ಇಂಗ್ಲೆಂಡ್​ ವಿರುದ್ಧ ಮೊದಲ 2 ಟೆಸ್ಟ್​ಗಳಲ್ಲಿ ವಿರಾಟ್​ ಕೊಹ್ಲಿ ಸ್ಥಾನ ತುಂಬುವವರು ಯಾರು?

kohli web
Published on

ನವದೆಹಲಿ: ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಬಹುನಿರೀಕ್ಷಿತ ಟೆಸ್ಟ್​ ಸರಣಿ ಆರಂಭಕ್ಕೆ ಮೊದಲೇ ಟೀಮ್​ ಇಂಡಿಯಾಗೆ ಬಲುದೊಡ್ಡ ಶಾಕ್​ ಎದುರಾಗಿದೆ. ಮಾಜಿ ನಾಯಕ ಹಾಗೂ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ವೈಯಕ್ತಿಕ ಕಾರಣವನ್ನು ನೀಡಿ ಇಂಗ್ಲೆಂಡ್​ ವಿರುದ್ಧದ ಸರಣಿಯ ಮೊದಲ ಎರಡು ಟೆಸ್ಟ್​ ಪಂದ್ಯಗಳಿಂದ ದಿಢೀರ್​ ಹಿಂದೆ ಸರಿದಿದ್ದಾರೆ. ಇದರ ಬೆನ್ನಲ್ಲೇ ವಿರಾಟ್​ ಕೊಹ್ಲಿ ಸ್ಥಾನವನ್ನು ತುಂಬುವವರು ಯಾರು ಎಂಬ ಕುತೂಹಲವೂ ಹೆಚ್ಚಾಗಿದೆ.

ಕೊಹ್ಲಿ ಬದಲಿಗೆ ಟೆಸ್ಟ್​ ತಂಡ ಸೇರಿಕೊಳ್ಳುವ ಆಟಗಾರನ ಹೆಸರನ್ನು ಶ್ರೀವೇ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಹೇಳಿದೆ. ಈ ನಡುವೆ ಕೊಹ್ಲಿ ಸ್ಥಾನಕ್ಕೆ ಚೇತೇಶ್ವರ ಪೂಜಾರ, ರಜತ್​ ಪಾಟೀದಾರ್​, ಅಭಿಮನ್ಯು ಈಶ್ವರನ್​ ಮತ್ತು ಸರ್ಫ್ರಾಜ್​​ ಖಾನ್​ ಹೆಸರುಗಳು ಕೇಳಿಬಂದಿವೆ. ಕಳೆದ ಜೂನ್​ನಲ್ಲಿ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಆಡಿದ ಬಳಿಕ ಭಾರತ ಪರ ಯಾವುದೇ ಪಂದ್ಯ ಆಡದಿರುವ ಪೂಜಾರ, ಇತ್ತೀಚೆಗೆ ರಣಜಿಯಲ್ಲಿ ರನ್​ಮಳೆ ಹರಿಸುತ್ತಿದ್ದಾರೆ. ಪಾಟೀದಾರ್​ ಮತ್ತು ಸರ್ಫ್ರಾಜ್​ ಭಾರತ ಎ ಪರ ಇಂಗ್ಲೆಂಡ್​ ಲಯನ್ಸ್​ ವಿರುದ್ಧ ಆಡಿದ್ದರು ಮತ್ತು ಕ್ರಮವಾಗಿ ಶತಕ, ಅವಳಿ ಅರ್ಧಶತಕ ಬಾರಿಸಿ ಗಮನಸೆಳೆದಿದ್ದರು.

ಇನ್ನು ಟೀಮ್​ ಇಂಡಿಯಾದ ಆಡುವ 11ರ ಬಳಗದಲ್ಲಿ ಶುಭಮಾನ್​ ಗಿಲ್​ ಅಥವಾ ಶ್ರೇಯಸ್ ಅಯ್ಯರ್​ ಅವರು ಕೊಹ್ಲಿ ಸ್ಥಾನವನ್ನು ತುಂಬುವ ನಿರೀಕ್ಷೆ ಇದೆ. ದಕ್ಷಿಣ ಆಫ್ರಿಕಾ ಪ್ರವಾಸದ ವೈಫಲ್ಯದ ಬಳಿಕ ಇವರಿಬ್ಬರಲ್ಲಿ ಒಬ್ಬರು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೆ 11ರ ಬಳಗದಿಂದ ಹೊರಬೀಳುವ ಅಪಾಯವಿತ್ತು. ಆದರೆ ಕೊಹ್ಲಿ ಗೈರಿನಲ್ಲಿ ಇವರಿಗೆ ಮತ್ತೊಂದು ಅವಕಾಶ ಲಭಿಸುವುದು ಬಹುತೇಕ ಖಚಿತವೆನಿಸಿದೆ.

"ವೈಯಕ್ತಿಕ ಕಾರಣಗಳಿಂದಾಗಿ ಮೊದಲ ಎರಡು ಟೆಸ್ಟ್​ ಪಂದ್ಯಗಳಿಂದ ಹಿಂದೆ ಸರಿಯಲು ಅವಕಾಶ ನೀಡಬೇಕೆಂದು ಕೊಹ್ಲಿ ಬಿಸಿಸಿಐಗೆ ಮನವಿ ಸಲ್ಲಿಸಿದ್ದರು. ನಾಯಕ ರೋಹಿತ್​ ಶರ್ಮ, ಟೀಮ್​ ಮ್ಯಾನೇಜ್​ಮೆಂಟ್​ ಮತ್ತು ಆಯ್ಕೆಗಾರರೊಂದಿಗೆ ಕೊಹ್ಲಿ ತನ್ನ ನಿರ್ಧಾರದ ಬಗ್ಗೆ ಚರ್ಚಿಸಿದ್ದಾರೆ. ದೇಶವನ್ನು ಪ್ರತಿನಿಧಿಸುವುದು ಯಾವಾಗಲೂ ಅವರ ಪ್ರಮುಖ ಆದ್ಯತೆಯಾಗಿದೆ. ಆದರೆ ಕೆಲವೊಂದು ವೈಯಕ್ತಿಕ ಅನಿವಾರ್ಯ ಪರಿಸ್ಥಿತಿಯಲ್ಲಿ ಅವರ ಉಪಸ್ಥಿತಿ ಮತ್ತು ಗಮನ ಅಗತ್ಯವೆನಿಸಿದೆ. ಹೀಗಾಗಿ ಮಂಡಳಿ ಅವರ ನಿರ್ಧಾರವನ್ನು ಗೌರವಿಸುತ್ತದೆ. ತಂಡ ಮ್ಯಾನೇಜ್​ಮೆಂಟ್​ ಕೂಡ ಅವರಿಗೆ ಬೆಂಬಲ ಸೂಚಿಸಿದೆ' ಎಂದು ಬಿಸಿಸಿಐ ಸೋಮವಾರ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ವಿವರಿಸಿದೆ.

ಕೊಹ್ಲಿ ನೀಡಿರುವ ವೈಯಕ್ತಿಕ ಕಾರಣದ ಬಗ್ಗೆ ಯಾವುದೇ ಊಹಾಪೋಹಗಳನ್ನು ಹರಡದೆ, ಮಾಧ್ಯಮಗಳು ಮತ್ತು ಅಭಿಮಾನಿಗಳೂ ಅವರ ಖಾಸಗಿತನವನ್ನು ಗೌರವಿಸಬೇಕು ಎಂದು ಬಿಸಿಸಿಐ ಕೇಳಿಕೊಂಡಿದೆ. ಅತ್ತ ಇಂಗ್ಲೆಂಡ್​ ತಂಡದಲ್ಲಿ ಪ್ರಮುಖ ಬ್ಯಾಟರ್​ ಹ್ಯಾರಿ ಬ್ರೂಕ್​ ಕೂಡ ವೈಯಕ್ತಿಕ ಕಾರಣ ನೀಡಿ ಪ್ರವಾಸದಿಂದ ಹಿಂದೆ ಸರಿದ ಮರುದಿನವೇ ಕೊಹ್ಲಿ ನಿರ್ಧಾರ ಹೊರಬಿದ್ದಿದೆ. ಸರಣಿಯ ಮೊದಲ ಟೆಸ್ಟ್​ ಗುರುವಾರದಿಂದ ಹೈದರಾಬಾದ್​ನಲ್ಲಿ ನಡೆಯಲಿದ್ದರೆ, 2ನೇ ಟೆಸ್ಟ್​ ಫೆ. 2ರಿಂದ ವಿಶಾಖಪಟ್ಟಣದಲ್ಲಿ ನಡೆಯಲಿದೆ. 3ನೇ ಟೆಸ್ಟ್​ ಫೆ. 15ರಿಂದ ರಾಜ್​ಕೋಟ್​ನಲ್ಲಿ ನಡೆಯಲಿದ್ದು, ಕೊಹ್ಲಿ ತಂಡಕ್ಕೆ ಮರಳುವ ನಿರೀೆ ಇಡಲಾಗಿದೆ.

2ನೇ ಬಾರಿ ಹಿಂದೆಗೆತ

ಕೊಹ್ಲಿ ಹಾಲಿ ವರ್ಷ 2ನೇ ಬಾರಿಗೆ ವೈಯಕ್ತಿಕ ಕಾರಣ ನೀಡಿ ಟೀಮ್​ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. ಈ ಮುನ್ನ ಜನವರಿ 11ರಂದು ಅ್ಘಾನಿಸ್ತಾನ ವಿರುದ್ಧ ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಿಂದಲೂ ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿದಿದ್ದರು. ಅದೇ ದಿನ ಕೊಹ್ಲಿ ಪುತ್ರಿ ವಾಮಿಕಾ 3ನೇ ಜನ್ಮದಿನವಿದ್ದ ಕಾರಣ ಹೊರಗುಳಿದಿದ್ದರು ಎನ್ನಲಾಗಿತ್ತು. ಇನ್ನು ಕೊಹ್ಲಿ ಗಾಯದ ಹೊರತಾಗಿ ಇತರ ಕಾರಣದಿಂದಾಗಿ ಪಂದ್ಯ ತಪ್ಪಿಸಿಕೊಂಡ ಮತ್ತೊಂದು ಪ್ರಸಂಗವೆಂದರೆ, 2021ರಲ್ಲಿ ಅನುಷ್ಕಾ ಶರ್ಮ ಮೊದಲ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಆಗಿತ್ತು. ಆಗ ಕೊಹ್ಲಿ ಆಸೀಸ್​ ಪ್ರವಾಸದ ಕೊನೇ 3 ಟೆಸ್ಟ್​ ತಪ್ಪಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net