ಫೈನಲ್​ಗೆ ಮಳೆ ಮುನ್ಸೂಚನೆ! ಪಂದ್ಯ ರದ್ದಾದರೆ ಮುಂದೇನು? ಹೀಗಿದೆ ಐಪಿಎಲ್​ ನಿಯಮ | IPL Final 2025

ವಿಜಯವಾಣಿ (13)
Published on

IPL Final 2025: ಐಪಿಎಲ್​ 2025ರ ಫೈನಲ್‌ಗೆ ಇದೀಗ ಕ್ಷಣಗಣನೆ ಆರಂಭಗೊಂಡಿದ್ದು, ಎರಡೂ ತಂಡಗಳು ಗೆಲುವಿಗಾಗಿ ಪಣತೊಟ್ಟು ನಿಂತಿದೆ. ಇಂದು (ಜೂ.03) ಅಹಮದಾಬಾದ್‌ನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿದ್ದು, ಚೊಚ್ಚಲ ಟ್ರೋಫಿಗೆ ಮುತ್ತಿಡುವ ಹೆಬ್ಬಯಕೆಯಲ್ಲಿದೆ. ಎರಡೂ ಫ್ರಾಂಚೈಸಿಗಳ ಅಭಿಮಾನಿಗಳು ತೀವ್ರ ಕುತೂಹಲದಲ್ಲಿದ್ದು, ಆರ್​ಸಿಬಿ ಫ್ಯಾನ್ಸ್ ಈಗಾಗಲೇ ದೇವರ ಮೊರೆ ಹೋಗಿದ್ದಾರೆ.

ಈ ಹಿಂದಿನ ಕ್ವಾಲಿಫೈಯರ್​ ಮತ್ತು ಎಲಿಮಿನೇಟರ್ ಪಂದ್ಯಗಳಲ್ಲಿ ಮಳೆ ಅಡ್ಡಿಯಾದರೆ, ಪಂದ್ಯವನ್ನು ಸಮಯಕ್ಕೆ ಅನುಗುಣವಾಗಿ ಆಡಿಸಲಾಯಿತು. ಕಾರಣ, ಈ ಪಂದ್ಯಗಳಿಗೆ ಮುಂದೂಡಿಕೆ ಆಯ್ಕೆ ಇರಲಿಲ್ಲ. ಆದರೆ, ಫೈನಲ್ ಹಂತಕ್ಕೆ ಮಾತ್ರ ರಿಸರ್ವ್​ ಡೇ ಆಯ್ಕೆಯಿದೆ. ಈ ನಿಯಮದ ಅನ್ವಯ ಫೈನಲ್​ ಪಂದ್ಯಕ್ಕೆ ಮಳೆ ಅಡ್ಡಿಯಾಗಿ, ಆ ದಿನ ಪಂದ್ಯ ಪ್ರಾರಂಭಿಸಲು ಸಾಧ್ಯವಾಗದಿದ್ದರೇ, ಫೈನಲ್​ ಅನ್ನು ಮರುದಿನಕ್ಕೆ ಮುಂದೂಡಲಾಗುವುದು. ಅಂತೆಯೇ ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಅಂತಿಮ ಹಣಾಹಣಿಗೆ ಮಳೆ ಕಾಡಿದರೆ, ಆ ಪಂದ್ಯ ಜೂನ್​.4ಕ್ಕೆ ಮುಂದೂಡಿಕೆ ಆಗಲಿದೆ.

ವರದಿಗಳ ಪ್ರಕಾರ, ಮಂಗಳವಾರ ಅಹಮದಾಬಾದ್‌ನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ, ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ಅಂತಿಮ ಪಂದ್ಯವನ್ನು ರದ್ದುಗೊಳಿಸಿದರೆ ಏನಾಗಬಹುದು ಎಂಬ ಚಿಂತನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಆರ್​ಸಿಬಿ ಗೆದ್ದು, ಚೊಚ್ಚಲ ಕಪ್​ ಎತ್ತಿಹಿಡಿಯಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವ ಫ್ಯಾನ್ಸ್​, ವರುಣನ ಅಡಚಣೆ ಉಂಟಾಗದಿರಲಿ ಎಂದು ಬೇಡಿಕೊಂಡರೂ ಅಚ್ಚರಿಯಿಲ್ಲ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net