

ಸಿಂಗಾಪುರ: ಭಾರತದ ಚದುರಂಗ ಚತುರ ದೊಮ್ಮರಾಜು ಗುಕೇಶ್ ಈಗ ಜಾಗತಿಕ ಚೆಸ್ ರಾಜನಾಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. 18 ವರ್ಷದ ಗ್ರಾಂಡ್ ಮಾಸ್ಟರ್ ಡಿ. ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಪಟ್ಟವೇರಿದ ಅತಿಕಿರಿಯ ಆಟಗಾರ ಮತ್ತು ಎರಡನೇ ಭಾರತೀಯರೆಂಬ ದಾಖಲೆ ಬರೆದಿದ್ದಾರೆ. ಈ ಮೂಲಕ ವಿಶ್ವ ಚೆಸ್ನಲ್ಲಿ ಭಾರತದ ಪ್ರಾಬಲ್ಯವನ್ನು ಮರುಸ್ಥಾಪಿಸಿದ್ದಾರೆ. ಗುಕೇಶ್ 18ನೇ ವಯಸ್ಸಿನಲ್ಲೇ ವಿಶ್ವದ 18ನೇ ವಿಶ್ವ ಚಾಂಪಿಯನ್ ಎನಿಸಿರುವುದು ವಿಶೇಷವಾಗಿದೆ. ಜತೆಗೆ ಗುಕೇಶ್ ತನ್ನ ಹೆಸರಿಗೆ ತಕ್ಕಂತೆ ಸಾಧನೆ ಮೆರೆದಿರುವುದ ಗಮನಾರ್ಹ.
ಗುಕೇಶ್ ಎಂದರೆ...
ಗುಕೇಸ್ ಎಂದರೆ ಸದ್ಗುಣ, ಶಿವ (ಕಪ್ಪು ಕೇಶ ಹೊಂದಿರುವವ) ಅಥವಾ "ಜಗತ್ತನ್ನೇ ಗೆದ್ದವನು' ಎಂದರ್ಥ. ಗುಕೇಶ್ ಈಗ ತನ್ನ ಹೆಸರಿಗೆ ತಕ್ಕಂತೆ ಚೆಸ್ನಲ್ಲಿ ವಿಶ್ವವಿಜೇತರಾಗಿದ್ದಾರೆ. ಮಗನಿಗೆ "ಜಿ' ಅಥವಾ "ಗು'ನಿಂದ ಶುರುವಾಗುವ ಅಕ್ಷರದ ಹೆಸರಿಡಲು ಜ್ಯೋತಿಷಿ ಸೂಚಿಸಿದ್ದರಿಂದ ಗುಕೇಶ್ ಪೋಷಕರು ಈ ವಿಶೇಷ ಹೆಸರನ್ನು ಆಯ್ದುಕೊಂಡಿದ್ದರಂತೆ.
ಅತಿಕಿರಿಯ ಸಾಧಕ
18 ವರ್ಷ, 8 ತಿಂಗಳು, 14 ದಿನ ವಯಸ್ಸಿನ ಡಿ. ಗುಕೇಶ್ ಅತಿ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಎನಿಸಿದ್ದಾರೆ. ರಷ್ಯಾದ ಗ್ಯಾರಿ ಕ್ಯಾಸ್ಪರೋವ್ 1985ರಲ್ಲಿ 22 ವರ್ಷ, 6 ತಿಂಗಳು, 27 ದಿನ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದು ಹಿಂದಿನ ದಾಖಲೆ. ಮ್ಯಾಗ್ನಸ್ ಕಾರ್ಲ್ಸೆನ್ 2013ರಲ್ಲಿ 22 ವರ್ಷ 11 ತಿಂಗಳು, 24 ದಿನ ವಯಸ್ಸಿನಲ್ಲಿ ಈ ಸಾಧನೆ ಮಾಡಿ ಕ್ಯಾಸ್ಪರೋವ್ ದಾಖಲೆ ಮುರಿಯುವ ಸನಿಹ ಹೋಗಿದ್ದರು. 1988ರಲ್ಲಿ 18ನೇ ವಯಸ್ಸಿನಲ್ಲೇ ಭಾರತದ ಮೊದಲ ಗ್ರಾಂಡ್ ಮಾಸ್ಟರ್ ಎನಿಸಿದ್ದ ವಿಶ್ವನಾಥನ್ ಆನಂದ್, 2000ದಲ್ಲಿ ಮೊದಲ ಬಾರಿ ವಿಶ್ವ ಚಾಂಪಿಯನ್ ಆದಾಗ 30 ವರ್ಷ ವಯಸ್ಸಾಗಿತ್ತು.
11.03 ಕೋಟಿ ರೂ. ಬಹುಮಾನ
ಒಟ್ಟಾರೆ ಬಹುಮಾನ ಮೊತ್ತ 21.21 ಕೋಟಿ ರೂ.ಗಳಲ್ಲಿ ಚಾಂಪಿಯನ್ ಗುಕೇಶ್ಗೆ 11.03 ಕೋಟಿ ರೂ. ಮತ್ತು ರನ್ನರ್ಅಪ್ ಲಿರೆನ್ಗೆ 10.18 ಕೋಟಿ ರೂ. ದೊರೆಯಲಿದೆ.
ವಿಶ್ವ ಗೆದ್ದ ಚೆನ್ನೈನ ಚದುರಂಗ ಚತುರ
ಏಳನೇ ವಯಸ್ಸಿನಲ್ಲೇ ಚೆಸ್ ಆಡಲಾರಂಭಿಸಿದ ಡಿ. ಗುಕೇಶ್ ಅವರ ತಂದೆ ಡಾ. ರಜನಿಕಾಂತ್ ಇಎನ್ಟಿ ಸರ್ಜನ್ ಮತ್ತು ತಾಯಿ ಡಾ. ಪದ್ಮಾ ಮೈಕ್ರೋ ಬಯೋಲಾಜಿಸ್ಟ್. ಗುಕೇಶ್ 2006ರ ಮೇ 29ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿ ಅಲ್ಲೇ ಬೆಳೆದಿದ್ದರೂ, ಅವರ ಮಾತೃಭಾಷೆ ತೆಲುಗು. ಯಾಕೆಂದರೆ ಅವರ ಕುಟುಂಬದ ಮೂಲ ಆಂಧ್ರ ಪ್ರದೇಶದ ಗೋದಾವರಿ ಆಗಿದೆ. ಮಗನ ಚೆಸ್ ಕನಸು ನನಸಾಗಿಸುವ ಸಲುವಾಗಿ ತಂದೆ ರಜನಿಕಾಂತ್ ವೈದ್ಯ ವೃತ್ತಿಯನ್ನೇ ತೊರೆದು ಮಗನೊಂದಿಗೆ ವಿವಿಧ ಚೆಸ್ ಟೂರ್ನಿಗಳಿಗೆ ಪ್ರಯಾಣಿಸಲಾರಂಭಿಸಿದ್ದರು. 2015ರಲ್ಲಿ 9ನೇ ವಯಸ್ಸಿನಲ್ಲೇ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್ಷಿಪ್ ಮತ್ತು 2018ರಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್ಷಿಪ್ ಗೆದ್ದಿರುವ ಗುಕೇಶ್ 2017ರಲ್ಲೇ ಅಂತಾರಾಷ್ಟ್ರೀಯ ಮಾಸ್ಟರ್ ಆಗಿದ್ದರು. 2019ರಲ್ಲಿ 12 ವರ್ಷ, 7 ತಿಂಗಳು, 17 ದಿನ ವಯಸ್ಸಿನಲ್ಲೇ ಗ್ರಾಂಡ್ ಮಾಸ್ಟರ್ ಪಟ್ಟವೇರುವ ಮೂಲಕ ಈ ಸಾಧನೆ ಮಾಡಿದ ವಿಶ್ವದ 2ನೇ ಅತ್ಯಂತ ಕಿರಿಯರೆನಿಸಿದ್ದರು. ಕೇವಲ 17 ದಿನಗಳ ಅಂತರದಿಂದ ಅವರು ರಷ್ಯಾದ ಸೆರ್ಗಿ ಕರಿಜಕಿನ್ ದಾಖಲೆಯಿಂದ ಹಿಂದುಳಿದಿದ್ದರು. ನಂತರದಲ್ಲಿ ಭಾರತದವರೇ ಆದ ಅಭಿಮನ್ಯು ಮಿಶ್ರಾ 12 ವರ್ಷ, 4 ತಿಂಗಳು ವಯಸ್ಸಲ್ಲೇ ಈ ಸಾಧನೆ ಮಾಡಿ ಗುಕೇಶ್ರನ್ನು 3ನೇ ಸ್ಥಾನಕ್ಕೆ ತಳ್ಳಿದ್ದರು. ಫಿಡೆ ಚೆಸ್ ರೇಟಿಂಗ್ನಲ್ಲಿ 2,700 ಅಂಕ ಕಲೆಹಾಕಿರುವ 3ನೇ ಅತಿ ಕಿರಿಯ ಎನಿಸಿರುವ ಗುಕೇಶ್, 2,750 ಅಂಕ ಕಲೆಹಾಕಿದ ಅತಿಕಿರಿಯರೂ ಆಗಿದ್ದಾರೆ. ಕಳೆದ ವರ್ಷ ಹಾಂಗ್ರೆೌ ಏಷ್ಯನ್ ಗೇಮ್ಸ್ನಲ್ಲಿ ಗುಕೇಶ್ ರಜತ ಪದಕ ಒಲಿಸಿಕೊಂಡಿದ್ದರು. ಹಾಲಿ ವರ್ಷ ಭಾರತ ತಂಡ ಚೊಚ್ಚಲ ಚೆಸ್ ಒಲಿಂಪಿಯಾಡ್ ಜಯಿಸುವಲ್ಲೂ ಗುಕೇಶ್ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು. ಟೂರ್ನಿಯ 10 ಪಂದ್ಯಗಳಲ್ಲಿ 8ರಲ್ಲಿ ಗೆದ್ದು, 2ರಲ್ಲಿ ಡ್ರಾ ಸಾಧಿಸಿದ್ದ ಗುಕೇಶ್, ಇದೀಗ ವಿಶ್ವ ಚಾಂಪಿಯನ್ ಪಟ್ಟವೇರಿ ಇತಿಹಾಸ ಬರೆದಿದ್ದಾರೆ.
18 ವಿಶ್ವ ಚೆಸ್ ಚಾಂಪಿಯನ್ಸ್
1. ವಿಲ್ಲೆಲ್ಮ್ ಸ್ಟೀನಿಟ್ಜ್ (ಅಮೆರಿಕ), 2. ಇಮ್ಯಾನ್ಯುಯೆಲ್ ಲಾಸ್ಕರ್ (ಜರ್ಮನಿ), 3. ಜೋಸ್ ರೌಲ್ ಕ್ಯಾಪಬ್ಲಾಂಕಾ (ಕ್ಯುಬಾ), 4. ಅಲೆಕ್ಸಾಂಡರ್ ಅಲೆಖೈನ್ (ಫ್ರಾನ್ಸ್), 5. ಮ್ಯಾಕ್ಸ್ ಯುವೆ (ನೆದರ್ಲೆಂಡ್), 6. ಮಿಖಾಯಿಲ್ ಬೋಟ್ವಿನಿಕ್ (ರಷ್ಯಾ), 7. ವಾಸಿಲಿ ಸ್ಮಿಸ್ಲೋವ್ (ರಷ್ಯಾ), 8. ಮಿಖಾಯಿಲ್ ತಾಲ್ (ಲಾತ್ವಿಯಾ), 9. ಟೈಗ್ರಾನ್ ವಿ. ಪೆಟ್ರೋಸಿಯನ್ (ಅಮೆರಿಕ), 10. ಬೋರಿಸ್ ಸ್ಪಾಸ್ಕಿ (ರಷ್ಯಾ), 11. ಬಾಬಿ ಫಿಶರ್ (ಅಮೆರಿಕ), 12. ಅನಾಟೊಲಿ ಕಾಪೋರ್ವ್ (ರಷ್ಯಾ), 13. ಗ್ಯಾರಿ ಕ್ಯಾಸ್ಪರೋವ್ (ರಷ್ಯಾ), 14. ವ್ಲಾದಿಮಿರ್ ಕ್ರಾಮ್ನಿಕ್ (ರಷ್ಯಾ), 15. ವಿಶ್ವನಾಥನ್ ಆನಂದ್ (ಭಾರತ), 16. ಮ್ಯಾಗ್ನಸ್ ಕಾರ್ಲ್ಸೆನ್ (ನಾರ್ವೆ), 17. ಡಿಂಗ್ ಲಿರೆನ್ (ಚೀನಾ), 18. ಡಿ. ಗುಕೇಶ್ (ಭಾರತ).
ಭಾರತೀಯ ಚದುರಂಗದ ಸ್ವರ್ಣಯುಗ
ಚದುರಂಗ ಆಟ ಹುಟ್ಟಿದ್ದು ಭಾರತದಲ್ಲೇ. ಪುರಾಣದಲ್ಲೂ ಇದರ ಉಲ್ಲೇಖಗಳಿವೆ. ಆದರೆ ಚೆಸ್ ಒಂದು ವೃತ್ತಿಪರ ಕ್ರೀಡೆಯೂ ಆಗಬಹುದು ಎಂಬುದನ್ನು ಭಾರತೀಯರಿಗೆ ತೋರಿಸಿಕೊಟ್ಟಿದ್ದು ವಿಶ್ವನಾಥನ್ ಆನಂದ್. 1988ರಲ್ಲಿ ಅವರು ಭಾರತದ ಮೊದಲ ಗ್ರಾಂಡ್ ಮಾಸ್ಟರ್ ಆದಾಗ ವಿಶ್ವ ಚೆಸ್ನಲ್ಲಿ ಒಂದು ಹನಿಯಷ್ಟೇ ಆಗಿದ್ದರು. ಆದರೆ ಈಗ ಭಾರತ ಅದನ್ನು ಸಾಗರವಾಗಿ ಪರಿವರ್ತಿಸಿದೆ. ಈಗ ಅವರದೇ ಸ್ಫೂರ್ತಿಯಲ್ಲಿ ದೇಶದಲ್ಲಿ 85 ಗ್ರಾಂಡ್ ಮಾಸ್ಟರ್ಗಳು, 124 ಅಂತಾರಾಷ್ಟ್ರೀಯ ಮಾಸ್ಟರ್ಗಳಿದ್ದಾರೆ. ಓರ್ವ ವಿಶ್ವನಾಥನ್ ಆನಂದ್ ತುಂಬಿದ ಸ್ಫೂರ್ತಿಯಿಂದ ಇಂದು ಪ್ರತಿಭಾವಂತ ಚೆಸ್ ಆಟಗಾರರ ದೊಡ್ಡ ಬಲವೇ ಭಾರತಕ್ಕೆ ಸಿಕ್ಕಿದೆ. ರಷ್ಯಾ ಸೇರಿ ಸೋವಿಯತ್ ಒಕ್ಕೂಟಕ್ಕೆ ಆನಂದ್ ಮೊದಲಿಗರಾಗಿ ಸೆಡ್ಡು ಹೊಡೆದಿದ್ದರೆ, ಇದೀಗ ಗುಕೇಶ್ ವಿಶ್ವ ಚೆಸ್ನಲ್ಲಿ ಭಾರತದ ಪ್ರಾಬಲ್ಯವನ್ನು ಮರುಸ್ಥಾಪಿಸಿದ್ದಾರೆ. ಕಳೆದ ವರ್ಷ ಆರ್. ಪ್ರಜ್ಞಾನಂದ ಚೆಸ್ ವಿಶ್ವಕಪ್ ಗೆಲುವಿನ ಸನಿಹ ತಲುಪಿ ರನ್ನರ್ಅಪ್ ಆಗಿದ್ದರೆ, ಕಳೆದ ಸೆಪ್ಟೆಂಬರ್ನಲ್ಲಿ ಹಂಗೆರಿಯ ಬುಡಾಪೆಸ್ಟ್ನಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್ನಲ್ಲಿ ಮೊಟ್ಟಮೊದಲ ಬಾರಿಗೆ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಸ್ವರ್ಣ ಪದಕ ಗೆದ್ದು ಇತಿಹಾಸ ರಚಿಸಿತ್ತು. ಇದೀಗ ಗುಕೇಶ್ ವಿಶ್ವ ಚಾಂಪಿಯನ್ ಪಟ್ಟವೇರುವುದರೊಂದಿಗೆ ಭಾರತೀಯ ಚದುರಂಗದ ಸ್ವರ್ಣಯುಗವನ್ನು ಸಾರಿದ್ದಾರೆ.
ನೆರವಾದ ಆನಂದ್
ಸೋವಿಯತ್ ಯೂನಿಯನ್ನಲ್ಲಿ ಶಾಲೆಗಳಲ್ಲಿ ಚೆಸ್ ಕಲಿಸುವುದನ್ನು ತಾನು 3 ದಶಕಗಳ ಹಿಂದೆಯೇ ನೋಡಿದ್ದ ಸ್ಫೂರ್ತಿಯಿಂದ ವಿಶ್ವನಾಥನ್ ಆನಂದ್ ಚೆನ್ನೆ$ನಲ್ಲಿ ಸ್ಥಾಪಿಸಿರುವ ಚೆಸ್ ಅಕಾಡೆಮಿ (ವೆಸ್ಟ್ಬ್ರಿಡ್ಜ್ ಆನಂದ್ ಚೆಸ್ ಅಕಾಡೆಮಿ) ದೇಶದ ಚೆಸ್ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆರನೇ ವಯಸ್ಸಿನಲ್ಲೇ ಅಮ್ಮ ಸುಶೀಲಾರಿಂದ ಚೆಸ್ ಆಟವನ್ನು ಕಲಿತಿದ್ದ ವಿಶ್ವನಾಥನ್ ಆನಂದ್, ಭವಿಷ್ಯದ ಚೆಸ್ ತಾರೆಯರನ್ನು ಬೆಳೆಸುವಲ್ಲಿ ವಿಶೇಷ ಕೊಡುಗೆ ನೀಡುತ್ತ ಬಂದಿದ್ದಾರೆ. ಈಗ 55ನೇ ವಯಸ್ಸಿನಲ್ಲಿ ಆನಂದ್ ವೃತ್ತಿಪರ ಚೆಸ್ ಆಟದಿಂದ ಸ್ವಲ್ಪ ವಿರಾಮಯಲ್ಲಿದ್ದರೂ, ಇನ್ನೂ ನಿವೃತ್ತಿ ಪಡೆದಿಲ್ಲ. ಚೆಸ್ ಒಲಿಂಪಿಯಾಡ್ ನಂತರ ವಿಶ್ವ ಚೆಸ್ ಚಾಂಪಿಯನ್ಷಿಪ್ನಲ್ಲೂ ಗುಕೇಶ್ಗೆ ತಂದೆಯ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡಿದ್ದಾರೆ.