

ಮುಂಬೈ: ಭಾರತ ತಂಡ ಇತ್ತೀಚೆಗೆ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ನ್ಯೂಜಿಲೆಂಡ್ ಎದುರು ಫೇವರಿಟ್ ತಂಡವಾಗಿ ಕಣಕ್ಕಿಳಿದ ನಡುವೆಯೂ 0-3 ಅಂತರದಿಂದ ವೈಟ್ವಾಷ್ ಎದುರಿಸಿತು. ಈ ಹೀನಾಯ ಸೋಲಿನ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿರುವ ಅನುಭವಿ ಆ್ ಸ್ಪಿನ್ನರ್ ಆರ್. ಅಶ್ವಿನ್, ಈ ವಾಷ್ವಾಷ್ ಮುಖಭಂಗ ತನಗೆ ವೃತ್ತೀಜಿವನದ ಅತ್ಯಂತ ಕೆಟ್ಟ ಅನುಭವ ನೀಡಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
2013ರಿಂದ ತವರಿನಲ್ಲಿ ಸತತ 18 ಟೆಸ್ಟ್ ಸರಣಿ ಗೆದ್ದು ಬೀಗಿದ್ದ ಭಾರತ ತಂಡದ ಗೆಲುವಿನ ಓಟಕ್ಕೂ ಈ ಸರಣಿ ತಡೆಯೊಡ್ಡಿತು. ಜತೆಗೆ ಭಾರತ ತವರಿನಲ್ಲಿ 3 ಪಂದ್ಯಗಳ ಸರಣಿಯಲ್ಲಿ ಮೊದಲ ಬಾರಿ ವೈಟ್ವಾಷ್ ಮುಖಭಂಗ ಎದುರಿಸಿತು.
"ನ್ಯೂಜಿಲೆಂಡ್ ವಿರುದ್ಧದ 0-3 ಸೋಲು ನಮಗೆ ಆಘಾತ ನೀಡಿದೆ. ಭಾರತ ಹಿಂದೆಂದೂ ತವರಿನಲ್ಲಿ ಈ ರೀತಿ ಸೋತಿರಲಿಲ್ಲ ಎಂಬುದನ್ನು ನಾನೆಲ್ಲೋ ಓದಿದೆ. ನನ್ನ ವೃತ್ತೀಜಿವನ ಮತ್ತು ಅನುಭವದಲ್ಲಿ ಎಂದೂ ಆಟದ ವೇಳೆ ಹೆಚ್ಚಿನ ಭಾವನೆಗಳನ್ನು ಪ್ರದರ್ಶಿಸಿಲ್ಲ. ಆದರೆ ಇದೊಂದು ಅತ್ಯಂತ ಕೆಟ್ಟ ಅನುಭವವಾಗಿದೆ. ಈ ಸೋಲಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದೇ ನನಗೆ 2-3 ದಿನಗಳ ಕಾಲ ತೋಚಲಿಲ್ಲ' ಎಂದು ಅಶ್ವಿನ್ ತನ್ನ ಯೂಟ್ಯೂಬ್ ಚಾನಲ್ನಲ್ಲಿ ಹೇಳಿದ್ದಾರೆ.
ಸರಣಿಯಲ್ಲಿ ಭಾರತ ತಂಡದ ಕಳಪೆ ನಿರ್ವಹಣೆಗೆ ತಾನೂ ಜವಾಬ್ದಾರನೆಂದು ಒಪ್ಪಿಕೊಂಡ ಅಶ್ವಿನ್, ತನ್ನ ಸಾಧಾರಣಕ್ಕಿಂತ ಕೆಳಗಿನ ನಿರ್ವಹಣೆಯು ತಂಡದ ನೆರವಿಗೆ ಬರಲಿಲ್ಲ ಎಂದಿದ್ದಾರೆ.
"ನನ್ನ ಕಡೆಯಿಂದಲೂ ಸಾಕಷ್ಟು ತಪ್ಪಾಗಿದೆ. ಸರಣಿ ಸೋಲಿನಲ್ಲೂ ನನ್ನ ಪಾಲು ದೊಡ್ಡದಿದೆ. ಕೆಳಕ್ರಮಾಂಕದಲ್ಲಿ ನಾನು ಹೆಚ್ಚಿನ ರನ್ ಕೊಡುಗೆ ನೀಡಲಿಲ್ಲ. ಬೌಲರ್ಗಳಿಗೆ ರನ್ಗಳು ಅತ್ಯಂತ ಮಹತ್ವದ ಕರೆನ್ಸಿ ಆಗಿದೆ ಎಂಬುದು ಬೌಲರ್ ಆಗಿ ನನಗೆ ತಿಳಿದಿದೆ. ನಾನು ಉತ್ತಮವಾಗಿ ಆರಂಭ ಕಂಡರೂ, ಬೇಗನೆ ವಿಕೆಟ್ ಒಪ್ಪಿಸಿದೆ. ನಾನು ನನ್ನ ಶ್ರೇಷ್ಠ ನಿರ್ವಹಣೆ ತೋರಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ' ಎಂದು 38 ವರ್ಷದ ಅಶ್ವಿನ್ ಬೇಸರಿಸಿದ್ದಾರೆ.
ಸೋಲುವುದು ಓಕೆ. ಯಾರೂ ಅಜೇಯರಲ್ಲ. ಆದರೆ ನಾವು ಸೋಲಿಸಲಾಗದರು ಎಂದು ಯೋಚಿಸಿದ್ದೇ ನಮ್ಮ ಮೊದಲ ತಪು$್ಪ. 20 ದಿನಗಳ ಅಂತರದಲ್ಲೇ ನಾವು ಎಲ್ಲವನ್ನೂ ಅರಗಿಸಿಕೊಳ್ಳಬೇಕಾಯಿತು ಎಂದು ಅಶ್ವಿನ್ ಹೇಳಿದ್ದಾರೆ. ಕಿವೀಸ್ ವಿರುದ್ಧ ಸರಣಿಯ 6 ಇನಿಂಗ್ಸ್ಗಳಲ್ಲಿ ಕೇವಲ 9 ವಿಕೆಟ್ ಕಬಳಿಸಿದ್ದ ಅಶ್ವಿನ್, 63 ರನ್ಗಳಿಗೆ 3 ವಿಕೆಟ್ ಪಡೆದಿದ್ದೇ ಶ್ರೇಷ್ಠ ನಿರ್ವಹಣೆಯಾಗಿತ್ತು.
ಆನಂದ್ ಜತೆ ಅಶ್ವಿನ್ ಸೆಲ್ಫಿ
ಆರ್. ಅಶ್ವಿನ್ ತಮಿಳುನಾಡಿನವರೇ ಆದ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಜತೆಗೆ ವಿಮಾನನಿಲ್ದಾಣವೊಂದರಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ನನ್ನ ಪಾಲಿಗೆ ಇದೊಂದು ಫ್ಯಾನ್ಬಾಯ್ ಕ್ಷಣವಾಗಿತ್ತು ಎಂದು ಅಶ್ವಿನ್ ಚಿತ್ರದೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.