಬೆಂಗಳೂರು: ಒಲಿಂಪಿಕ್ಸ್ ಪದಕ ಗೆಲ್ಲುವುದು ಎಲ್ಲ ಕ್ರೀಡಾಪಟುಗಳ ಕನಸು. ಅದನ್ನು ನನಸಾಗಿಸಲು ಸಾಕಷ್ಟು ಕಠಿಣ ಪರಿಶ್ರಮ, ಬದ್ಧತೆ, ದೃಢಸಂಕಲ್ಪ ಮತ್ತು ಸ್ವಲ್ಪ ಅದೃಷ್ಟವೂ ಬೇಕಾಗುತ್ತದೆ. ಹೀಗೆ ಕಠಿಣ ಹಾದಿಯಲ್ಲಿ ಸಾಗಿ ವಿಜೇತರಾಗುವ ಕ್ರೀಡಾಪಟುಗಳು ಪದಕ ವೇದಿಕೆಯಲ್ಲಿ ಕೊರಳಿಗೆ ಬಿದ್ದ ಪದಕವನ್ನು ಕಚ್ಚುವುದನ್ನು ನೀವು ಹೆಚ್ಚಾಗಿ ಕಂಡಿರಬಹುದು. ಪ್ಯಾರಿಸ್ ಒಲಿಂಪಿಕ್ಸ್ನಲ್ಲೂ ಹೆಚ್ಚಿನ ಪದಕ ವಿಜೇತ ಕ್ರೀಡಾಪಟುಗಳು ಹೀಗೆ ಮಾಡಿದ್ದಾರೆ. ಭಾರತದ ಪರ ಅವಳಿ ಒಲಿಂಪಿಕ್ಸ್ ಪದಕ ಗೆದ್ದ ಶೂಟರ್ ಮನು ಭಾಕರ್ ಕೂಡ ಇದರಿಂದ ಹೊರತಾಗಿಲ್ಲ. ಹಾಗಾದರೆ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದವರು ಅದನ್ನು ಯಾಕೆ ಕಚ್ಚುತ್ತಾರೆ ಗೊತ್ತೇ? ಇದರ ಹಿಂದಿರುವ ಕೆಲ ಕಾರಣಗಳು ಹೀಗಿವೆ...
ಆಧುನಿಕ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ನೀಡುವ ಪದ್ಧತಿ ಮೊದಲ ಆವೃತ್ತಿಯಿಂದಲೂ ಇರಲಿಲ್ಲ. 1896ರಲ್ಲಿ ಒಲಿಂಪಿಕ್ಸ್ ಆರಂಭಗೊಂಡಾಗ ಮೊದಲ ಸ್ಥಾನ ಪಡೆದವರಿಗೆ ಚಿನ್ನದ ಪದಕ ನೀಡಲಾಗಿತ್ತು ಮತ್ತು 2ನೇ ಸ್ಥಾನ ಪಡೆದವರಿಗೆ ಕಂಚಿನ ಪದಕ ನೀಡಲಾಗಿತ್ತು. ಆಗ 3ನೇ ಸ್ಥಾನ ಪಡೆದವರಿಗೆ ಪದಕ ನೀಡಿರಲಿಲ್ಲ. ನಂತರ 1900ರ 2ನೇ ಒಲಿಂಪಿಕ್ಸ್ನಲ್ಲಿ ವಿಜೇತರಿಗೆ ಟ್ರೋಫಿ ಅಥವಾ ಕಪ್ಗಳನ್ನು ನೀಡಲಾಗಿತ್ತು. 1904ರ ಒಲಿಂಪಿಕ್ಸ್ನಲ್ಲಿ ಮೊದಲ ಬಾರಿಗೆ ಅಗ್ರ 3 ಸ್ಥಾನ ಪಡೆದವರಿಗೆ ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚಿನ ಪದಕ ನೀಡುವ ಪದ್ಧತಿಯನ್ನು ಆರಂಭಿಸಲಾಯಿತು. ಆಗ ಸಂಪೂರ್ಣ ಚಿನ್ನದಿಂದಲೇ ಮಾಡಿದ ಪದಕವನ್ನು ನೀಡಲಾಗಿತ್ತು. 1912ರ ಸ್ಟಾಕ್ಹೋಮ್ ಒಲಿಂಪಿಕ್ಸ್ವರೆಗೂ ಇದು ಸಾಗಿತ್ತು. ಆದರೆ ಆಗ ಮೊದಲ ಮಹಾಯುದ್ಧ ನಡೆದಾಗ ಚಿನ್ನದ ಬೆಲೆ ಗಗನಕ್ಕೇರಿತು. ಇದರಿಂದಾಗಿ ಚಿನ್ನದ ಪದಕದಲ್ಲಿ ಚಿನ್ನದ ಪ್ರಮಾಣ ಕಡಿಮೆ ಮಾಡಲಾಯಿತು. ನಂತರದಲ್ಲಿ ಈಗಿನ ಪ್ಯಾರಿಸ್ ಒಲಿಂಪಿಕ್ಸ್ವರೆಗೂ ಚಿನ್ನದ ಪದಕದಲ್ಲಿ ಕೇವಲ 6 ಗ್ರಾಮ್ ಮಾತ್ರ ಚಿನ್ನವಿರುತ್ತದೆ. ಉಳಿದೆಲ್ಲವೂ ಬೆಳ್ಳಿ ಆಗಿರುತ್ತದೆ. ಕಂಚಿನ ಪದಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಾಮ್ರ ಇರುತ್ತದೆ.
ಒಲಿಂಪಿಯನ್ಗಳು ಪದಕ ಕಚ್ಚುವ ಕ್ರಮ ಯಾವಾಗ ಶುರುವಾಯಿತು ಎಂದು ನಿಖರವಾಗಿ ಯಾರಿಗೂ ಗೊತ್ತಿಲ್ಲದಿದ್ದರೂ, ಒಲಿಂಪಿಕ್ಸ್ನಲ್ಲಿ ಸಂಪೂರ್ಣ ಚಿನ್ನದಿಂದ ಮಾಡಿದ ಪದಕ ನೀಡಲು ಶುರು ಮಾಡಿದಂದಿನಿಂದ ಆರಂಭಗೊಂಡಿರಬಹುದು ಎನ್ನಲಾಗುತ್ತದೆ. ಯಾಕೆಂದರೆ, ಚಿನ್ನದ ಪರಿಶುದ್ಧತೆಯನ್ನು ಪರೀಸಲು ಕಚ್ಚಿ ನೋಡುವುದು ಕೂಡ ಒಂದು ಕ್ರಮವಾಗಿದೆ. ಚಿನ್ನ ಮೆದು ಲೋಹವಾಗಿದ್ದು, ಅದನ್ನು ಕಚ್ಚಿದಾಗ ಅದರಲ್ಲಿ ಹಲ್ಲಿನ ಗುರುತು ಮೂಡಿದರೆ ಅದನ್ನು ಶುದ್ಧ ಚಿನ್ನ, ಇಲ್ಲದಿದ್ದರೆ ನಕಲಿ ಚಿನ್ನ ಎನ್ನಲಾಗುತ್ತದೆ. ಹೀಗಾಗಿ ಸಂಪೂರ್ಣ ಚಿನ್ನದ ಪದಕಗಳನ್ನು ನೀಡಿದಾಗ ಕ್ರೀಡಾಪಟುಗಳು ಅದರ ಶುದ್ಧತೆ ಪರೀಸಲು ಕಚ್ಚಿರಬಹುದು. ನಂತರ ಅದನ್ನು ಕ್ರೀಡಾಪಟುಗಳು ಮುಂದೆಯೂ ಅನುಕರಿಸುತ್ತ ಬಂದಿರಬಹುದು ಎನ್ನಲಾಗುತ್ತದೆ.
ಸ್ಟಾರ್ ಕ್ರೀಡಾಪಟುಗಳು ಪದಕ ವೇದಿಕೆ ಏರಿದಾಗ ಈ ರೀತಿ ಪದಕವನ್ನು ಕಚ್ಚಿ ಪೋಸ್ ನೀಡಿರುವ ದೃಷ್ಟಾಂತ ಹಲವಿದೆ. ಅದನ್ನೇ ನಂತರದಲ್ಲಿ ಬಂದ ಕ್ರೀಡಾಪಟುಗಳು ಅನುಸರಿಸಿರಬಹುದು. ಪ್ರಮುಖವಾಗಿ ಅಮೆರಿಕದ ಚಿನ್ನದ ಮೀನು ಮೈಕೆಲ್ ಫೆಲ್ಫ್ಸ್ ಸಹಿತ ಕೆಲ ಅಗ್ರ ಕ್ರೀಡಾಪಟುಗಳು ಪದಕ ಕಚ್ಚಿ ಪೋಸ್ ನೀಡಿರುವುದನ್ನು ಹಲವು ಯುವ ಕ್ರೀಡಾಪಟುಗಳು ನೋಡಿ ಸಂಭ್ರಮಿಸಿದ್ದು, ಬಳಿಕ ಅವರೂ ಪದಕ ಗೆದ್ದಾಗ ಅದನ್ನೇ ಅನುಕರಿಸಿ ಗೆಲುವನ್ನು ಆನಂದಿಸಿರಬಹುದು. ಹೀಗಾಗಿ ಈಗಿನ ಕ್ರೀಡಾಪಟುಗಳು ತಮ್ಮ ಆದರ್ಶ ಕ್ರೀಡಾಪಟುಗಳು ನೀಡಿದ ಭಂಗಿಯಲ್ಲೇ ಪೋಸ್ ನೀಡಿ ಸಂಭ್ರಮಿಸುತ್ತಿರಬಹುದು ಎನ್ನಲಾಗುತ್ತದೆ.
ಮತ್ತೊಂದು ಪ್ರಮುಖ ಕಾರಣ ಮತ್ತು ಈಗಲೂ ಅದು ಮುಂದುವರಿಯಲು ಪ್ರಮುಖ ಕಾರಣಕರ್ತರು ಒಲಿಂಪಿಕ್ಸ್ ಛಾಯಾಗ್ರಾಹಕರು. ಕ್ರೀಡಾಪಟುಗಳು ಪದಕ ವೇದಿಕೆ ಏರಿ ಛಾಯಾಚಿತ್ರಕ್ಕೆ ಪೋಸ್ ನೀಡುವಾಗ, ಛಾಯಾಗ್ರಾಹಕರು ವಿಶೇಷವಾದ ಚಿತ್ರ ತಮಗೆ ಸಿಗಬೇಕೆಂದು ಬಯಸುತ್ತಾರೆ. ಹೀಗಾಗಿ ಹಲವು ಸಂದರ್ಭಗಳಲ್ಲಿ ಛಾಯಾಗ್ರಾಹಕರೇ ಕ್ರೀಡಾಪಟುಗಳಿಗೆ ಪದಕವನ್ನು ಕಚ್ಚಿ ಪೋಸ್ ನೀಡಲು ಪ್ರೇರೇಪಿಸುತ್ತಾರೆ ಎನ್ನಲಾಗುತ್ತದೆ. "ಸ್ಮೈಲ್ ಪ್ಲೀಸ್' ಎನ್ನುವ ಛಾಯಾಗ್ರಾಹಕರು ಜತೆಯಲ್ಲೇ, "ಬೈಟ್ ಯುವರ್ ಮೆಡಲ್' ಎಂದೂ ಹೇಳುತ್ತಾರೆ ಎಂದು ಕೆಲ ಕ್ರೀಡಾಪಟುಗಳು ಹೇಳುತ್ತಾರೆ.
ಪದಕ ಕಚ್ಚಿ ಹಲ್ಲು ಮುರಿದುಕೊಂಡ ಕ್ರೀಡಾಪಟು!
ಕ್ರೀಡಾಪಟುಗಳು ಪದಕವನ್ನು ಕಚ್ಚುವುದು ಅಪಾಯಕಾರಿ ಕೂಡ ಆಗಿದೆ. 2010ರ ಚಳಿಗಾಲದ ಒಲಿಂಪಿಕ್ಸ್ ವೇಳೆ ಜರ್ಮನಿಯ ಕ್ರೀಡಾಪಟು ಡೇವಿಡ್ ಮೂಲ್ಲರ್ ತಾನು ಗೆದ್ದ ಬೆಳ್ಳಿಯ ಪದಕವನ್ನು ಹಲ್ಲಿನಿಂದ ಕಚ್ಚಿ ಪೋಸ್ ನೀಡಿದ್ದರು. ನಂತರ ಅವರು ಊಟಕ್ಕೆ ಹೋದಾಗ ತನ್ನ ಹಲ್ಲಿನ ಸಣ್ಣ ತುಂಡೊಂದು ಮಾಯಾವಾಗಿರುವುದನ್ನು ಗಮನಿಸಿದ್ದರಂತೆ!