

ಲಾಹೋರ್: ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಅಪ್ಘಾನಿಸ್ತಾನ ತಂಡವು ಚಾಂಪಿಯನ್ಸ್ ಟ್ರೋಫಿಯ (Champions Trophy) 10ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಉಭಯ ತಂಡಗಳ ಪಾಲಿಗೂ ಈ ಪಂದ್ಯ ಕ್ವಾರ್ಟರ್ ಫೈನಲ್ನಂತೆ ಭಾಸವಾಗಿದೆ. ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಖಚಿತವಾಗಲಿದೆ ಎಂಬ ಚರ್ಚೆ ಕ್ರೀಡಾವಲಯದಲ್ಲಿ ಜೋರಾಗಿ ನಡೆಯುತ್ತಿದೆ.
ಬುಧವಾರವಷ್ಟೇ ಗಡಾಫಿ ಸ್ಟೇಡಿಯಂನಲ್ಲಿ ಆಂಗ್ಲರನ್ನು ಮಣಿಸಿ ಐತಿಹಾಸಿಕ ಸಾಧನೆ ಮಾಡಿರುವ ಅಫ್ಘಾನಿಸ್ತಾನ ತಂಡ 2023ರ ಏಕದಿನ ವಿಶ್ವಕಪ್‌ನಲ್ಲಿ ಆಸೀಸ್ ಎದುರು ಅಲ್ಪ ಅಂತರದಲ್ಲಿ ಕೈತಪ್ಪಿದ್ದ ಗೆಲುವನ್ನು ಈ ಸಲ ಒಲಿಸಿಕೊಳ್ಳುವ ಹಂಬಲದಲ್ಲಿದೆ. ಈ ಮೂಲಕ ಸತತ 2ನೇ ಬಾರಿ ಐಸಿಸಿ ಟೂರ್ನಿಯ ಉಪಾಂತ್ಯಕ್ಕೇರುವ ನಿರೀಕ್ಷೆ ಹೊಂದಿದೆ. ಅಫ್ಘನ್ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿತ್ತು. 2023ರ ಏಕದಿನ ವಿಶ್ವಕಪ್‌ನಲ್ಲಿ ರೈನ್ ಮ್ಯಾಕ್ಸ್‌ವೆಲ್ ಸಿಡಿಸಿದ ದ್ವಿಶತಕದಿಂದಾಗಿ ಆಸೀಸ್ ಸೋಲಿನಿಂದ ಪಾರಾಗಿದ್ದರೆ, 2024ರ ಟಿ20 ವಿಶ್ವಕಪ್ ಸೂಪರ್-8 ಹಂತದಲ್ಲಿ ಅನೀಸ್ ಆಫ್ಘನ್ ಆಘಾತ ನೀಡಿತ್ತು. ಹೀಗಾಗಿ ಈ ಸಲ ಮತ್ತೆ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಕಾದಾಟದ ನಿರೀಕ್ಷೆ ಇದೆ. ಆಫ್ರನ್ ಎದುರು ಎಚ್ಚರ ತಪ್ಪಿದರೆ ಆಸ್ಟ್ರೇಲಿಯಾ ತಂಡ ಟೂರ್ನಿ ಯಿಂದ ಹೊರಬೀಳುವ ಅಪಾಯವನ್ನು ಹೊಂದಿದೆ. ಪ್ರಮುಖರ అನುಪಸ್ಥಿತಿಯಲ್ಲಿ ಇಂಗ್ಲೆಂಡ್ ಎದುರು ದಾಖಲೆಯ ಚೇಸಿಂಗ್ ನಡೆಸಿದ ಆಸೀಸ್, 2009ರ ಬಳಿಕ ಮಿನಿ ವಿಶ್ವಕಪ್ ಟೂರ್ನಿಯಲ್ಲಿ ಜಯದ ಸಿಹಿ ಕಂಡಿದೆ. 15 ವರ್ಷಗಳ ಬಳಿಕ ಪ್ರಶಸ್ತಿ ಜಯಿಸುವ ಆಸೆಯಲ್ಲಿರುವ ಆಸೀನ್‌ಗೆ ಬೌಲಿಂಗ್ ವಿಭಾಗ ಚಿಂತೆ ತಂದಿದೆ.
ಪ್ರಸ್ತುತ ಬಿ ಗುಂಪಿನಲ್ಲಿ ಸೆಮೀಸ್ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ದಕ್ಷಿಣ ಆಫ್ರಿಕಾ (+2.140) ಹಾಗೂ ಆಸ್ಟ್ರೇಲಿಯಾ (60.475) ತಂಡಗಳು ಆಡಿರುವ 2 ಪಂದ್ಯಗಳಲ್ಲಿ ತಲಾ 3 ಅಂಕ ಕಲೆಹಾಕಿ ಮೊದಲೆರಡು ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನ (-0.990) 2 ಪಂದ್ಯಗಳಲ್ಲಿ 2 ಅಂಕ ಕಲೆಹಾಕಿ ಮೂರನೇ ಸ್ಥಾನದಲ್ಲಿದೆ. ಆಫ್ಘನ್ ಎದುರು ಆಸೀಸ್, ಇಂಗ್ಲೆಂಡ್ ಎದುರು ದಕ್ಷಿಣ ಆಫ್ರಿಕಾ ಗೆದ್ದರೆ ತಲಾ ಐದು ಅಂಕಗಳೊಂದಿಗೆ ಸೆಮೀಸ್ ಅರ್ಹತೆ ಪಡೆಯಲಿವೆ. ಆಗ ಗುಂಪಿನ ಅಗ್ರಸ್ಥಾನವನ್ನು ಗೆಲುವಿನ ಅಂತರ ಅಂದರೆ ರನ್‌ರೇಟ್ ನಿರ್ಧರಿಸುತ್ತದೆ. ಒಂದು ವೇಳೆ ಆಸೀಸ್ ಎದುರು ಅಫ್ಘನ್, ಇಂಗ್ಲೆಂಡ್ ಎದುರು ಆಫ್ರಿಕಾ ಗೆದ್ದರೆ, ಇವೆರಡೂ ತಂಡಗಳು ಉಪಾಂತ್ಯಕ್ಕೇರಲಿವೆ. ಆಗ ಆಸೀಸ್ ಹೊರಬೀಳಲಿದೆ ಮತ್ತು ಆಫ್ರಿಕಾ ಗುಂಪಿನ ಅಗ್ರಸ್ಥಾನಿ ಎನಿಸಲಿದೆ.
ಅಫ್ಘನ್-ಆಸೀಸ್ ಪಂದ್ಯ ಮಳೆಯಿಂದ ರದ್ದಾದರೆ ಆಸೀಸ್ ಹಾಗೂ ದ.ಆಫ್ರಿಕಾ ತಂಡಗಳು ಅಗ್ರ 2 ಸ್ಥಾನ ಹಂಚಿಕೊಳ್ಳಲಿವೆ. ದಕ್ಷಿಣ ಆಫ್ರಿಕಾ ಎದುರು ಇಂಗ್ಲೆಂಡ್, ಆಸೀಸ್ ಎದುರು ಅಫ್ಘನ್ ಗೆದ್ದರೆ, ಆಗ ಅಫ್ಘನ್ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೇರಲಿದೆ ಮತ್ತು ಆಫ್ರಿಕಾ-ಆಸೀಸ್ ನಡುವೆ ಉತ್ತಮ ರನ್ ರೇಟ್ ಹೊಂದಿರುವ ತಂಡ 2ನೇ ಸ್ಥಾನಿಯಾಗಿ ಉಪಾಂತ್ಯಕ್ಕೇರಲಿದೆ. ಒಂದು ವೇಳೆ ಮಳೆಯಿಂದಾಗಿ ಅಫ್ಘನ್ ಹಾಗೂ ಆಸೀಸ್ ನಡುವಿನ ಪಂದ್ಯ ರದ್ದಾದರೆ ಕಾಂಗರೂ ಪಡೆಗೆ ಚಾಂಪಿಯನ್ಸ್ ಟ್ರೋಫಿ (Champions Trophy) ಸೆಮಿಫೈನಲ್ ಟಿಕೆಟ್ ಖಾತ್ರಿಯಾಗುತ್ತದೆ.