

ನವದೆಹಲಿ: ಐಪಿಎಲ್ ಟೂರ್ನಿಗೆ ಪೂರ್ವಭಾವಿಯಾಗಿ ಈಗಾಗಲೆ ದುಬೈಗೆ ತೆರಳಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿಯ ಸಹ-ಒಡತಿ ಹಾಗೂ ಬಾಲಿವುಡ್ ನಟಿ ಪ್ರೀತಿ ಝಿಂಟಾ, ಕ್ವಾರಂಟೈನ್‌ನಲ್ಲಿ ಇರುವಲ್ಲಿಂದಲೇ ತಂಡಕ್ಕೆ ವಿಶೇಷ ಸಂದೇಶವೊಂದನ್ನು ನೀಡಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಟ್ವಿಟರ್ ಪುಟದಲ್ಲಿ ಪ್ರೀತಿ ಝಿಂಟಾ ಅವರ 13 ಸೆಕೆಂಡ್‌ಗಳ ವಿಡಿಯೋ ಸಂದೇಶವನ್ನು ಪೋಸ್ಟ್ ಮಾಡಲಾಗಿದೆ. ‘ಎಲ್ಲರಿಗೂ ಹಾಯ್. ಹುಡುಗರೇ ನಿಮ್ಮ ಸಿದ್ಧತೆ ಅಮೋಘವಾಗಿ ಕಾಣಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮನ್ನು ಗಮನಿಸುತ್ತಿದ್ದೇನೆ ಮತ್ತು ನೀವು ಕಠಿಣ ಅಭ್ಯಾಸ ತೊಡಗಿರುವುದನ್ನು ನೋಡಿದ್ದೇನೆ. ನನ್ನ ಈ ಕ್ವಾರಂಟೈನ್ ಅವಧಿಯನ್ನು ಮುಗಿಸಿ, ಬಯೋ-ಬಬಲ್‌ಗೆ ಬಂದು ನಿಮ್ಮನ್ನು ಭೇಟಿಯಾಗಲು ಕಾತರದಿಂದ ಕಾಯುತ್ತಿದ್ದೇನೆ. ಶೀಘ್ರದಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದು ಪ್ರೀತಿ ಝಿಂಟಾ ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ದುಬೈನಲ್ಲಿ ಪ್ರೀತಿ ಝಿಂಟಾ ಅವರ ಕ್ವಾರಂಟೈನ್ ಅವಧಿ ಗುರುವಾರಕ್ಕೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಬಳಿಕ ಅವರು ತಂಡದ ಪೂರ್ವಸಿದ್ಧತೆಯನ್ನು ಪರಿಶೀಲಿಸಲಿದ್ದಾರೆ. ಪ್ರೀತಿ ಝಿಂಟಾ ಲಾಕ್‌ಡೌನ್ ಸಮಯದಲ್ಲಿ ಅಮೆರಿಕದಲ್ಲಿ ಪತಿ ಮತ್ತು ಕುಟುಂಬದ ಜತೆ ಸಮಯ ಕಳೆದಿದ್ದರು. ಅವರು ಈ ಹಿಂದೆ ಐಪಿಎಲ್ ಪಂದ್ಯಗಳ ವೇಳೆ ಕ್ರೀಡಾಂಗಣದಲ್ಲಿ ಹಾಜರಿದ್ದು ತಂಡಕ್ಕೆ ಪ್ರೋತ್ಸಾಹ ನೀಡುವ ಮೂಲಕ ಗಮನಸೆಳೆಯುತ್ತ ಬಂದಿದ್ದಾರೆ.
ಇದನ್ನೂ ಓದಿ: ಈ 6 ಕ್ರಿಕೆಟ್ ತಾರೆಯರು ಇಂಜಿನಿಯರ್ ಕೂಡ ಆಗಿದ್ದಾರೆ!
ಕನ್ನಡಿಗ ಅನಿಲ್ ಕುಂಬ್ಳೆ ಮಾರ್ಗದರ್ಶನ ಮತ್ತು ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಟೂರ್ನಿಯ 2ನೇ ದಿನವಾದ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ದುಬೈನಲ್ಲಿ ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.