ಮಹಿಳಾ ಕ್ರಿಕೆಟ್​ನಲ್ಲಿ ಹೊಸ ಅಲೆಯನ್ನ ಎಬ್ಬಿಸಿರುವ Pratika Rawal ಯಾರು? ಅಂಪೈರ್​ ಮಗಳ ಆರ್ಭಟಕ್ಕೆ ದಾಖಲೆಗಳು ಉಡೀಸ್​

Pratika Rawal
Published on

ರಾಜ್​ಕೋಟ್​: ಇಲ್ಲಿನ ನಿರಂಜನ್​ ಷಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಐರ್ಲೆಂಡ್ ಮಹಿಳಾ ತಂಡಗಳ​ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಟೀಮ್​ ಇಂಡಿಯಾ 304 ರನ್​ಗಳ ಭರ್ಜರಿ ಜಯ ಕಂಡಿದ್ದು, ಮಹಿಳಾ ಏಕದಿನ ಕ್ರಿಕೆಟ್​ನಲ್ಲಿದ್ದ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಸರಣಿಯಲ್ಲಿ ಕ್ಲೀನ್​ಸ್ವೀಪ್​ ಸಾಧಿಸಿದೆ.

ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 435 ರನ್​ಗಳ ಸವಾಲಿನ ಮೊತ್ತೆ ಪೇರಿಸಿತ್ತು. ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಸ್ಮೃತಿ ಮಂದನಾ (135 ರನ್, 80 ಎಸೆತ, 12 ಬೌಂಡರಿ 7 ಸಿಕ್ಸರ್) ಹಾಗೂ ಪ್ರತೀಕಾ ರಾವಲ್​ (Pratika Rawal) ಮೊದಲ ವಿಕೆಟ್​ಗೆ 233 ರನ್​ಗಳ ಜತೆಯಾಟ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟಿದ್ದು, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಶೆಫಾಲಿ ವರ್ಮಾ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದ ದೆಹಲಿ ಮೂಲದ ಯುವ ಆಟಗಾರ್ತಿ ಪ್ರತೀಕಾ ರಾವಲ್ (Pratika Rawal)​, 129 ಎಸೆತಗಳಲ್ಲಿ 20 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 154 ರನ್​ಗಳನ್ನು ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದರು. ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಪ್ರತೀಕಾ ಇಲ್ಲಿಯವರೆಗೆ ನಾಯಕಿ ಸ್ಮೃತಿ ಮಂದನಾ ಜತೆಗೆ ಆರು ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದು, ಐದು ಇನ್ನಿಂಗ್ಸ್​ನಲ್ಲಿ ಐವತ್ತು ಪ್ಲಸ್ ರನ್‌ಗಳ ಜೊತೆಯಾಟವನ್ನಾಡಿದ್ದಾರೆ. ಈ ಪೈಕಿ 1ರಲ್ಲಿ ದ್ವಿಶತಕದ ಜೊತೆಯಾಟವಿದ್ದರೆ, ಉಳಿದ ಮೂರು ಪಂದ್ಯಗಳಲ್ಲಿ ಶತಕದ ಜೊತೆಯಾಟವಾಡಿದ್ಧಾರೆ. ಇನ್ನೊಂದು ಪಂದ್ಯದಲ್ಲಿ 70 ರನ್​ಗಳ ಜತೆಯಾಟವನ್ನು ಈ ಜೋಡಿ ಆಡಿದೆ.

Pratika Rawal

ಆರಂಭದಲ್ಲಿ ನಿಧಾನಗತಿಯ ಆಟಕ್ಕೆ ಒತ್ತು ನೀಡಿದ ಪ್ರತೀಕಾ (Pratika Rawal) ಆ ಬಳಿಕ ಐರ್ಲೆಂಡ್​​​ ಆಟಗಾರರನ್ನು ಚೆಂಡಾಡಿದರು. ಐರ್ಲೆಂಡ್​ ಮಾತ್ರವಲ್ಲೇ ವೆಸ್ಟ್​​ ಇಂಡೀಸ್​ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿದ್ದ ಪ್ರತೀಕಾ 40,76,18 ರನ್ ಕಲೆಹಾಕಿದ್ದರು. ಇದೀಗ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ  89,67,154 ರನ್​ಗಳನ್ನು ಬಾರಿಸುವ ಮೂಲಕ ಯುವ ಆಟಗಾರ್ತಿ ಎಲ್ಲರ ಗಮನ ಸೆಳೆಯುತ್ತಿದ್ದು, ಖಾಯಂ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಅವರ ಸ್ಥಾನಕ್ಕೆ ಇದೀಗ ಪ್ರಬಲ ಪೈಪೋಟಿ ಎದುರಾಗಿದೆ.

ಪ್ರತೀಕಾ ರಾವಲ್ (Pratika Rawal) ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೆ, ಪ್ರತೀಕಾ ಕ್ರಿಕೆಟ್​ ಜತೆಗೆ ವಿದ್ಯಾಭ್ಯಾಸದಲ್ಲೂ ಮುಂದಿದ್ದಾರೆ. 12ನೇ ತರಗತಿಯಲ್ಲಿದ್ದಾಗ 19 ವಯೋಮಿತಿ ತಂಡದಿಂದ ಹೊರಬಿದ್ದಿದ್ದ ಪ್ರತೀಕಾ, ನಂತರದಲ್ಲಿ ಕ್ರಿಕೆಟ್​ ಜತೆಗೆ ಓದಿನ ಕಡೆಗೂ ಹೆಚ್ಚಿನ ಗಮನಹರಿಸುವ ಸಂಕಲ್ಪ ಮಾಡಿ ಸಿಬಿಎಸ್​ಇಯಲ್ಲಿ ಶೇ. 92.5 ಅಂಕ ಗಳಿಸಿದ್ದರು. 3ನೇ ತರಗತಿಯಲ್ಲಿದ್ದಾಗಲೇ ಕ್ರಿಕೆಟ್​ ಆಡಲಾರಂಭಿಸಿದ್ದ ಪ್ರತಿಕಾ, 9ನೇ ತರಗತಿಯಲ್ಲಿದ್ದಾಗ ಮನೋವಿಜ್ಞಾನವನ್ನು ಕಲಿತು ಮಾನವನ ವರ್ತನೆಯ ಅಧ್ಯಾಯನ ಮಾಡಲು ನಿರ್ಧರಿಸಿದ್ದರು. ದೆಹಲಿ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಅವರ ತಂದೆ ಪ್ರದಿಪ್​ ರಾವಲ್​, ಬಿಸಿಸಿಐ ಲೆವೆಲ್​-1 ಮಾನ್ಯತೆಯ ದೇಶೀಯ ಕ್ರಿಕೆಟ್​ ಅಂಪೈರ್​ ಆಗಿದ್ದಾರೆ. ಶಾಲಾ ದಿನಗಳಲ್ಲಿ ಬಾಸ್ಕೆಟ್​ಬಾಲ್​ ಆಟಗಾರ್ತಿಯೂ ಆಗಿದ್ದ ಪ್ರತಿಕಾ, 2019ರ 64ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ದೆಹಲಿ ಪರ ಚಿನ್ನದ ಪದಕ ಗೆದ್ದಿದ್ದರು.

ನಾನು ಹೆಚ್ಚಾಗಿ ಮಾನವರ ಮನಸ್ಸಿನ ಮೇಲೆ ಅಧ್ಯಯನ ಮಾಡಲು ಬಯಸಿದ್ದೆ ಮತ್ತು ನಾನು ಅದರ ಬಗ್ಗೆ ಅಧ್ಯಯನ ಮಾಡಲು ಪ್ರಾರಂಭಿಸಿದಾಗ, ಮೈದಾನದಲ್ಲಿ ಮತ್ತು ಹೊರಗೆ ನಾವು ಹೇಗೆ ಮಾನಸಿಕವಾಗಿ ವಿಷಯಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬುದನ್ನು ಅರಿಯಲು ತುಂಬಾ ಉತ್ಸುಕಳಾಗಿದ್ದೆ ಮತ್ತು ಅದು ನನಗೆ ಕ್ರಿಕೆಟ್‌ನಲ್ಲಿ ಸಾಕಷ್ಟು ಸಹಾಯ ಮಾಡಿದೆ ಎಂದು ಪ್ರತೀಕಾ ರಾವಲ್​ (Pratika Rawal) ಹೇಳಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net