ಚೊಚ್ಚಲ IPL​ ಪಂದ್ಯದಲ್ಲೇ RCB ಎದುರು ಮಿಂಚಿದ ಸುಯಾಶ್​ ಶರ್ಮ ಯಾರು? ಇಲ್ಲಿದೆ ಅಚ್ಚರಿಯ ಮಾಹಿತಿ

Suyash Sharma
ಸುಯಾಶ್​ ಶರ್ಮ
Published on

ಕೋಲ್ಕತ: ನಿನ್ನೆ (ಏ.6) ನಡೆದ ಐಪಿಎಲ್​ ಪಂದ್ಯದಲ್ಲಿ ಕೋಲ್ಕತ ನೈಟ್​ ರೈಡರ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಹೀನಾಯ ಸೋಲನ್ನು ಅನುಭಿಸಿತು. ಕೆಕೆಆರ್ ಸ್ಪಿನ್ ದಾಳಿಗೆ ತತ್ತರಿಸಿದ ಆರ್​ಸಿಬಿ 89 ರನ್ ಅಂತರದಿಂದ ಸೋಲುಂಡಿತು. ಕೆಕೆಆರ್​ ಪರ ಚೊಚ್ಚಲ ಪಂದ್ಯವಾಡಿದ ಸುಯಾಶ್​ ಶರ್ಮ ಆರ್​ಸಿಬಿಯ ಪ್ರಮುಖ ಮೂರು ವಿಕೆಟ್​ಗಳನ್ನು ಕಬಳಿಸುವ ಮೂಲಕ ಎಲ್ಲರ ಹುಬ್ಬೇರಿಸಿದರು.

ಟಾಸ್​ ಸೋತು ಬ್ಯಾಂಟಿಂಗ್​ ಆರಂಭಿಸಿದ ಕೆಕೆಆರ್​ 89 ರನ್​ಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ಆಸರೆಯಾದ ಶಾರ್ದೂಲ್​​ ಠಾಕೂರ್​ (68) ಮತ್ತು ರಿಂಕು ಸಿಂಗ್​ (47) ಉತ್ತಮ ಜತೆಯಾಟವಾಡಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.

20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ ಕೆಕೆಆರ್​ 204ರನ್​ ಗಳಿಸಿತು. ಗುರಿ ಬೆನ್ನತ್ತಿದ ಆರ್​ಸಿಬಿ 123ರನ್​ಗೆ ಆಲೌಟ್​ ಆಯಿತು. ಕೆಕೆಆರ್​ ಪರ ವರುಣ್​ ಚಕ್ರವರ್ತಿ 4 ವಿಕೆಟ್​ ಉರುಳಿಸಿದರು. ಆದರೆ, ವಿಶೇಷ ಗಮನ ಸೆಳೆದಿದ್ದು ಮಾತ್ರ ಸುಯಾಶ್​ ಶರ್ಮ. ಕಾರಣ ಏನೆಂದರೆ, ಚೊಚ್ಚಲ ಐಪಿಎಲ್​ ಪಂದ್ಯದಲ್ಲೇ 3 ವಿಕೆಟ್ ಕಬಳಿಸಿದರು. ಇದರು ಪಂದ್ಯದ ದಿಕ್ಕನ್ನೇ ಬದಲಿಸಿತು.

19 ವರ್ಷದ ಸುಯಾಶ್​ ಶರ್ಮ, ದೆಹಲಿ ಮೂಲದವರು. ಕಳೆದ ಡಿಸೆಂಬರ್​ನಲ್ಲಿ ನಡೆದ ಮಿನಿ ಹರಾಜಿನಲ್ಲಿ 20 ಲಕ್ಷ ರೂ. ಕೆಕೆಆರ್​ ತಂಡಕ್ಕೆ ಬಿಕರಿಯಾದರು. ಗಮನಾರ್ಹ ಸಂಗತಿ ಏನೆಂದರೆ, ಆರ್​​ಸಿಬಿ ಎದುರು ಆಡುವ ಹನ್ನೊಂದರ ಬಳಗದಲ್ಲಿ ಆರಂಭದಲ್ಲಿ ಸುಯಾಶ್​ ಹೆಸರು ಇರಲಿಲ್ಲ. ಕೊನೆಯ ಬದಲಾವಣೆ ಎಂಬಂತೆ ವೆಂಕಟೇಶ್​ ಅಯ್ಯರ್​ ಬದಲಿಗೆ ಸುಯಾಶ್​ಗೆ ಸ್ಥಾನ ನೀಡಲಾಯಿತು.

ಸುಯಾಶ್ ದೆಹಲಿಯ U-25 ತಂಡಕ್ಕಾಗಿ ಆಡುತ್ತಿದ್ದಾರೆ ಮತ್ತು ನಿನ್ನೆ ನಡೆದ ಪಂದ್ಯಕ್ಕೂ ಮೊದಲು ಯಾವುದೇ ಲಿಸ್ಟ್ ಎ, ಎಫ್​ಸಿ (ಪ್ರಥಮ ದರ್ಜೆ) ಅಥವಾ T20 ಪಂದ್ಯಗಳನ್ನು ಸುಯಾಶ್​ ಆಡಿಲ್ಲ.

ಪಂದ್ಯದ ನಂತರ ಸುಯಾಶ್ ಬಗ್ಗೆ ಮಾತನಾಡಿದ ಕೆಕೆಆರ್ ನಾಯಕ ನಿತೀಶ್ ರಾಣಾ, ಸುಯಾಶ್ ಆತ್ಮವಿಶ್ವಾಸದ ಯುವಕ ಮತ್ತು ಆತ ತನ್ನ ಮೇಲೆ ತುಂಬಾ ನಂಬಿಕೆ ಹೊಂದಿದ್ದಾರೆ. ಕೊಟ್ಟ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ ಮತ್ತು ಅವರು ಆ ರೀತಿ ಬೌಲ್ ಮಾಡುವುದನ್ನು ನೋಡುವುದು ಅದ್ಭುತವಾಗಿದೆ ಎಂದಿದ್ದಾರೆ.

ಇನ್ನೊಂದೆಡೆ ಕೆಕೆಆರ್​ ಕೋಚ್ ಚಂದ್ರಕಾಂತ್ ಪಂಡಿತ್ ಮಾತನಾಡಿ, ವರುಣ್ ಚಕ್ರವರ್ತಿ ಹಾಗೂ ಸನ್ನಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಹೊಸಬ (ಸುಯಾಶ್​) ಅವರಿಗೆ ಉತ್ತಮವಾಗಿ ಬೆಂಬಲ ನೀಡಿದ. ನಾವು ಸುಯಾಶ್​ ಅವರನ್ನು ಟ್ರಯಲ್ ಮ್ಯಾಚ್‌ಗಳಲ್ಲಿ ನೋಡಿದ್ದೇವೆ ಮತ್ತು ಅವರು ಬೌಲಿಂಗ್ ಮಾಡುವ ವಿಧಾನದಿಂದ ತುಂಬಾ ಸಂತೋಷಪಟ್ಟಿದ್ದೇವೆ. ಅವರು ಅನನುಭವಿ ಆದರೆ ಉತ್ತಮ ಮನೋಭಾವವನ್ನು ತೋರಿಸುತ್ತಾರೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net