

ಬ್ರಿಸ್ಬೇನ್: ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಡುವೆಯೇ ಅಶ್ವಿನ್ ವಿದಾಯ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ಆದರೆ ಭಾರತ ತಂಡದಲ್ಲಿ ತಾನು ಮೊದಲ ಆಯ್ಕೆಯ ಸ್ಪಿನ್ನರ್ ಆಗಿರದಿದ್ದರೆ ಗುಡ್ಬೈ ಹೇಳುವುದೇ ಸೂಕ್ತ ಎಂಬ ಅಶ್ವಿನ್ ನಿಲುವೇ ನಿವೃತ್ತಿ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಆದರೆ ನಿವೃತ್ತಿ ನಿರ್ಧಾರಕ್ಕೆ ಮುನ್ನ ಅಶ್ವಿನ್ ಆಯ್ಕೆಗಾರರೊಂದಿಗೆ ಚರ್ಚಿಸಿಲ್ಲ ಎಂದೂ ಬಿಸಿಸಿಐ ಮೂಲಗಳು ತಿಳಿಸಿವೆ.
ಹಾಲಿ ಸರಣಿಯ ಮೊದಲ ಟೆಸ್ಟ್ನಲ್ಲಿ ವಾಷಿಂಗ್ಟನ್ ಸುಂದರ್ ಆಡಿದ್ದರೆ, 3ನೇ ಟೆಸ್ಟ್ನಲ್ಲಿ ರವೀಂದ್ರ ಜಡೇಜಾ ಏಕೈಕ ಸ್ಪಿನ್ನರ್ ಆಗಿ ಕಣಕ್ಕಿಳಿದಿದ್ದರು. 2021ರ ಪಿಂಕ್ಬಾಲ್ ಟೆಸ್ಟ್ನಲ್ಲಿ ಉತ್ತಮ ನಿರ್ವಹಣೆ ತೋರಿದ್ದ ಆಧಾರದಲ್ಲಷ್ಟೇ ಅಶ್ವಿನ್ ಅಡಿಲೇಡ್ನಲ್ಲಿ ಅವಕಾಶ ಪಡೆದಿದ್ದರು. ಆದರೆ ಕೇವಲ 1 ವಿಕೆಟ್ ಪಡೆದು ನಿರಾಸೆ ಮೂಡಿಸಿದ್ದರು. ಇನ್ನು ಸರಣಿಯ ಕೊನೇ 2 ಟೆಸ್ಟ್ಗಳಲ್ಲೂ ಅಶ್ವಿನ್ರನ್ನು ಆಡಿಸುವ ಸಾಧ್ಯತೆ ಇರಲಿಲ್ಲ.
ಭಾರತ ತಂಡ ಮುಂದಿನ ವರ್ಷ ಜೂನ್ನಲ್ಲಿ ಮುಂದಿನ ಟೆಸ್ಟ್ ಸರಣಿ ಆಡಲಿದೆ. ಇಂಗ್ಲೆಂಡ್ನಲ್ಲಿ ಆಡುವ ಆ 5 ಟೆಸ್ಟ್ಗಳಲ್ಲೂ ಅಶ್ವಿನ್ಗೆ 11ರ ಬಳಗದಲ್ಲಿ ಸ್ಥಾನದ ಗ್ಯಾರಂಟಿ ಇರಲಿಲ್ಲ. ಅಲ್ಲದೆ ಭಾರತ 2025ರ ಅಕ್ಟೋಬರ್-ನವೆಂಬರ್ನಲ್ಲಿ ತವರಿನಲ್ಲಿ ಮುಂದಿನ ಟೆಸ್ಟ್ ಆಡಲಿದೆ. ಹೀಗಾಗಿ ಮುಂದಿನ 10 ತಿಂಗಳ ಕಾಲ ಅವರು ಮರಳಿ ಟೆಸ್ಟ್ ಆಡುವ ಸಾಧ್ಯತೆ ಕಡಿಮೆ ಇತ್ತು.
ಗೌತಮ್ ಗಂಭೀರ್ ನೇತೃತ್ವದ ತರಬೇತಿ ಬಳಗ ಭಾರತ ತಂಡವನ್ನು ಕೂಡಿಕೊಂಡ ಬಳಿಕ ಈಗಾಗಲೆ ತಮಿಳುನಾಡಿನವರೇ ಆದ ವಾಷಿಂಗ್ಟನ್ಸುಂದರ್ರನ್ನು ಅಶ್ವಿನ್ ಉತ್ತರಾಧಿಕಾರಿ ಆಗಿ ಗುರುತಿಸಿದೆ. ಹೀಗಾಗಿ ಭಾರತ ಇಬ್ಬರೇ ಸ್ಪಿನ್ನರ್ಗಳನ್ನು ಆಡಿಸುವಾಗ ಜಡೇಜಾ-ವಾಷಿಂಗ್ಟನ್ ಜೋಡಿಗೆ ಆದ್ಯತೆ ನೀಡುವ ನಿರೀಕ್ಷೆ ಇತ್ತು. ಜತೆಗೆ ಹೆಚ್ಚುತ್ತಿರುವ ವಯಸ್ಸಿನ ನಡುವೆ ಮೊಣಕಾಲು ನೋವಿನ ಸಮಸ್ಯೆಯನ್ನೂ ಎದುರಿಸುತ್ತಿರುವುದು 38 ವರ್ಷದ ಅಶ್ವಿನ್ ನಿವೃತ್ತಿಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಆದರೆ ಸರಣಿಯ ನಡುವೆಯೇ ಈ ನಿರ್ಧಾರ ಪ್ರಕಟಿಸುವ ಅವಸರವನ್ನು ಯಾಕೆ ತೋರಿಸಿದರು ಎಂಬುದು ಸ್ಪಷ್ಟವಾಗಿಲ್ಲ.