ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ತಂಡಗಳು ಯಾವುವು? ಇಲ್ಲಿದೆ ನೋಡಿ ವಿವರ | Champions Trophy

ವಿಜಯವಾಣಿ - 2025-02-22T212032.284
Published on

Champions Trophy: ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥೇಯವನ್ನು ಪಾಕಿಸ್ತಾನ ಹೊತ್ತುಕೊಂಡಿದೆ. ಫೆ.19ರಂದು ಶುರುವಾದ ಮೊದಲ ಪಂದ್ಯವನ್ನು ಆಡಿದ ಪಾಕ್​, ನ್ಯೂಜಿಲೆಂಡ್​ ಎದುರು 60 ರನ್​ಗಳ ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತು. ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿರುವ ಚಾಂಪಿಯನ್ಸ್ ಟ್ರೋಫಿ, ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ಪಂದ್ಯಕ್ಕೆ ಸಾಕ್ಷಿಯಾಗಿದೆ. ಇದೇ ಪಂದ್ಯದಲ್ಲಿ ಎರಡು ಐತಿಹಾಸಿಕ ದಾಖಲೆಗಳು ಕ್ರಿಕೆಟ್​ ಇತಿಹಾಸ ಪುಟ ಸೇರಿವೆ.

ಇಂದು ಲಾಹೋರ್​ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆಸೀಸ್​, ಆಂಗ್ಲರಿಗೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿತು. ಜಾಸ್​ ಬಟ್ಲರ್ ನೇತೃತ್ವದಲ್ಲಿ ಅಖಾಡಕ್ಕಿಳಿದ ಇಂಗ್ಲೆಂಡ್​ ಪಡೆ, 50 ಓವರ್​ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 351 ರನ್​ಗಳ ಬೃಹತ್ ಗುರಿಯನ್ನು ಆಸ್ಟ್ರೇಲಿಯಾಗೆ ನೀಡಿತು. ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್​ ಗಳಿಸಿದ ತಂಡ ಎಂಬ ಪಟ್ಟಿಗೆ ಇಂಗ್ಲೆಂಡ್​ಗೆ ಸೇರ್ಪಡೆಗೊಂಡಿದೆ. ಇದರೊಂದಿಗೆ 165 ರನ್​ ಸಿಡಿಸಿದ ಬೆನ್ ಡಕೆಟ್​, ಕೆವಿನ್​ ಪೀಟರ್ಸನ್​ ದಾಖಲೆಯನ್ನು ಮುರಿದು, ತಮ್ಮದೇ ದಾಖಲೆಯನ್ನು ನಿರ್ಮಿಸಿದರು.

ಇಂಗ್ಲೆಂಡ್​ ದಾಖಲಿಸಿದ ಸ್ಕೋರ್​ ಅಂತಾರಾಷ್ಟ್ರೀಯ ಏಕದಿನ ಫಾರ್ಮೆಟ್​ನಡಿ ನಡೆಯುತ್ತಿರುವ ಚಾಂಪಿಯನ್ಸ್​ ಟ್ರೋಫಿ ಇತಿಹಾಸದಲ್ಲೇ ಅತಿ ಹೆಚ್ಚು ಎಂದು ಹೇಳಲಾಗಿದೆ. ಅಸಲಿಗೆ ಯಾವೆಲ್ಲ ತಂಡಗಳು 300ರ ಗಡಿ ದಾಟಿದೆ? ಯಾವ ತಂಡದ್ದು ಅತೀ ಹೆಚ್ಚು? ಇದರಲ್ಲಿ ಭಾರತ ಎಷ್ಟನೇ ಸ್ಥಾನ ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.

1. ಇಂಗ್ಲೆಂಡ್​- 351/8: ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್​ ದಾಖಲಿಸಿದ ಒಟ್ಟು ಸ್ಕೋರ್​ ಇದಾಗಿದೆ.

2. ನ್ಯೂಜಿಲೆಂಡ್: 2004ರಲ್ಲಿ ಓವಲ್​ ಕ್ರೀಡಾಂಗಣದಲ್ಲಿ ಯುಎಸ್​ಎ ವಿರುದ್ಧ ಕಿವಿ ಪಡೆ 347/7 ರನ್​ ದಾಖಲಿಸಿತ್ತು. ಈ ಪಟ್ಟಿಯಲ್ಲಿ ನ್ಯೂಜಿಲೆಂಡ್​ ಎರಡನೇ ಸ್ಥಾನದಲ್ಲಿದೆ.

3. ಪಾಕಿಸ್ತಾನ: ಇನ್ನು ಮೂರನೇ ಸ್ಥಾನದಲ್ಲಿ ಪಾಕಿಸ್ತಾನವಿದೆ. 2017ರಲ್ಲಿ ಓವಲ್​ನಲ್ಲಿ ಭಾರತ ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್​ 338/4 ಸ್ಕೋರ್ ದಾಖಲು ಮಾಡಿ, ಮೂರನೇ ಸ್ಥಾನದಲ್ಲಿದೆ.

4. ಭಾರತ: 2013ರಲ್ಲಿ ಕಾರ್ಡಿಫ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 331/7 ರನ್​ ಸಿಡಿಸಿತ್ತು. ಈ ಪಟ್ಟಿಯಲ್ಲಿ ಮೆನ್​ ಇನ್​ ಬ್ಲ್ಯೂ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ.

5. ಇಂಗ್ಲೆಂಡ್​: 2009ರಲ್ಲಿ ಸೆಂಚ್ಯೂರಿಯನ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 323/8 ರನ್​ ಬಾರಿಸಿದ ಇಂಗ್ಲೆಂಡ್​ ಐದನೇ ಸ್ಥಾನದಲ್ಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net