

ಬೆಂಗಳೂರು: ಕರೊನಾ ಹಾವಳಿ ಶುರುವಾದ ಬಳಿಕ ಬಹುತೇಕ ಎಲ್ಲವೂ ಬದಲಾಗಿದೆ. ಎಲ್ಲರೂ ಎಲ್ಲದಕ್ಕೂ ಒಗ್ಗಿಕೊಳ್ಳುತ್ತಿರುವ ನವವಾಸ್ತವ ನಿರ್ಮಾಣವಾಗಿದೆ. ಈ ಬಾರಿ ಐಪಿಎಲ್ ಕೂಡ ಇದರಿಂದ ಹೊರತಾಗಿಲ್ಲ. ಈ ಹಿಂದೆ ನೋಡಿದ ಐಪಿಎಲ್‌ಗಿಂತ ಬಹಳ ಭಿನ್ನವಾದ ಐಪಿಎಲ್ ಟೂರ್ನಿಯ ಅನುಭವ ಇದಾಗಿರಲಿದೆ. ಹಾಗಾದರೆ ಐಪಿಎಲ್ 13ನೇ ಆವೃತ್ತಿಯಲ್ಲಿ ಹೊಸದೇನಿದೆ ಎಂಬುದರ ಸಂಕ್ಷಿಪ್ತ ಮೆಲುಕು ಇಲ್ಲಿದೆ.
ಪ್ರೇಕ್ಷಕ, ಚಿಯರ್‌ಗರ್ಲ್ಸ್ ಗೈರು
ಐಪಿಎಲ್ ಪಂದ್ಯಗಳಿಗೆ ಪ್ರೇಕ್ಷಕರೇ ಪ್ರಮುಖ ಅಂಗ. ಆದರೆ ಈ ಬಾರಿ ಅವರೇ ಇರಲ್ಲ. ಪ್ರತಿ ಪಂದ್ಯಗಳಿಗೂ ಬಹುತೇಕ ಭರ್ತಿಯಾಗುವ ಕ್ರೀಡಾಂಗಣದಲ್ಲಿ ಆಡುವುದೇ ಆಟಗಾರರಿಗೆ ದೊಡ್ಡ ಸ್ಫೂರ್ತಿ. ಅವರ ಹರ್ಷೋದ್ಗಾರವೇ ತಂಡಗಳ ಬಲ. ಜತೆಗೆ ಪ್ರತಿ ಬಾರಿ ಬೌಂಡರಿ-ಸಿಕ್ಸರ್, ವಿಕೆಟ್ ಬಿದ್ದಾಗಲೂ ಕುಣಿಯುವ ಚಿಯರ್ ಗರ್ಲ್ಸ್ ಕೂಡ ಐಪಿಎಲ್‌ನ ಆಕರ್ಷಣೆ. ಆದರೆ ಈ ಬಾರಿ ಕರೊನಾ ಭೀತಿಯಿಂದಾಗಿ ಪ್ರೇಕ್ಷಕರಿಲ್ಲದೆ, ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಟೂರ್ನಿಯ ಕೊನೇ ಹಂತದಲ್ಲಿ ಕೆಲ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲು ಬಿಸಿಸಿಐ ಆಸಕ್ತಿ ತೋರಿದ್ದರೂ, ಯುಎಇಯಲ್ಲಿ ಸದ್ಯ ಏರುತ್ತಿರುವ ಕರೊನಾ ಪ್ರಕರಣಗಳಿಂದ ಈ ಸಾಧ್ಯತೆ ಕಡಿಮೆ ಎನಿಸಿದೆ. ಪ್ರೇಕ್ಷಕರ ಗೈರಿನಲ್ಲಿ ಪ್ರತಿ ್ರಾಂಚೈಸಿ 15-25 ಕೋಟಿ ರೂ. ಮೊತ್ತದ ಟಿಕೆಟ್ ಮಾರಾಟದ ಆದಾಯವನ್ನೂ ನಷ್ಟ ಮಾಡಿಕೊಳ್ಳಲಿದೆ.
ಅರ್ಧಗಂಟೆ ಬೇಗನೆ ಆರಂಭ
ಸಾಮಾನ್ಯವಾಗಿ ಐಪಿಎಲ್ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭಗೊಳ್ಳುತ್ತಿದ್ದವು. ಆದರೆ ಈ ಬಾರಿ ಭಾರತೀಯ ಕಾಲಮಾನದಂತೆ ಅರ್ಧ ಗಂಟೆ ಮುಂಚಿತವಾಗಿ ಅಂದರೆ ರಾತ್ರಿ 7.30ಕ್ಕೆ ಆರಂಭಗೊಳ್ಳಲಿವೆ. 2 ಪಂದ್ಯಗಳಿದ್ದ ದಿನ ಮೊದಲ ಪಂದ್ಯವೂ ಸಾಯಂಕಾಲ 4ಕ್ಕೆ ಬದಲಾಗಿ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ.
ಬಯೋ-ಬಬಲ್
ಐಪಿಎಲ್ ಆಟಗಾರರೆಂದರೆ ಸ್ಟಾರ್ ಆಕರ್ಷಣೆ. ಟೂರ್ನಿಯ ವೇಳೆ ಹೋದಲ್ಲಿ ಬಂದಲ್ಲಿ ಕ್ರಿಕೆಟ್ ಪ್ರೇಮಿಗಳು ಅವರನ್ನು ಮುತ್ತಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಆಟಗಾರರ ಸಹಿತ ಟೂರ್ನಿಗೆ ಸಂಬಂಧ ಪಟ್ಟ ಎಲ್ಲರನ್ನೂ ಬಯೋ-ಬಬಲ್‌ನಲ್ಲಿ ಕಟ್ಟಿಹಾಕಲಾಗಿದೆ. ಎಲ್ಲರ ಚಲನವಲನವೂ ನಿರ್ಬಂಧಿಸಲ್ಪಟ್ಟಿದೆ. ಬಿಗ್ ಬಾಸ್ ಮನೆಯಲ್ಲಿರುವ ಅನುಭವ ಆಗುತ್ತಿದೆ ಎಂದು ಡೆಲ್ಲಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಈಗಾಗಲೆ ಬಣ್ಣಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ : ಆರೆಂಜ್ ಕ್ಯಾಪ್ ವೀರರು ಇವರೇ..!
ಹೊಸ ಅವಧಿಯಲ್ಲಿ ಟೂರ್ನಿ
ಐಸಿಸಿ ಕ್ಯಾಲೆಂಡರ್ ಅನ್ವಯ ಐಪಿಎಲ್ ಟೂರ್ನಿ ನಡೆಸಲು ಪ್ರತಿ ವರ್ಷ ಇರುವ ಅವಧಿ ಏಪ್ರಿಲ್-ಮೇ. ಆದರೆ ಕೆಲವೊಮ್ಮೆ ಮಾರ್ಚ್‌ನಲ್ಲೇ ಟೂರ್ನಿ ಶುರುವಾಗಿದ್ದು ಇದೆ. ಇನ್ನು 2 ಬಾರಿ ಟೂರ್ನಿಗೆ ಜೂನ್ 1ರಂದು ತೆರೆಬಿದ್ದಿತ್ತು. ಆದರೆ ಈ ಬಾರಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಹೊಸ ಅವಧಿಯಲ್ಲಿ ಐಪಿಎಲ್ ನಡೆಯಲಿದೆ. ವಿದ್ಯಾರ್ಥಿಗಳ ಪರೀಕ್ಷಾ-ರಜಾಕಾಲಗಳಿಗೆ ಬದಲಾಗಿದೆ ಇದೇ ಮೊದಲ ಬಾರಿಗೆ ನವರಾತ್ರಿ-ದೀಪಾವಳಿ ಹಬ್ಬದ ಋತುವಿನಲ್ಲಿ ಟೂರ್ನಿ ಸಾಗಲಿದೆ.
ಹೊಸ ಶೀರ್ಷಿಕೆ ಪ್ರಾಯೋಜಕತ್ವ
ಡಿಎಲ್‌ಎ್, ಪೆಪ್ಸಿ, ವಿವೋ ಐಪಿಎಲ್ ಎಂದೆಲ್ಲ ಕರೆಸಿಕೊಂಡಿದ್ದ ಟೂರ್ನಿಗೆ ಈ ಬಾರಿ ಹೊಸ ಶೀರ್ಷಿಕೆ ಪ್ರಾಯೋಜಕತ್ವ. ಚೀನಾ ವಿರೋಧಿ ಜನಾಕ್ರೋಶದಿಂದಾಗಿ ವಿವೋ ಹಿಂದೆ ಸರಿದ ಕಾರಣ, ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿ ಡ್ರೀಮ್11 ಶೀರ್ಷಿಕೆ ಪ್ರಾಯೋಜಕತ್ವ ಒಲಿಸಿಕೊಂಡಿದೆ. ಜತೆಗೆ ಹಲವಾರು ಆನ್‌ಲೈನ್ ಕಂಪನಿಗಳೇ ಈ ಬಾರಿ ಪ್ರಾಯೋಜಕತ್ವದಲ್ಲಿ ಮುಂಚೂಣಿಯಲ್ಲಿವೆ.
ಕೋವಿಡ್, ಡೋಪಿಂಗ್ ಟೆಸ್ಟ್
ಮಹಾಮಾರಿಯ ಭೀತಿಯಿಂದಾಗಿ ಈ ಬಾರಿ ಎಲ್ಲರಿಗೂ ಕೋವಿಡ್-19 ಟೆಸ್ಟ್ ಅನಿವಾರ‌್ಯ. ಈಗಾಗಲೆ ಎಲ್ಲರೂ 3-5 ಬಾರಿ ಪರೀಕ್ಷೆ ಎದುರಿಸಿ ನೆಗೆಟಿವ್ ವರದಿಯೊಂದಿಗೆ ಬಯೋ-ಬಬಲ್ ಸೇರಿಕೊಂಡಿದ್ದು, ಟೂರ್ನಿ ವೇಳೆ ಪ್ರತಿ 5 ದಿನಕ್ಕೊಮ್ಮೆ ಪರೀಕ್ಷೆ ಎದುರಿಸಬೇಕಾಗಿದೆ. ಜತೆಗೆ ಇದೇ ಮೊದಲ ಬಾರಿ ಐಪಿಎಲ್‌ನಲ್ಲಿ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕದಿಂದ (ನಾಡಾ) ಡೋಪಿಂಗ್ ಟೆಸ್ಟ್ ಕೂಡ ನಡೆಯಲಿದೆ. 2019ರಲ್ಲಿ ಬಿಸಿಸಿಐ ಕೂಡ ನಾಡಾ ಅಡಿಯಲ್ಲಿ ಬಂದ ಬಳಿಕ ಇದು ಮೊದಲ ಐಪಿಎಲ್ ಆಗಿದ್ದು, ಟೂರ್ನಿ ವೇಳೆ ಕನಿಷ್ಠ 50 ಉದ್ದೀಪನ ಪರೀಕ್ಷೆ ನಡೆಯಲಿದೆ.
ಕರೊನಾ ಸೋಂಕಿತ ಆಟಗಾರನಿಗೆ ಬದಲಿ
ಸಾಮಾನ್ಯವಾಗಿ ಐಪಿಎಲ್‌ನಲ್ಲಿ ಗಾಯಗೊಂಡ ಆಟಗಾರನಿಗೆ ಬದಲಿಗರನ್ನು ಸೇರಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಆದರೆ ಈ ಬಾರಿ ಟೂರ್ನಿಯ ನಡುವೆ ಯಾವುದೇ ಆಟಗಾರನಿಗೆ ಕರೊನಾ ಲಕ್ಷಣ ಅಥವಾ ಸೋಂಕು ಕಾಣಿಸಿಕೊಂಡರೆ ಬದಲಿ ಆಟಗಾರರನ್ನು ಪಡೆದುಕೊಳ್ಳಬಹುದು. ಇನ್ನು ಟೂರ್ನಿ ನಡುವೆ ಬಯೋ-ಬಬಲ್ ಮಾರ್ಗಸೂಚಿ ಉಲ್ಲಂಸುವ ಆಟಗಾರ 7 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕಾಗುತ್ತದೆ ಮತ್ತು ಕೆಲ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ.
ಸಾಮಾಜಿಕ ಅಂತರದ ಸಂಭ್ರಮಾಚರಣೆ
ವಿಕೆಟ್ ಬಿದ್ದಾಗ, ಶತಕ ಸಿಡಿಸಿದ ಸಂಭ್ರಮಾಚರಣೆಯ ವೇಳೆ ಕ್ರಿಕೆಟಿಗರು ಅಪ್ಪಿಕೊಳ್ಳುವುದು ಅಥವಾ ಹೈ-ಫೈವ್ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಈಗ ಕ್ರಿಕೆಟಿಗರ ಸಂಭ್ರಮಾಚರಣೆಯ ವೇಳೆಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವೆನಿಸಿದೆ. ಇನ್ನು ಟಾಸ್ ವೇಳೆ ಉಭಯ ತಂಡಗಳ ನಾಯಕರು ಮತ್ತು ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡಿಕೊಳ್ಳುವಂತಿಲ್ಲ. ವೈರಸ್ ಹರಡುವ ಭೀತಿಯಿಂದ ಈ ಬದಲಾವಣೆ ಆಗಿದೆ. ಪಂದ್ಯದ ವೇಳೆ ಆಟಗಾರರ ನೀರಿನ ಬಾಟಲಿಗಳನ್ನೂ ಹಂಚಿಕೊಳ್ಳದೆ ವೈಯಕ್ತಿಕ ಬಾಟಲಿ ಬಳಸಲಿದ್ದಾರೆ.