

ಬೆಂಗಳೂರು: ಮುಂಬರುವ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಗೆ ಕರ್ನಾಟಕದ 32 ಆಟಗಾರರ ಸಂಭಾವ್ಯ ತಂಡವನ್ನು ಕೆಎಸ್ಸಿಎ ಮಂಗಳವಾರ ಪ್ರಕಟಿಸಿದೆ. ಫಾರ್ಮ್ನಲ್ಲಿಲ್ಲದ ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಅವರನ್ನು ಕೈಬಿಡುವ ದಿಟ್ಟ ನಿರ್ಧಾರವನ್ನು ಜೆ. ಅಭಿರಾಮ್ ಸಾರಥ್ಯದ ಆಯ್ಕೆ ಸಮಿತಿ ತೆಗೆದುಕೊಂಡಿದೆ.
ಡಿಸೆಂಬರ್ 21ರಿಂದ ನಡೆಯಲಿರುವ ಟೂರ್ನಿಗೆ ರಾಷ್ಟ್ರೀಯ ತಂಡದ ಆಟಗಾರರಾದ ಕೆಎಲ್ ರಾಹುಲ್, ಪ್ರಸಿದ್ಧ ಕೃಷ್ಣ, ದೇವದತ್ ಪಡಿಕ್ಕಲ್ ಕೂಡ ಸಂಭಾವ್ಯರಲ್ಲಿದ್ದಾರೆ. ಪರಾಸ್ ಗುರ್ಬಕ್ಷ್ ಆರ್ಯ, ಶಿಖರ್ ಶೆಟ್ಟಿ ತಂಡದಲ್ಲಿರುವ ಹೊಸಮುಖವಾಗಿದ್ದಾರೆ. ಮನೀಷ್ ಕೈಬಿಡುವ ಮೂಲಕ ಆಯ್ಕೆಗಾರರು, ಇತ್ತೀಚೆಗೆ ಸ್ಥಿರ ನಿರ್ವಹಣೆ ತೋರಲು ಪರದಾಡುತ್ತಿರುವ ನಾಯಕ ಮಯಾಂಕ್ ಅಗರ್ವಾಲ್ಗೂ ಎಚ್ಚರಿಕೆಯ ಗಂಟೆ ರವಾನಿಸಿದಂತಾಗಿದೆ.
ಗಾಯದ ಸಮಸ್ಯೆಯಿಂದಾಗಿ ರಣಜಿ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗಳಿಂದ ಹೊರಗುಳಿದಿದ್ದ ವೇಗಿ ವಿದ್ವತ್ ಕಾವೇರಪ್ಪ ಸಂಭಾವ್ಯರನ್ನು ಸ್ಥಾನ ಪಡೆದಿದ್ದು, ವಿಜಯ್ ಹಜಾರೆ ಟ್ರೋಫಿಯಲ್ಲಿ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಸಿ ಗುಂಪಿನಲ್ಲಿರುವ ಕರ್ನಾಟಕ ತಂಡ ಡಿ.21ರಂದು ಮುಂಬೈ ವಿರುದ್ಧ ಮೊದಲ ಪಂದ್ಯ ಆಡಲಿದೆ. ನಂತರ ಪುದುಚೇರಿ (ಡಿ.23), ಪಂಜಾಬ್ (ಡಿ.26), ಅರುಣಾಚಲಪ್ರದೇಶ (ಡಿ.28), ಹೈದರಾಬಾದ್ (ಡಿ.31), ಸೌರಾಷ್ಟ್ರ (ಜ.3), ನಾಗಾಲ್ಯಾಂಡ್ (ಜ.5) ವಿರುದ್ಧ ಆಡಲಿದೆ.
ಸಂಭಾವ್ಯ ತಂಡ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧ ಕೃಷ್ಣ, ದೇವದತ್ ಪಡಿಕ್ಕಲ್, ಚೇತನ್ ಎಲ್ಆರ್, ಮ್ಯಾಕ್ನೀಲ್ ನೋರೋನ್ಹಾ, ಶ್ರೇಯಸ್ ಗೋಪಾಲ್, ಕೆಎಲ್ ಶ್ರೀಜಿತ್ (ವಿ.ಕೀ), ಅಭಿನವ್ ಮನೋಹರ್, ಮನೋಜ್ ಭಾಂಡಗೆ, ಹಾರ್ದಿಕ್ ರಾಜ್, ವಿ. ಕೌಶಿಕ್, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ, ಅಭಿಲಾಷ್ ಶೆಟ್ಟಿ, ಮೊಹ್ಸಿನ್ ಖಾನ್, ಆರ್. ಸ್ಮರಣ್, ಲವನೀತ್ ಸಿಸೋಡಿಯಾ (ವಿ.ಕೀ), ವೈಶಾಕ್ ವಿ, ಮನ್ವಂತ್ ಕುಮಾರ್ ಎಲ್, ಯಶೋವರ್ಧನ್ ಪರಂತಾಪ್, ಪ್ರವಿಣ್ ದುಬೆ, ಎಂ. ವೆಂಕಟೇಶ್, ನಿಕಿನ್ ಜೋಸ್, ಶಶಿಕುಮಾರ್ ಕೆ, ಪರಸ್ ಗುರ್ಬಕ್ಷ್ ಆರ್ಯ, ಶಿಖರ್ ಶೆಟ್ಟಿ, ಕಿಶನ್ ಎಸ್. ಬಿದರೆ, ಹರ್ಷಿಲ್ ಧರ್ಮಾಣಿ, ವಿದ್ವತ್ ಕಾವೇರಪ್ಪ, ಕೃತಿಕ್ ಕೃಷ್ಣ (ವಿ.ಕೀ).
ಮನೀಷ್ಗೆ ಮುಚ್ಚಿದ ಬಾಗಿಲು?
ಕಳೆದ ಎರಡು ದೇಶೀಯ ಕ್ರಿಕೆಟ್ ಋತುವಿನಿಂದ ತೀವ್ರ ರನ್ಬರ ಎದುರಿಸುತ್ತಿರುವ 35 ವರ್ಷದ ಮನೀಷ್ ಪಾಂಡೆ ಅವರನ್ನು ಕೊನೆಗೂ ಕೈಬಿಡುವ ಮೂಲಕ ಕರ್ನಾಟಕ ಭವಿಷ್ಯದತ್ತ ಗಮನಹರಿಸಿದಂತಾಗಿದೆ. ಇದರೊಂದಿಗೆ ರಾಜ್ಯ ತಂಡದ ಪರ ಅವರ 17 ವರ್ಷಗಳ ವೃತ್ತೀಜಿವನ ಮುಕ್ತಾಯಗೊಂಡಂತಾಗಿದೆ. ಮನೀಷ್ರನ್ನು ಇನ್ನು ರಾಜ್ಯದ ಮೂರೂ ಮಾದರಿಯ ತಂಡಗಳಿಗೂ ಮರುಆಯ್ಕೆಗೆ ಪರಿಗಣಿಸುವುದಿಲ್ಲ ಎಂದು ರಾಜ್ಯ ಆಯ್ಕೆ ಸಮಿತಿ ಅಧ್ಯಕ್ಷ ಜೆ. ಅಭಿರಾಮ್ ಸ್ಪಷ್ಟಪಡಿಸಿದ್ದಾರೆ. ಮನೀಷ್ ಕಳೆದ ರಣಜಿ ಟ್ರೋಫಿ ಮೊದಲ ಹಂತದ 5 ಲೀಗ್ ಪಂದ್ಯಗಳ 6 ಇನಿಂಗ್ಸ್ಗಳಲ್ಲಿ 34.25ರ ಸರಾಸರಿಯಲ್ಲಿ ಕೇವಲ 1 ಅರ್ಧಶತಕ ಸಹಿತ 137 ರನ್ ಮಾತ್ರ ಗಳಿಸಿದ್ದರು. ನಂತರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯ 5 ಪಂದ್ಯಗಳಲ್ಲೂ 29.25ರ ಸರಾಸರಿಯಲ್ಲಿ 117 ರನ್ ಮಾತ್ರ ಗಳಿಸಿದ್ದರು. ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ 75 ಲಕ್ಷ ರೂ. ಮೂಲಬೆಲೆಗೆ ಕೆಕೆಆರ್ ತಂಡಕ್ಕೆ ಮರಳಿರುವ ಮನೀಷ್, ಮುಂದಿನ ವರ್ಷದ ಟೂರ್ನಿಯಲ್ಲಿ ಉತ್ತಮ ನಿರ್ವಹಣೆ ತೋರಿದರಷ್ಟೇ ವೃತ್ತೀಜಿವನವನ್ನು ಇನ್ನೂ ಕೆಲಕಾಲ ವಿಸ್ತರಿಸಲು ಅವಕಾಶ ಲಭಿಸುವ ನಿರೀಕ್ಷೆ ಇದೆ.
*ಮನೀಷ್ ಪಾಂಡೆ ಕರ್ನಾಟಕ ಪರ ಅಮೋ ವೃತ್ತೀಜಿವನ ಕಂಡಿದ್ದಾರೆ. ಅದರಲ್ಲಿ ಅನುಮಾನವೇ ಇಲ್ಲ. ಆದರೆ ಈ ಹಂತದಲ್ಲಿ ಅವರು ಯುವಕರಿಗೆ ದಾರಿ ಬಿಟ್ಟುಕೊಡಬೇಕಾಗಿದೆ. ಪ್ರಖರ್ ಚತುರ್ವೇದಿ, ಅನೀಶ್ವರ್ ಗೌತಮ್, ಕೆವಿ ಅನೀಶ್ರಂಥ ಯುವ ಬ್ಯಾಟರ್ಗಳನ್ನು ಕರ್ನಾಟಕ ಹೊಂದಿದೆ. ಅವರಿಗೂ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕಾಗಿದೆ. ರಣಜಿ ಟ್ರೋಫಿ 2ನೇ ಚರಣದ ಪಂದ್ಯಗಳಿಗೂ ಮನೀಷ್ ರಾಜ್ಯ ತಂಡಕ್ಕೆ ಮರಳುವುದಿಲ್ಲ. ಮನೀಷ್ಗೆ ಕರೆ ಮಾಡಿ ನಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ವಿವರಿಸಿರುವೆ. ಅವರು ಕೋಚ್ ಅಥವಾ ಬೇರಾವುದಾದರೂ ಪಾತ್ರದಲ್ಲಿ ಕರ್ನಾಟಕ ಕ್ರಿಕೆಟ್ನಲ್ಲಿ ಮುಂದುವರಿಯಬೇಕೆಂದು ನಾವು ಬಯಸಿದ್ದೇವೆ.
| ಜೆ. ಅಭಿರಾಮ್, ರಾಜ್ಯ ಆಯ್ಕೆ ಸಮಿತಿ ಅಧ್ಯಕ್ಷ