

ಪ್ಯಾರಿಸ್: ಕೇರಳದ ಸೈಕ್ಲಿಸ್ಟ್ ಒಬ್ಬರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾರ ಜಾವೆಲಿನ್ ಎಸೆತ ಸ್ಪರ್ಧೆಯನ್ನು ವೀಕ್ಷಿಸುವ ಸಲುವಾಗಿ ಕಲ್ಲಿಕೋಟೆಯಿಂದ 22 ಸಾವಿರ ಕಿಲೋಮೀಟರ್ ದೂರದ ಪ್ಯಾರಿಸ್ವರೆಗೆ 2 ವರ್ಷಗಳಲ್ಲಿ ಸೈಕಲ್ ಮೂಲಕ ಪ್ರಯಾಣಿಸಿದ್ದಾರೆ.
2022ರ ಆಗಸ್ಟ್ 15ರಂದು ಸೈಕಲ್ ತುಳಿಯಲಾರಂಭಿಸಿದ ಫಯಿಸ್ ಅಶ್ರಫ್ ಅಲಿ 30 ದೇಶಗಳನ್ನು ಸುತ್ತಿ ಫ್ರಾನ್ಸ್ ತಲುಪಿದ್ದಾರೆ. 17 ದೇಶಗಳನ್ನು ಸುತ್ತಿನ ಕಳೆದ ವರ್ಷ ಆಗಸ್ಟ್ನಲ್ಲಿ ಅವರು ಬುಡಾಪೆಸ್ಟ್ ತಲುಪಿದ್ದರು. ಆಗ ಅಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಿದ ನೀರಜ್ ಚೋಪ್ರಾರನ್ನು ಭೇಟಿಯಾಗಿದ್ದರು. ಇದಕ್ಕೆ ಕೇರಳದ ಅಥ್ಲೆಟಿಕ್ಸ್ ಕೋಚ್ ಒಬ್ಬರೂ ನೆರವಾಗಿದ್ದರು.
ಮೊದಲಿಗೆ 13 ಸಾವಿರ ರೂ. ಮೌಲ್ಯದ ಸೈಕಲ್ನಲ್ಲಿ ಪ್ರಯಾಣ ಆರಂಭಿಸಿದ್ದ ಅಶ್ರಫ್ ಅಲಿ, ಸಿಂಗಾಪುರ ತಲುಪಿದ ಬಳಿಕ 1 ಲಕ್ಷ ರೂ. ಮೌಲ್ಯದ ಸೈಕಲ್ ಖರೀದಿಸಿದ್ದರು. ಅಂತಿಮವಾಗಿ ಪ್ಯಾರಿಸ್ಗೆ ಪ್ರಯಾಣಿಸಲು ಅಶ್ರಫ್ ಅಲಿ 2.5 ಲಕ್ಷ ರೂ. ಮೌಲ್ಯದ ಅತ್ಯಾಧುನಿಕ ಸೈಕಲ್ ಖರೀದಿಸಿದ್ದರು. ಪ್ರತಿದಿನ ಸರಾಸರಿ 150 ಕಿಲೋಮೀಟರ್ ಪ್ರಯಾಣಿಸುತ್ತಿದ್ದರು. 4 ಜೊತೆ ಬಟ್ಟೆಯೊಂದಿಗೆ ಒಂದು ಟೆಂಟ್, ಮಲಗುವ ಬ್ಯಾಗ್ ಜತೆಗೆ ಸೈಕಲ್ನಲ್ಲಿ ಸುಮಾರು 50 ಕೆಜಿ ಭಾರದ ವಸ್ತುಗಳೊಂದಿಗೆ ಪ್ರಯಾಣಿಸಿದ್ದಾರೆ.