

Rohit Sharma : ಐಪಿಎಲ್ ಮಧ್ಯದಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಹಿಟ್‌ಮ್ಯಾನ್ ರೋಹಿತ್ ಶರ್ಮ, ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಮೋಜಿನ ಸಮಯವನ್ನು ಆನಂದಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಅವರ ಪತ್ನಿ ಗೀತಾ ಬಸ್ರಾ ಅವರು ಆಯೋಜಿಸಿದ್ದ 'ಹೂ ಈಸ್ ದಿ ಬಾಸ್' ಎಂಬ ಯೂಟ್ಯೂಬ್ ಟಾಕ್ ಶೋನಲ್ಲಿ ರೋಹಿತ್ ಭಾಗವಹಿಸಿದ್ದರು. ಈ ವೇಳೆ ತಮ್ಮ ಅಭಿಮಾನಿಗಳೊಂದಿಗೆ ಅನೇಕ ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡರು.
ಸದ್ಯ ರೋಹಿತ್ ಏಕದಿನ ಮಾದರಿ ಪಂದ್ಯಗಳಿಗೆ ಮಾತ್ರ ನಾಯಕರಾಗಿದ್ದಾರೆ. ರೋಹಿತ್ಗೆ ತುಂಬಾ ಮರೆವು ಇದೆ ಎಂಬ ಸಂಗತಿ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಇದು ಈಗಾಗಲೇ ಹಲವು ಬಾರಿ ಸಾಬೀತು ಕೂಡ ಆಗಿದೆ. ನಿಜ ಜೀವನದಲ್ಲಿ ಮಾತ್ರವಲ್ಲ, ವೃತ್ತಿ ಜೀವನದಲ್ಲೂ ತನ್ನ ಮರೆವಿನ ಮೂಲಕವೇ ಹಿಟ್‌ಮ್ಯಾನ್ ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ. ಒಮ್ಮೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆ ಅವರು ಟಾಸ್ ಮಾಡಲು ಹೋದಾಗ, ಪ್ಲೇಯಿಂಗ್ ಇಲೆವೆನ್ ಅನ್ನು ಮರೆತುಬಿಟ್ಟರು. ತಂಡದಲ್ಲಿರುವ ಹೊಸ ಆಟಗಾರರು ಯಾರು? ತಾನು ಯಾರನ್ನು ತೆಗೆದಿದ್ದೇನೆ ಎಂಬುದನ್ನು ಮರೆತಿದ್ದರಿಂದ ಲೈವ್‌ನಲ್ಲಿ ತೊಂದರೆಗೆ ಸಿಲುಕಿದರು. ಇದನ್ನು ನೋಡಿದ ಕಾಮೆಂಟೇಟರ್ ಹಾಗೂ ಕಿವೀಸ್ ನಾಯಕ ಹಾಗೂ ಅಭಿಮಾನಿಗಳು ಕೂಡ ನಗೆಗಡಲಲ್ಲಿ ತೇಲಿದರು.
ಅದೇ ರೀತಿ ಟಿ20 ವಿಶ್ವಕಪ್ ಸಂದರ್ಭದಲ್ಲಿ ಪಾಕ್ ವಿರುದ್ಧದ ಲೀಗ್ ಪಂದ್ಯದ ವೇಳೆ ಜೇಬಿನಲ್ಲೇ ನಾಣ್ಯವನ್ನು ಇಟ್ಟುಕೊಂಡು ಟಾಸ್ ಮಾಡುವಾಗ ನಾಣ್ಯಕ್ಕಾಗಿ ನಾಯಕ ರೋಹಿತ್ ಶರ್ಮ ಹುಡುಕಾಡಿದ ವಿಡಿಯೋ ವೈರಲ್ ಆಗಿತ್ತು. ಸದಾ ಕ್ರಿಕೆಟ್ ಪಂದ್ಯಗಳಲ್ಲಿ ಬಿಜಿಯಾಗಿರುವ ರೋಹಿತ್, ಹೋಟೆಲ್ ಕೊಠಡಿಗಳಲ್ಲಿ ಫೋನ್ ಮತ್ತು ಪಾಸ್‌ಪೋರ್ಟ್‌ಗಳನ್ನು ಮರೆತಿರುವ ಘಟನೆಗಳೂ ನಡೆದಿವೆ.
ಇದೀಗ ಸ್ವತಃ ರೋಹಿತ್ ಅವರೇ ಒಂದು ಘಟನೆಯನ್ನು ನೆನೆಪಿಸಿಕೊಂಡಿದ್ದಾರೆ. 2013ರ ಚಾಂಪಿಯನ್ಸ್ ಲೀಗ್ ಟಿ20 (ಸಿಎಲ್‌ಟಿ 20) ಪಂದ್ಯದ ಸಮಯದಲ್ಲಿ, ಟಾಸ್ ಗೆದ್ದ ನಂತರ ತನ್ನ ನಿರ್ಧಾರವನ್ನು ಆಯ್ಕೆ ಮಾಡಿಕೊಳ್ಳಲು ಮರೆತಿದ್ದೆ ಮತ್ತು ಮುಖ್ಯ ಮಾರ್ಗದರ್ಶಕ ಅನಿಲ್ ಕುಂಬ್ಳೆ ಅವರಿಗೆ ಏನೋ ಹೇಳಿ ಅದನ್ನು ಕವರ್ ಮಾಡಿದ್ದಾಗಿ ರೋಹಿತ್, ಹರ್ಭಜನ್ ಸಿಂಗ್ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಹೇಳಿದ್ದಾರೆ.
ಅದು 2013ರ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯ. ನಾನು ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದೆ. ಅನಿಲ್ ಕುಂಬ್ಳೆ ತಂಡದ ಮುಖ್ಯ ಮಾರ್ಗದರ್ಶಕರಾಗಿದ್ದರು. ನಾನು ಟಾಸ್ಗಾಗಿ ಮೈದಾನಕ್ಕೆ ಹೋದೆ. ಟಾಸ್ ಗೆದ್ದ ನಂತರ, ನಾನು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡೆ. ವಾಸ್ತವವಾಗಿ, ನಾವು ಟಾಸ್ ಗೆದ್ದರೆ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದೆವು. ಆದರೆ, ನಾನದನ್ನು ಮರೆತಿದ್ದೆ. ಈ ವೇಳೆ ಅನಿಲ್ ಭಾಯ್ ನನ್ನ ಬಳಿ ಬಂದು ಕೇಳಿದರು. ರೋಹಿತ್, ನೀವು ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದರು. ಪಿಚ್ ಚೆನ್ನಾಗಿದ್ದ ಕಾರಣ ನಾನು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡೆ ಎಂದು ಹೇಳುವ ಮೂಲಕ ನಾನದನ್ನು ಹೇಗೋ ಮ್ಯಾನೇಜ್ ಮಾಡಿದೆ. ನಾನು ಮರೆತು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ ಆ ಪಂದ್ಯವನ್ನು ನಾವು ಗೆದ್ದೆವು. ಯಾವಾಗ ಗೆಲುವು ನಮ್ಮದಾಯಿತು ಆಗ ನಾನಿನ್ನೂ ಜೀವಂತವಾಗಿದ್ದೇನೆ ಎಂದು ನಾನು ಭಾವಿಸಿದೆ ಎಂದು ರೋಹಿತ್ ಶರ್ಮ ಹೇಳಿದರು. ಈ ವೇಳೆ ಹರ್ಭಜನ್ ಸಿಂಗ್ ಸೇರಿದಂತೆ ಪ್ರೇಕ್ಷಕರು ರೋಹಿತ್ ಮಾತುಗಳನ್ನು ಕೇಳಿ ನಕ್ಕರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ, ಇಂಗ್ಲೆಂಡ್ ಸರಣಿಗೂ ಮುನ್ನ ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. 36 ವರ್ಷದ ರೋಹಿತ್, 2024 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಗೆಲುವಿನ ನಂತರ ಚುಟುಕು ಕ್ರಿಕೆಟ್‌ನಿಂದ ನಿವೃತ್ತರಾದರು. ಹಿಟ್ ಮ್ಯಾನ್ ಈಗ ಕೇವಲ ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದ್ದಾರೆ. ಐಪಿಎಲ್ ಆದ ಬಳಿಕ ರೋಹಿತ್ ಕ್ರಿಕೆಟ್ ಆಡಿಲ್ಲ. ಐಪಿಎಲ್ 2025 ರಲ್ಲಿ, ಮುಂಬೈ ಇಂಡಿಯನ್ಸ್ ಪರ ರೋಹಿತ್ 15 ಪಂದ್ಯಗಳಲ್ಲಿ 149.28 ಸ್ಟ್ರೈಕ್ ರೇಟ್ ನಲ್ಲಿ 418 ರನ್ ಗಳಿಸಿದ್ದಾರೆ. ಆಗಸ್ಟ್ 17 ರಿಂದ 23 ರವರೆಗೆ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಆಡಲಿದ್ದಾರೆ. ನಂತರ, ಅಕ್ಟೋಬರ್ 19 ರಂದು ಆಸ್ಟ್ರೇಲಿಯಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. (ಏಜೆನ್ಸೀಸ್)