

ಬ್ರಿಸ್ಬೇನ್: ಭಾರತ ತಂಡ ಬುಧವಾರ ಬೆಳಗ್ಗೆ ಬ್ರಿಸ್ಬೇನ್ಗೆ ಪ್ರಯಾಣಿಸಲು ಅಡಿಲೇಡ್ ಹೋಟೆಲ್ನಿಂದ ವಿಮಾನ ನಿಲ್ದಾಣಕ್ಕೆ ಬಸ್ನಲ್ಲಿ ಪ್ರಯಾಣಿಸಲು ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಸರಿಯಾದ ಸಮಯಕ್ಕೆ ಬರಲಿಲ್ಲ. ಆಟಗಾರರು ಎರಡು ಬಸ್ಗಳಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಬೇಕಾಗಿತ್ತು.
ಮೊದಲ ಬಸ್ ಬೇಗನೆ ತೆರಳಿದ್ದರೆ, 2ನೇ ಬಸ್ನಲ್ಲಿ ನಾಯಕ ರೋಹಿತ್ ಶರ್ಮ, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಜತೆಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಸಹಿತ ತಂಡದ ತರಬೇತಿ ಸಿಬ್ಬಂದಿಯೊಂದಿಗೆ ಜೈಸ್ವಾಲ್ ಕೂಡ ವಿಮಾನನಿಲ್ದಾಣಕ್ಕೆ ಹೋಗಬೇಕಿತ್ತು. ಆದರೆ ಜೈಸ್ವಾಲ್ಗಾಗಿ ಇತರರು ಹೋಟೆಲ್ ಲಾಬಿಯಲ್ಲಿ ಎಷ್ಟು ಕಾದರೂ ಅವರು ಬರುವುದು ಕಾಣಿಸಲಿಲ್ಲ. ಯುವ ಆಟಗಾರನ ಈ ಅಶಿಸ್ತಿನ ವರ್ತನೆಯಿಂದ ಸಿಟ್ಟಾದ ನಾಯಕ ರೋಹಿತ್ ಶರ್ಮ, ಜೈಸ್ವಾಲ್ರನ್ನು ಬಿಟ್ಟೇ ವಿಮಾನ ನಿಲ್ದಾಣಕ್ಕೆ ತೆರಳಲು ಬಸ್ ಡೆವರ್ಗೆ ಸೂಚಿಸಿದರು.
ಆದರೆ ಆಗ ತಂಡದ ಮ್ಯಾನೇಜರ್ ಮತ್ತು ಭದ್ರತಾ ಅಧಿಕಾರಿ ಬಸ್ನಿಂದ ಇಳಿದರು. 20 ನಿಮಿಷಗಳ ಬಳಿಕ ಜೈಸ್ವಾಲ್ ಬಂದಾಗ ಬಸ್ ತನ್ನನ್ನು ಬಿಟ್ಟು ತೆರಳಿರುವುದನ್ನು ನೋಡಿ ಗಲಿಬಿಲಿಗೊಂಡರು. ಬಳಿಕ ಮ್ಯಾನೇಜರ್ ಮತ್ತು ಭದ್ರತಾ ಅಧಿಕಾರಿಯೊಂದಿಗೆ ಜೈಸ್ವಾಲ್ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಇನ್ನು ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಪ್ರವಾಸಕ್ಕೆ ಕುಟುಂಬದೊಂದಿಗೆ ತೆರಳಿರುವುದರಿಂದ ಪ್ರತ್ಯೇಕವಾಗಿ ಬಾಡಿಗೆ ವಿಮಾನದಲ್ಲಿ ಬ್ರಿಸ್ಬೇನ್ಗೆ ತೆರಳಿದರು.