

BCCI : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ. ಬೇರೆ ಯಾವ ದೇಶದಲ್ಲೂ ಇರದಷ್ಟು ಸಂಪತ್ತು ಬಿಸಿಸಿಐ ಬಳಿ ಇದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಮಂಡಳಿಯ ಆದಾಯ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ವರದಿಗಳು ಸೂಚಿಸಿವೆ.
2022-23ನೇ ಹಣಕಾಸು ವರ್ಷದಲ್ಲಿ ಬಿಸಿಸಿಐ ಬಳಿ 16,493 ಕೋಟಿ ರೂಪಾಯಿ ಇತ್ತು. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಕಳೆದ ಒಂದೇ ವರ್ಷದಲ್ಲಿ 4,200 ಕೋಟಿ ರೂ. ಹೆಚ್ಚಿನ ಆದಾಯ ಹರಿದುಬಂದಿದೆ. ಸದ್ಯ ಬಿಸಿಸಿಐ ಬಳಿ 20,686 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್ ಇದೆ ಎಂದು ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯ ಷಾ ಹೇಳಿದ್ದಾರೆ.
ಇತ್ತೀಚಿನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಮಾಜಿ ಬಿಸಿಸಿಐ ಕಾರ್ಯದರ್ಶಿ ಜಯ ಷಾ ಅವರು ಮಂಡಳಿಯ ಹಣಕಾಸು ವರದಿಗಳನ್ನು ವಿವರಿಸಿದರು. 2023-24ನೇ ಹಣಕಾಸು ವರ್ಷದ ಆದಾಯ 7,476 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ, ಆದಾಯವು ನಿರೀಕ್ಷೆಗಳನ್ನು ಮೀರಿದ್ದು, 8,995 ಕೋಟಿ ರೂ. ಬಂದಿದೆ. ಸಾಮಾನ್ಯ ನಿಧಿಯು 6,365 ಕೋಟಿ ರೂ.ಗಳಿಂದ 7,988 ಕೋಟಿ ರೂ.ಗೆ ಏರಿಕೆಯಾಗಿದೆ.
ಇನ್ನು 2024-25ನೇ ಹಣಕಾಸು ವರ್ಷದಲ್ಲಿ ಬಿಸಿಸಿಐ 10,054 ಕೋಟಿ ರೂ. ಆದಾಯ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಅಲ್ಲದೆ, ಒಟ್ಟು ಬಜೆಟ್ ವೆಚ್ಚವನ್ನು 2,348 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.
ಅಂದಹಾಗೆ ಬಿಸಿಸಿಐಗೆ ಇಷ್ಟೊಂದು ಪ್ರಮಾಣದ ಆದಾಯವು ವಿಶ್ವದ ನಗದು ಶ್ರೀಮಂತ ಲೀಗ್ ಎಂದೇ ಖ್ಯಾತಿ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಸಾರ ಹಕ್ಕು ಮತ್ತು ದ್ವಿಪಕ್ಷೀಯ ಕ್ರಿಕೆಟ್ ಪ್ರಸಾರದ ಹಕ್ಕುಗಳಿಂದ ಬರುತ್ತದೆ. ಇದಿಷ್ಟೇ ಅಲ್ಲದೆ, ಭಾರತವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮಾರುಕಟ್ಟೆಯಾಗಿರುವುದರಿಂದ, ಬಿಸಿಸಿಐ ಅಂತಾರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆದಾಯದಲ್ಲಿ ಸಿಂಹಪಾಲನ್ನು ಪಡೆಯುತ್ತದೆ. (ಏಜೆನ್ಸೀಸ್)